ಭುಗಿಲೆದ್ದ ಆಕ್ರೋಶ
ದೊಡ್ಡಬಳ್ಳಾಪುರ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸವನ್ನು ತಾಲೂಕಿನ ಟೆರ್ರಾಫಾರ್ಮದಲ್ಲಿ ವಿಲೇವಾರಿ ಮಾಡುತ್ತಿರುವುದರ ವಿರುದ್ಧ ಜನರ ಆಕ್ರೋಶದ ಕಟ್ಟೆ ಒಡೆದಿದೆ.
ಅಲ್ಲದೆ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ಚಿಗರೇನಹಳ್ಳಿ ಮತ್ತು ಹುಸ್ಕೂರು ಬಳಿ ಮತ್ತೆರಡು ಘಟಕಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಬಿಬಿಎಂಪಿ ಮಾಡಿರುವುದರ ವಿರುದ್ಧ ಜನ ತಿರುಗಿಬಿದ್ದಿದ್ದಾರೆ.
ಶನಿವಾರ ಇಲ್ಲಿನ ಹೊಸೂರು-ಸೋಂಪುರ ರಾಷ್ಟ್ರೀಯ ಹೆದ್ದಾರಿ-207ರಲ್ಲಿ ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು, ಚುನಾಯಿತ ಪ್ರತಿನಿಧಿಗಳ ನೇತೃತ್ವದಲ್ಲಿ ಗಂಟೆಗಟ್ಟಲೆ ಹೆದ್ದಾರಿ ತಡೆ ನಡೆಸಲಾಯಿತು. ದೊಡ್ಡಬೆಳವಂಗಲಬ ಬಸ್ ನಿಲ್ದಾಣದ ಬಳಿಯಿಂದ ಆರಂಭವಾದ ಬೃಹತ್ ಪಾದಯಾತ್ರೆ ಟೆರ್ರಾಫಾರ್ಮ ಪ್ರವೇಶಿಸುವ ಮೂಗನಹಳ್ಳಿ ಕ್ರಾಸ್ವರೆಗೆ ನಡೆಯಿತು. ನಂತರ ಮೂಗನಹಳ್ಳಿ ಕ್ರಾಸ್ನಲ್ಲಿ 3 ಗಂಟೆಗಳ ಕಾಲ ಹೆದ್ದಾರಿ ತಡೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಬಿಬಿಎಂಪಿ ದೊಡ್ಡಬಳ್ಳಾಪುರವನ್ನು ಕಸದ ತೊಟ್ಟಿ ಎಂದು ಭಾವಿಸಿದ್ದರೆ ತಪ್ಪು. ರೈತರ, ಸಾರ್ವಜನಿಕರ ಸಹನೆ ಕೆಣಕಿದರೆ ಹುಷಾರ್. ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಅಲ್ಲೇ ಸಂಸ್ಕರಣೆ ಮಾಡಿ. ಅದನ್ನು ಬಿಟ್ಟು ಹಳ್ಳಿಗಾಡಿನ ಸಂಸ್ಕೃತಿ, ನೆಲ-ಜಲ ಮತ್ತು ಪರಿಸರವನ್ನು ಹಾಳು ಮಾಡುವುದ ದುಸ್ಸಾಹಸ ಮಾಡಬೇಡಿ. ಇಲ್ಲಿನ ಕೆಲವರು ಕೂಡ ದಲ್ಲಾಳಿಗಳ ಕೆಲಸ ಮಾಡಿ ರೈತರ ಬದುಕನ್ನು ಕಿತ್ತುಕೊಂಡಿದ್ದಾರೆ. ಕೆಲವರು ಬಿಬಿಎಂಪಿ ಗುತ್ತಿಗೆದಾರರಿಂದ ಲಂಚ ಪಡೆದು ಇಂತಹ ನಿಚ ಕೃತ್ಯಕ್ಕೆ ಭೂಮಿಯನ್ನು ಕೊಡಿಸುವ ಮತ್ತು ಕೊಡುವ ಕೆಲಸ ಮಾಡಿದ್ದಾರೆ. ಇಂತಹವರಿಗೆ ಜನರ ಶಾಪ ತಟ್ಟದಿರದು ಎಂದು ಕಿಡಿ ಕಾರಿದರು.
