ಬೆಂಗಳೂರು ಗ್ರಾಮಾಂತರ

ಕಾಂಚಾಣದ ಜತೆಗೆ ದೇವರ ಆಟ..!

Published On :

ರಾಮನಗರ : ಚುನಾವಣೆಯಲ್ಲಿ ಕುರುಡು ಕಾಂಚಾಣದ ನರ್ತನದ ಜತೆಗೆ ದೇವರ ಆಟವೂ ನಡೆದಿದೆ. ಮಾಗಡಿಯ ಫಲಿತಾಂಶ ಶನಿಪ್ರಭಾವದ ಫಲವಾದರೆ, ಚನ್ನಪಟ್ಟಣದಲ್ಲಿ ಗೆಲವು ನಿರ್ಣಯಿಸಿರುವುದು ಶ್ರೀ ಮಂಜುನಾಥನ ಮಹಿಮೆ
 ಈಗಿನ ಚುನಾವಣೆ ಎಂದ ಮೇಲೆ ಹಣ ಮತ್ತು ಬಳವಳಿ ನಿರ್ಣಾಯಕ ಆಗುವುದು ಮಾಮೂಲು. ದೇವರ ಆಟ ನಡೆದಿದ್ದಾದರೂ ಹೇಗೆನ್ನುವ ಕುತೂಹಲ ಕೆರಳುವುದು ಸಹಜ. ಆದರೆ, ಇಲ್ಲಿ ದೇವರ ಆಟ ಖಂಡಿತ ನಡೆದಿದೆ. ಹೇಗೆನ್ನುವುದನ್ನು ನೀವೇ ನೋಡಿ.  
ಹೀಗೆ ಹಣ, ಬಳುವಳಿಗಳ ಜತೆಗೆ ದೇವರ ಆಟದ ಫಲಿತಾಂಶಕ್ಕೆ ಸಾಕ್ಷಿಯಾಗಿದ್ದು ಭಾನುವಾರವಷ್ಟೇ ನಡೆದ ಬಮೂಲ್ ಚುನಾವಣೆ. ಅದರಲ್ಲೂ ಚನ್ನಪಟ್ಟಣ ಮತ್ತು ಮಾಗಡಿಯ ಜಿದ್ದಾಜಿದ್ದಿನ ಅಖಾಡದಲ್ಲಿ ಅಭ್ಯರ್ಥಿಗಳು ಗೆಲವಿಗಾಗಿ ಮಾಡದ ಕಸರತ್ತು, ಆಡದ ಆಟವೇ ಇಲ್ಲ.
ದೇವರ ಮೇಲೆ ಆಣೆ ಮಾಡಿಸಿ ಹಣ ನೀಡಿದರೆ ಕೊಟ್ಟ ಮಾತಿನಂತೆ ನಡೆಯುತ್ತಾರೆ ಎನ್ನುವ ನಂಬಿಕೆ ಇನ್ನೂ ಬಲವಾಗಿದೆ. ಅದರಲ್ಲೂ ಪವರ್‌ಫುಲ್ ದೇವರ ಮೇಲೆ ಆಣೆ ಮಾಡಿಸಿದರೆ, ಖಂಡಿತ ಫಲ ನೀಡುತ್ತದೆ ಎನ್ನುವ ಅಚಲ ನಂಬಿಕೆಯಿಟ್ಟ ಅಭ್ಯರ್ಥಿಗಳಿಲ್ಲಿ ಫಲ ಉಂಡಿದ್ದಾರೆ.
ಶನಿಪ್ರಭಾವ ಹೀಗೆ: ಮಾಗಡಿಯಲ್ಲಿ ಗೆದ್ದಿರುವ ನರಸಿಂಹಮೂರ್ತಿ ನೂರಕ್ಕೂ ಹೆಚ್ಚು ಮತದಾರರನ್ನು ವಿವಿಧೆಡೆ ಪ್ರವಾಸಕ್ಕೆ ಕರೆದೊಯ್ದಿದ್ದರು. ಅವರು ಮತದಾರರಿಗೆ ಮಧುರೈನಲ್ಲಿ ಶ್ರೀ ಶನಿಮಹಾತ್ಮನ ದರ್ಶನ ಮಾಡಿಸಿದ್ದರು. ಯಾವುದಕ್ಕೂ ಇರಲೆಂದು ಇನ್ನೂರು ಶನಿದೇವರ ಫೋಟೋ ತಂದಿದ್ದರು.
