ಬೆಂಗಳೂರು ಗ್ರಾಮಾಂತರ

ಮನೆ ಮನೆಗೆ ಸ್ಟಿಕ್ಕರ್: ವಿನೂತನ ಕಾರ್ಯಕ್ರಮ

Published On :

ರಾಮನಗರ: ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ (ಸ್ವೀಪ್) ಕಾರ್ಯಕ್ರಮದಡಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸಂಬಂಧ ಜಾಗೃತಿ ಮೂಡಿಸಲು ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ವಿನೂತನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ.  
ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಏ.17ಕ್ಕೆ ನಡೆಯುವ ಲೋಕಸಭೆ ಮಹಾ ಸಮರಕ್ಕೆ ಜಿಲ್ಲಾಡಳಿತ ಸಿದ್ಧವಾಗಿದೆ. ಇದರಡಿ ಸ್ವೀಪ್ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುವ ನಿಟ್ಟಿನಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಯಿತು.
ಮತದಾರರನ್ನು ಜಾಗೃತಿಗೊಳಿಸಿ ಮತದಾನ ಪ್ರಮಾಣ ಹೆಚ್ಚಿಸುವುದು, 18 ವರ್ಷ ತುಂಬಿರುವ ಯುವ ಮತದಾರರು ಮತ್ತು ಮತದಾರರ ಪಟ್ಟಿಗೆ ಇದುವರೆಗೆ ಹೆಸರು ಸೇರ್ಪಡೆ ಮಾಡಿಕೊಳ್ಳದವರಲ್ಲಿ ಜಾಗೃತಿ ಮೂಡಿಸಿ, ಹೆಸರು ಸೇರಿಸಿಕೊಳ್ಳಲು ಉತ್ತೇಜಿಸುವುದು ಕಾರ್ಯಕ್ರಮದ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.
ಉತ್ತಮ ಸಾಧನೆಯ ಗುರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವೀಪ್ ವಿಶೇಷ ಕಾರ್ಯ ಚಟುವಟಿಕೆಗಳ ಮೂಲಕ ಜಿಲ್ಲೆಯು ರಾಜ್ಯದಲ್ಲಿಯೇ ಮತದಾನ ಪ್ರಮಾಣದಲ್ಲಿ 2ನೇ ಸ್ಥಾನಗಳಿಸಿತ್ತು. ಪ್ರಸಕ್ತ ಚುನಾವಣೆಯಲ್ಲಿ ಪ್ರಥಮ ಸ್ಥಾನಕ್ಕೆ ಬರಲು ಜಿಲ್ಲಾಡಳಿತ ಹಾಗೂ ಜಿ.ಪಂ. ಗಂಭೀರ ಪ್ರಯತ್ನಗಳಿಗೆ ಚಾಲನೆ ನೀಡಿದೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಆಯೋಜಿಸಲಾಗುತ್ತಿದೆ.
2 ಹಂತದ ಕಾರ್ಯಕ್ರಮ : ಮೊದಲ ಹಂತದ ಕಾರ್ಯಕ್ರಮ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಕೊನೆಯ ದಿನವಾದ ಮಾ.16 ರವರೆಗೆ ಹಾಗೂ 2ನೇ ಹಂತದ ಕಾರ್ಯಕ್ರಮಗಳನ್ನು ಮತದಾರರ ಪಟ್ಟಿ ಸೇರ್ಪಡೆ ಪ್ರಕ್ರಿಯೆ ಮುಗಿದ ಬಳಿಕ ಕೈಗೊಳ್ಳಲಾಗುತ್ತಿದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
ಮೊದಲನೇ ಹಂತದ ಕಾರ್ಯಕ್ರಮದಲ್ಲಿ ಹೆಸರು ನೋಂದಾಯಿಸಲು ಜಿಲ್ಲಾ ವ್ಯಾಪ್ತಿಯ ಪದವಿ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಕೈಗಾರಿಕಾ ಪ್ರದೇಶಗಳ ಕಾರ್ಮಿಕರು, ಅಲೆಮಾರಿ ಜನಾಂಗದವರು, ನಗರ ಪ್ರದೇಶಗಳ ಸುಶಿಕ್ಷಿತರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.
ಮಾ.15ಕ್ಕೆ ಜಾಥಾ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಸ್ಕೌಟ್ಸ್,  ಹಾಸ್ಟೆಲ್ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಮಾ.15ರಂದು ಬೆಳಗ್ಗೆ 9.30ಕ್ಕೆ ಜಾಗೃತಿ ಜಾಥಾ ಏರ್ಪಡಿಸಲಾಗಿದೆ. ಅಂಬೇಡ್ಕರ್ ಭವನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಜಾಥಾ ನಡೆಯಲಿದೆ ಎಂದು ಅವರು ವಿವರಿಸಿದರು.
