ಬಳ್ಳಾರಿ

ಇಂದು ಸಾಹಿತ್ಯ ಕಾರ್ಯಕ್ರಮ

Published On :

ಕೊಟ್ಟೂರು:  ಕನ್ನಡ ಸಾಹಿತ್ಯ ಪರಿಷತ್ ಕೊಟ್ಟೂರು ಹೋಬಳಿ ಘಟಕ ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಸಹಕಾರದೊಂದಿಗೆ ಇಲ್ಲಿನ ಗಂಗೋತ್ರಿ ಮಹಾವಿದ್ಯಾಲಯದಲ್ಲಿ ಫೆ. 3ರ ಸೋಮವಾರ ಜಾನಪದ ಸಾಹಿತ್ಯ ಮತ್ತು ಆನಂದ ಕಂದರು ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಹಿತಿ ಕುಂ. ವೀರಭದ್ರಪ್ಪ ಪಾಲ್ಗೊಳ್ಳಲಿದ್ದು, ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಎಂ.ಎಂ.ಜೆ. ಸತ್ಯಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷ ಎಸ್.ಎಂ. ಗುರುಪ್ರಸಾದ್, ಚಟ್ರಕಿ ಬಸವರಾಜ್, ಅಂಚೆ ಕೊಟ್ರೇಶ್, ವಿಶ್ವನಾಥ ಅಡಿಗ, ಎನ್.ಎಂ. ಕೊಟ್ರೇಶ್, ಕಲ್ಲೇಶಪ್ಪ, ಎಸ್.ಡಿ. ಈರಗಾರ ದೇವರಮನಿ ಕರಿಯಪ್ಪ, ಎ. ತಿಪ್ಪೇಸ್ವಾಮಿ, ದೇವರಮನಿ ಕೊಟ್ರೇಶ್, ಟಿ.ಎಂ. ಸಣ್ಣಕೊಟ್ರಯ್ಯ, ವೆಂಕಟೇಶ್ ನಾಯ್ಕ, ಸಿದ್ದೇಶ್ ಗಡಿಮಾಕುಂಟೆ ಭಾಗವಹಿಸುವರು ಎಂದು ಹೋಬಳಿ ಘಟಕದ ಅಧ್ಯಕ್ಷೆ ನಿರ್ಮಲಾ ಶಿವನಗುತ್ತಿ, ಕಾರ್ಯದರ್ಶಿ ಅರುಣಾ ಕೊಟ್ರೇಶ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸಹಾಯ ಹಸ್ತ: ಜಾಗೃತಿ
ಹೂವಿನಹಡಗಲಿ: ರಾಜ್ಯದಲ್ಲಿ ಯುವ ಕಾಂಗ್ರೆಸ್ ಘಟಕಗಳ ವತಿಯಿಂದ ವಿದ್ಯಾ ಸಹಾಯ ಹಸ್ತ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಸರ್ವ ಶಿಕ್ಷಣ ಅಭಿಯಾನದಡಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕುರಿತು ಜನ ಜಾಗೃತಿ ಮೂಡಿಸುತ್ತಿದ್ದೇವೆಂದು ಯುವ ಕಾಂಗ್ರೆಸ್ ಅಧ್ಯಕ್ಷ ಹಣ್ಣಿ ಅಶೋಕ್, ಉಪಾಧ್ಯಕ್ಷ ಎಂ. ಗಿರಿರಾಜ ತಿಳಿಸಿದ್ದಾರೆ. ಆದಾಯ, ಜಾತಿ, ವಿಳಾಸ ದೃಢೀಕರಣ ಪ್ರಮಾಣ ಪತ್ರ, ಭಾವಚಿತ್ರ ಕಡ್ಡಾಯವಾಗಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಜ. 27ರಿಂದ ಫೆ. 8ರ ವರೆಗೆ ನಡೆಯಲಿರುವ ವಿದ್ಯಾ ಸಹಾಯ ಹಸ್ತ ಜಾಗೃತಿ ಕಾರ್ಯಕ್ರಮಕ್ಕೆ ಎಲ್ಲ ಪ್ರಮಾಣ ಪತ್ರಗಳನ್ನು ವಿಳಂಬ ಮಾಡದೆ ನೀಡಬೇಕೆಂದು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೈನಿಕ ಪಾಸ್: ವಿಸ್ತರಣೆ