ಅವಕಾಶ ಕೊಡಲ್ಲ: ಯಾವುದೇ ಕಾರಣಕ್ಕೂ ಬಿಬಿಎಂಪಿಯ ಒಂದೇ ಒಂದು ಲಾರಿ ಕಸ ಕೂಡ ಟೆರ್ರಾಫಾರ್ಮ ಪ್ರವೇಶಿಸಲು ಬಿಡೋದಿಲ್ಲ. ಜೊತೆಗೆ ಪ್ರಸ್ತಾವಿತ ಯೋಜನೆಗಳನ್ನು ಕೈಬಿಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು. ಪ್ರತಿ ಹಳ್ಳಿ ಮನೆಮನೆಯಿಂದ ರೈತರು, ರೈತ ಮಹಿಳೆಯರು ಬೀದಿಗಿಳಿಯಲಿದ್ದಾರೆ. ಇಲ್ಲಿ ತಂದು ಸುರಿಯುವ ಕಸವನ್ನು ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂದೆ ಸುರಿದು ಪ್ರತಿಭಟಿಸಲೂ ಸಿದ್ಧ ಎಂದು ಎಚ್ಚರಿಕೆ ನೀಡಿದರು.
ಸಂಚಾರ ಅಸ್ತವ್ಯಸ್ತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಪ್ರತಿಭಟನೆ ನಡೆದ ಕಾರಣ ಸಂಚಾರ ಅಸ್ತವ್ಯಸ್ತವಾಗಿತ್ತು. ತಮಿಳುನಾಡಿನ ಹೊಸೂರು, ಆಂಧ್ರಪ್ರದೇಶದ ತಿರುಪತಿ, ರಾಜ್ಯದ ಕೋಲಾರ, ದೇವನಹಳ್ಳಿ, ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವೆಡೆಗೆ ತೆರಳುವ ಪ್ರಯಾಣಿಕರು, ಬೃಹತ್ ಸರಕು ಸಾಗಾಣಿಕೆ ಲಾರಿಗಳು ರಸ್ತೆ ಬಂದ್ ಆಗಿದ್ದರಿಂದ ಹಳ್ಳಿಗಾಡಿನ ಮಾರ್ಗದಲ್ಲಿ ಸಂಚರಿಸುವುದು ಅನಿವಾರ್ಯವಾಯಿತು.
ಪ್ರಮಾಣ ಮಾಡಿ: ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಬರಬೇಕು. ಸ್ಥಳೀಯ ಗ್ರಾಮಗಳಲ್ಲಿ ಆಗುತ್ತಿರುವ ಅನಾಹುತಗಳನ್ನು ಗಮನಿಸಬೇಕು. ಇಲ್ಲಿನ ಪರಿಸರ ಹಾಳಾಗಿರುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲು ಅವರಿಗೆ ಸಾಧ್ಯವಿದೆಯೇ ಎಂಬುದನ್ನು ಆಲೋಚಿಸಬೇಕು. ಈ ಕ್ಷಣದಿಂದಲೇ ಘಟಕಕ್ಕೆ ಕಸದ ಲಾರಿಗಳು ಬರದಂತೆ ತಡೆಯಬೇಕು. ಈ ಬಗ್ಗೆ ಜನರ ಮುಂದೆ ಪ್ರಮಾಣ ಮಾಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ಕೈಬಿಡಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು, ಬಿಬಿಎಂಪಿ, ಗುತ್ತಿಗೆದಾರರು ಮತ್ತು ಟೆರ್ರಾಫಾರ್ಮ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಾರದ ಬಿಜೆಪಿ ಮುಖಂಡರು: ಶನಿವಾರ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಕೆಲ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಆದರೆ ಬಿಜೆಪಿ ಮಾತ್ರ ಪ್ರತಿಭಟನೆಯಿಂದ ದೂರ ಉಳಿದಿತ್ತು. ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಪ್ರತಿಬಾರಿ ಕಸವಿಲೇವಾರಿ ವಿಚಾರ ಬಂದಾಗ ಖಂಡಿಸುತ್ತಲೇ ಬಂದಿದ್ದು, ಈಗ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ. ಅದೇ ರೀತಿ ಕನ್ನಡಪಕ್ಷ, ಸಿಪಿಎಂ, ಬಿಎಸ್ಪಿ ಸಕ್ರಿಯ ಪಾಲ್ಗೊಳ್ಳುವಿಕೆ ಇರಲಿಲ್ಲ. ಗ್ರಾಮಾಂತರ ಪ್ರದೇಶದ ಜನಕ್ಕಿಂತ ನಗರದ ಜನರೇ ಹೆಚ್ಚಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