ಪ್ರವಾಸವನ್ನೆಲ್ಲಾ ಮುಗಿಸಿ ಮತದಾರರನ್ನು ಮತದಾನಕ್ಕೆ ಮುನ್ನಾ ದಿನ ರೆಸಾರ್ಟ್ ಒಂದರಲ್ಲಿ ಇರಿಸಿದ್ದರು. ಅಲ್ಲೇ ಹಣ ಬಟಾವಡೆಯು ಕ್ಷೇತ್ರದ ಘಟಾನುಘಟಿ ನಾಯಕರ ಸಮಕ್ಷವೇ ನಡೆದಿತ್ತು. ಹಣದ ಜತೆ ಶನಿ ದೇವರ ಫೋಟೋ ನೀಡಿ, ಆಣೆ ಮಾಡಿಸಿದ್ದರು. ಅದು ಫಲ ನೀಡಿದೆ.
ಮಂಜುನಾಥ ಮಹಿಮೆ: ಆದರೆ, ಚನ್ನಪಟ್ಟಣದಲ್ಲಿ ಪರಾಜಿತ ಅಭ್ಯರ್ಥಿ ಎಸ್.ಲಿಂಗೇಶ್ ಕುಮಾರ್ ತಮ್ಮ ಜತೆ ದೊಡ್ಡ ಪ್ರಮಾಣದಲ್ಲಿ ಮತದಾರರನ್ನಿಟ್ಟುಕೊಂಡು ಶಕ್ತಿ ಪ್ರದರ್ಶಿಸುತ್ತಲೇ ಬಂದಿದ್ದರು. ಜಿದ್ದಿಗೆ ಬಿದ್ದ ಪ್ರತಿಸ್ಪರ್ಧಿ ಜಯಮುತ್ತು ಗೆದ್ದು ಬೀಗಲು ನೆರವಾಗಿದ್ದೇ ಧರ್ಮಸ್ಥಳದ ಶ್ರೀ ಮಂಜುನಾಥ ಮಹಿಮೆ.
ಕೇಳಿದಷ್ಟು ಹಣ ಕೊಟ್ಟ ಜಯಮುತ್ತು ಅದಕ್ಕೆ ಮತದಾರರಿಂದ ರಶೀದಿಯಾಗಿ ಬಯಸಿದ್ದು, ಮತ ಹಾಕುತ್ತೇನೆಂದು ಶ್ರೀ ಮಂಜುನಾಥನ ಫೋಟೋ ಮೇಲೆ ಪ್ರಮಾಣ ಮಾಡಬೇಕೆನ್ನುವುದನ್ನಷ್ಟೇ. ಕೆಲ ಮತದಾರರು
ಖುದ್ದು, ಇಲ್ಲವೇ ಕುಟುಂಬದವರ ಮೂಲಕ ಪ್ರಮಾಣ ಮಾಡಿಸಿ ಹಣ ಪಡೆದು ಮತ ಹಾಕಿದ್ದಾರೆ.
ಗದ್ದುಗೆಗಾಗಿ ಗುದ್ದಾಟ: ಬಮೂಲ್ ಆಡಳಿತ ಮಂಡಳಿಯ 12 ಸ್ಥಾನಗಳ ಪೈಕಿ ರಾಮನಗರ ಜಿಲ್ಲೆ ಪಾಲು 4 ಸ್ಥಾನಗಳು. ಇದರಲ್ಲಿ ರಾಮನಗರ, ಕನಕಪುರದಲ್ಲಿ ಅವಿರೋಧ ಆಯ್ಕೆ ನಡೆದಿದೆ. ಮಾಗಡಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್, ಚನ್ನಪಟ್ಟಣದಲ್ಲಿ ಜೆಡಿಎಸ್ ಇಬ್ಬಣಗಳ ಕದನ ಕುತೂಹಲ ಕೆರಳಿಸಿತ್ತು. ಮಾಗಡಿ ಕ್ಷೇತ್ರದ ಮತದಾರರು 220 ಮತ್ತು ಚನ್ನಪಟ್ಟಣದಲ್ಲಿ ಚಲಾವಣೆಗೊಂಡ ಮತಗಳು 134 ಮಾತ್ರ. ಇಷ್ಟಾದರೂ ಉಭಯ ಕ್ಷೇತ್ರಗಳಲ್ಲಿ ಅಭ್ಯರ್ಥಿಯೊಬ್ಬರ ತಲಾವಾರು ವೆಚ್ಚವು ಲೋಕಸಭೆ ಚುನಾವಣೆ ಅಭ್ಯರ್ಥಿ ವಿಧಾನಸಭಾ ಕ್ಷೇತ್ರವಾರು ಹೂಡಿದ ಬಂಡವಾಳಕ್ಕಿಂತ ಜೋರು.