ಬಳ್ಳಾರಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಮಿತವ್ಯಯಕರ ದರದಲ್ಲಿ ಪ್ರಯಾಣ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಳ್ಳಾರಿ ನಗರ ಸಾರಿಗೆ ಪ್ರಯಾಣಿಕರಿಗಾಗಿ ದೈನಿಕ ಪಾಸುಗಳನ್ನು ನೀಡುತ್ತಿದ್ದು, ಇದೀಗ ಈ ಸೌಲಭ್ಯ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ತಿಳಿಸಿದ್ದಾರೆ. ಗ್ರಾಮಾಂತರ ದೈನಿಕ ಪಾಸುಗಳನ್ನು ಸಾರಿಗೆ ನಿರ್ವಾಹಕರ ಮೂಲಕ ಪಡೆಯಬಹುದು. ಸಾರ್ವಜನಿಕರು ದೈನಿಕ ಪಾಸುಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವಂತೆ ನಿರ್ವಾಹಕರು ಇಟಿಎಂ ಮೂಲಕ ಪಾಸುಗಳನ್ನು ವಿತರಿಸುತ್ತಾರೆ. ಬಳ್ಳಾರಿ ನಗರ ಸಾರಿಗೆಯ ದೈನಿಕ ಪಾಸಿನ ದರ ರು. 20 ಹಾಗೂ ಹೊಸಪೇಟೆ ನಗರ ಸಾರಿಗೆಗೆ ರು. 15 ನಿಗದಿಪಡಿಸಲಾಗಿದೆ. ಪ್ರಯಾಣಿಕರು ಪಾಸನ್ನು ತಾವು ಪ್ರಯಾಣಿಸುವ ಬಸ್ಸಿನಲ್ಲಿಯೇ ಪಡೆಯಬಹುದು. ಪಾಸು ಪಡೆದವರು ಆ ದಿನದ ಮಧ್ಯರಾತ್ರಿವರೆಗೂ ನಗರ ಸಾರಿಗೆ ವಾಹನಗಳಲ್ಲಿಯೂ ಸಹ ಪ್ರಯಾಣಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ಶಿಕ್ಷಣ ನಗರೀಕೃತ: ಕುಂವೀ ಬೇಸರ
ಕುಷ್ಟಗಿ: ಇತ್ತೀಚೆಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ ನಗರೀಕೃತವಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕುಂ. ವೀರಭದ್ರಪ್ಪ ವಿಷಾದಿಸಿದರು. ಇಲ್ಲಿನ ವಿಜಯ ಚಂದ್ರಶೇಖರ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಮಕ್ಕಳಿಗೆ ತಮ್ಮ ಭವಿಷ್ಯದ ಮೌಲ್ಯ ಹೆಚ್ಚಿಸಿಕೊಳ್ಳುವ ಶಿಕ್ಷಣ ಕೊಡುವುದು ಅಗತ್ಯವಿದೆ. ನಗರ ಮತ್ತು ಗ್ರಾಮೀಣ ಪ್ರದೇಶ ಒಳಗೊಂಡು ಎಲ್ಲ ಮಕ್ಕಳಿಗೆ ಬದುಕು ಪ್ರೀತಿಸುವ ಶಿಕ್ಷಣ ನೀಡಬೇಕು. ಶಾಲಾ ಪಠ್ಯಕ್ರಮದಲ್ಲೇ ಪಠ್ಯೇತರ ಚಟುವಟಿಕೆಯನ್ನೂ ಸೇರಿಸಬೇಕು. ಮಕ್ಕಳಿಗೆ ನೀಡುವ ಶಿಕ್ಷಣ ಹೇರಿಕೆ ಆಗಬಾರದು. ನಮ್ಮ ನಾಡು, ಸಂಸ್ಕೃತಿ, ಪರಿಸರ ಪ್ರೀತಿಸುವ ಸ್ಥಿತಿ ನಿರ್ಮಾಣ ಮಾಡಬೇಕು ಎಂದರು. ಮಾಜಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ವಿಸಿ ಸಂಸ್ಥೆಯ ಅಧ್ಯಕ್ಷ ಸಿ.ವಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಎನ್.ಬಿ. ಪಾಟೀಲ್, ಎಸ್‌ವಿಸಿ ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀದೇವಿ ಚಂದ್ರಶೇಖರ್, ನಿರ್ದೇಶಕರಾದ ನಾಗೇಂದ್ರಪ್ಪ, ಲಿಂಗನಗೌಡ ಪಾಟೀಲ್, ವಿಶ್ವನಾಥ ರೆಡ್ಡಿ, ಅಮರೇಶಪ್ಪ, ಸಿ. ಬಸವರಾಜ, ಚನ್ನಪ್ಪ ಈಚನಾಳ, ಆಡಳಿತಾಧಿಕಾರಿ ಎ.ವೈ. ಲೋಕರೆ, ಮುಖ್ಯಶಿಕ್ಷಕ ಎಂ.ಕೆ. ಬಂಡಿಹಾಳ ಇದ್ದರು.