ಬಸ್ ನಿಲ್ದಾಣ, ರೈಲು ನಿಲ್ದಾಣಗಳು, ಕಾಲೇಜುಗಳು, ಹಾಸ್ಟೆಲ್‌ಗಳಲ್ಲಿ ಮತದಾರರ ಸೇರ್ಪಡೆಗೆ ನಮೂನೆ 6ನ್ನು ವಿತರಿಸಿ ಸೇರ್ಪಡೆಗೊಳಿಸಲಾಗುತ್ತಿದೆ. ಇದಕ್ಕಾಗಿ ಡಿಡಿಪಿಐ, ಡಿಡಿಪಿಯು, ಸಮಾಜ ಕಲ್ಯಾಣ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ವೆಂಕಟೇಶ್ ಹೇಳಿದರು.
ಮತದಾನಕ್ಕೆ ಪ್ರೇರಣೆ: ಎರಡನೇ ಹಂತದಲ್ಲಿ ಮತದಾರರನ್ನು ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯುವಂತೆ ಮಾಡಲು ಉತ್ತೇಜಿಸಲಾಗುವುದು. ಕಂದಾಯ ಇಲಾಖೆಯ ಭೂಮಿ, ಬೆಸ್ಕಾಂನ ವಿದ್ಯುತ್ ಬಿಲ್, ಆಸ್ಪತ್ರೆಗಳ ವೈದ್ಯ ಸಲಹಾ ಚೀಟಿ, ಇತ್ಯಾದಿಗಳಲ್ಲಿ ರಬ್ಬರ್ ಸ್ಟಾಂಪ್‌ಗಳನ್ನು ಬಳಸಿ ಜಾಗೃತಿ ಮೂಡಿಸಲಾಗುವುದು.
ಕಳೆದ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಮತದಾನ ಕಡಿಮೆಯಾಗಿರುವ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿ ಮತದಾನ ವಿಶೇಷ ಜಾಗೃತಿ ಆಂದೋಲನ ಕೈಗೊಳ್ಳಲಾಗುವುದು. ಆಶಾ ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಗುಂಪುಗಳನ್ನು ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.  
9ರಂದು ಮಾನವ ಸರಪಳಿ : ರಾಮನಗರದ ಜನಪದ ಲೋಕದಿಂದ ಚನ್ನಪಟ್ಟಣದವರೆಗೆ ಮಾ.9 ರಂದು ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ., ಎನ್‌ಎಸ್‌ಎಸ್ ಪ್ರತಿನಿಧಿಗಳು ಮುಂತಾದವರನ್ನು ಬಳಸಿಕೊಂಡು ಮಾನವ ಸರಪಳಿಯನ್ನು ನಿರ್ಮಿಸಲಾಗುತ್ತಿದೆ ಎಂದರು.
ರಂಗೋಲಿ ಸ್ಪರ್ಧೆ: 18 ವರ್ಷ ತುಂಬಿರುವ ಯುವ ಮತದಾರರು ಹಾಗೂ ಎಪಿಕ್ ಕಾರ್ಡ್ ಹೊಂದಿರುವ ಮತದಾರರಿಗಾಗಿ ರಂಗೋಲಿ ಸ್ಪರ್ಧೆಗಳನ್ನು ಮಾ.16ರ ನಂತರ ಪ್ರತಿದಿನವೂ ನಗರದ ಅಂಬೇಡ್ಕರ್ ಭವನ ಹಾಗೂ ಗುರುಭವನದಲ್ಲಿ ಆಯೋಜಿಸಲಾಗುವುದು.  
ಸರ್ಕಾರಿ ಅಧಿಕಾರಿಗಳು ನೌಕರರು ಮತ್ತು ಕುಟುಂಬದವರು ಕಡ್ಡಾಯವಾಗಿ ಮತದಾನ ಮಾಡುವಂತೆ ಈಗಾಗಲೇ ತಿಳವಳಿಕೆ ನೀಡಲಾಗಿದೆ. ಶೇಕಡ 100ರಷ್ಟು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿಗೆ ಪ್ರಶಂಸನ ಪತ್ರ ನೀಡಲಾಗುವುದು.
ಶೇ.80ರ ಗುರಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಶೇಕಡ 80ರಷ್ಟು ಮತ ಚಲಾವಣೆಯಾಗಬೇಕೆನ್ನುವ ಗುರಿ ಜಿಲ್ಲಾಡಳಿತದ್ದಾಗಿದೆ. ಮತದಾನ ಪ್ರಕ್ರಿಯೆಗೆ ನಕರಾತ್ಮಕ ಭಾವನೆ ಬೇಡ. ಮತದಾರರಲ್ಲಿ ಜಾಗೃತಿ ಮೂಡಿಸಿ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಪೂರಕವಾಗುವಂತೆ ಹಾಗೂ ರಾಜಕೀಯ ವ್ಯವಸ್ಥೆಯ ಸುಧಾರಣೆಗೆ ಸ್ವೀಪ್ ಸಮಿತಿಯು ಕಾರ್ಯೋನ್ಮುಖವಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಮೀದ್ ಖಾನ್, ಜಿಪಂ ಸಿಪಿಓ ಧನುಷ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ, ನಗರಸಭೆ ಆಯುಕ್ತ ಯಶವಂತ್, ಸಮಗ್ರ ಶಿಕ್ಷಣಾಧಿಕಾರಿ ಸೀತಾರಾಂ, ಬಿಸಿಎಂ ಅಧಿಕಾರಿ ಸುಮಯ ರೂಹಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎಸ್.ಎಂ. ಚಂದ್ರ, ಪ್ರಾಂಶುಪಾಲ ಪ್ರೊ.ರಂಗಸ್ವಾಮೇಗೌಡ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.