ಸಿಕ್ಕಷ್ಟು ಬಾಚಿದರು
ಚನ್ನಪಟ್ಟಣದಲ್ಲಿ ಮತದಾರರಿಗೆ ಒಬ್ಬ ಅಭ್ಯರ್ಥಿ ತಲಾ ರು.2 ಲಕ್ಷದವರೆಗೆ ನಗದು, ರೇಷ್ಮೆ ಸೀರೆ, 1 ಕೆಜಿ ಬೆಳ್ಳಿ ಸಾಮಗ್ರಿ ನೀಡಿದರು. ಮತ್ತೊಬ್ಬ ಅಭ್ಯರ್ಥಿ ರು.1 ಲಕ್ಷ ನಗದು ನೀಡಿ ಭರ್ಜರಿ ಔತಣ ನೀಡಿದ್ದರು. ಇದಲ್ಲದೆ ಪ್ರವಾಸದ ಮೋಜು ಆಯೋಜನೆಗೊಂಡಿತ್ತು. ಅದೇ ರೀತಿ ಮಾಗಡಿಯಲ್ಲಿ ಒಬ್ಬ ಅಭ್ಯರ್ಥಿ ರು.45 ಸಾವಿರ ನಗದು ನೀಡಿದರೆ, ಮತ್ತೊಬ್ಬ ಪ್ರತಿಸ್ಪರ್ಥಿಯು ರು.22 ಸಾವಿರದ ಟಿವಿ ಇಲ್ಲವೇ 10 ಗ್ರಾಂ ಚಿನ್ನದ ಸರ ಮತ್ತು ರು.20 ಸಾವಿರ ನಗದು ನೀಡಿದ್ದರು. ಬಹುತೇಕ ಮತದಾರರು ಸಿಕ್ಕಿದ್ದೇ ಅವಕಾಶ ಎಂದು ಎರಡೂ ಕಡೆಯಿಂದ ಬಾಚಿಕೊಂಡರು.

ಜತೆಗಾರರೇ ಬೆನ್ನಿಗಿರಿದರು
ಚನ್ನಪಟ್ಟಣದಲ್ಲಿ ಲಿಂಗೇಶ್ ಕುಮಾರ್ ಅವರಿಗೆ ಅತಿಯಾದ ಆತ್ಮವಿಶ್ವಾಸವೇ ಮುಳುವಾಗಿದೆ. ಸ್ಪರ್ಧಾ ಕಣಕ್ಕೆ ಇಳಿಯುವ ಮುಂಚಿನಿಂದ ಜತೆಗಿದ್ದು, ಸಾಕಷ್ಟು ಲಾಭ ಮಾಡಿಕೊಂಡ ಕೆಲ ಮತದಾರರು ಹಣದಾಸೆಯಿಂದ ರಾತ್ರೋರಾತ್ರಿ ಬದಲಾಗಿ ಬೆನ್ನಿಗೆ ಇರಿದಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ದೇವೇಗೌಡರ ಆದೇಶವನ್ನೂ ಧಿಕ್ಕರಿಸಿ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಸಹಿತ ದಳಪತಿಗಳು ಜೆಡಿಎಸ್ ಅಧಿಕೃತ ಅಭ್ಯರ್ಥಿ ಲಿಂಗೇಶ್ ಕುಮಾರ್ ಅವರಿಗೆ ಖೆಡ್ಡ ತೋಡಿದ್ದಾರೆ. ವಿಜೇತ ಅಭ್ಯರ್ಥಿ ಜಯಮುತ್ತು  ಶಾಸಕಯೋಗೇಶ್ವರ್ ಅಭಯವೂ ಸಿಕ್ಕಿದೆ.

ಜಯಮುತ್ತು ನಡೆ ಎತ್ತ ?
ಚನ್ನಪಟ್ಟಣದಲ್ಲಿ ಲಿಂಗೇಶ್ ಕುಮಾರ್ ಅವರಿಗೆ ಅತಿಯಾದ ಆತ್ಮವಿಶ್ವಾಸವೇ ಮುಳುವಾಗಿದೆ. ಸ್ಪರ್ಧಾ ಕಣಪತಿಗಳು ಜೆಡಿಎಸ್ ಅಧಿಕೃತ ಅಭ್ಯರ್ಥಿ ಲಿಂಗೇಶ್ ಕುಮಾರ್ ಅವರಿಗೆ ಖೆಡ್ಡ ತೋಡಿದ್ದಾರೆ. ವಿಜೇತ ಅಭ್ಯರ್ಥಿ ಜಯಮುತ್ತು ಅವರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಅಭಯವೂ ಸಿಕ್ಕಿದೆ.

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.