ಕ್ರೀಡಾಪಟುಗಳಿಗೆ ಸನ್ಮಾನ
ಕುಷ್ಟಗಿ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂಗವಿಕಲರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ತಾಲೂಕಿನ ನವಲಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತ ಈಚೆಗೆ ಸನ್ಮಾನಿಸಿತು. ಶಾಲೆಯ ಕಾಶಪ್ಪ ರಾಠೋಡ ಉದ್ದ ಜಿಗತದಲ್ಲಿ ಪ್ರಥಮ, ಗುಂಡೆಸೆತದಲ್ಲಿ ದ್ವಿತೀಯ, 100 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ. ಬಸವರಾಜ ಲೆಕ್ಕಿಹಾಳ ಗುಂಡೆಸೆತದಲ್ಲಿ ಪ್ರಥಮ ಹಾಗೂ ಜಾವೆಲಿನ್ ತ್ರೋದಲ್ಲಿ ತೃತೀಯ ಸ್ಥಾನ ಸಂಪಾದಿಸಿದ್ದಾನೆ. ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿದರೆಂದು ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲು ಓಡಿಸಲು ಮನವಿ
ಕೊಪ್ಪಳ: ಕೊಪ್ಪಳಕ್ಕೆ ಹೆಚ್ಚುವರಿ ರೈಲುಗಳು ಓಡಿಸಬೇಕು, ಇತರ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ರೇಲ್ವೆ ಜನಪರ ಹೋರಾಟ ಸಮಿತಿ ಮುಖಂಡರು ಈಚೆಗೆ ಕೊಪ್ಪಳಕ್ಕೆ ಆಗಮಿಸಿದ್ದ ಹುಬ್ಬಳ್ಳಿ ನೈರುತ್ಯ ರೇಲ್ವೆ ಪ್ರಧಾನ ವ್ಯವಸ್ಥಾಪಕ ಪ್ರದೀಪಕುಮಾರ ಸಕ್ಸೇನಾ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಪ್ರದೀಪಕುಮಾರ ಸಕ್ಸೇನಾ, ಜೋಡಿ ಮಾರ್ಗ ಶೀಘ್ರ ಪೂರ್ಣಗೊಳ್ಳಲಿದ್ದು, ಬಳಿಕ ಹೆಚ್ಚು ರೈಲುಗಳನ್ನು ಓಡಿಸುತ್ತೇವೆ. ಫುಟ್ ಓವರ್ ಬ್ರಿಜ್, ಎರಡನೇ ಫ್ಲಾಟ್ ಫಾರಂ ನಿರ್ಮಿಸುತ್ತೇವೆ. ಹಂಪಿ, ವಿಜಯವಾಡ ಹಾಗೂ ಅಮರಾವತಿ ಎಕ್ಸ್‌ಪ್ರೆಸ್‌ಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಲಾಗುವುದು ಎಂದರು. ಡಾ.ಕೆ.ಎಸ್. ಜನಾರ್ದನ, ಬಸವರಾಜ ಶೀಲವಂತರ್, ಮೈಲಪ್ಪ ಬಿಸರಳ್ಳಿ, ರಮೇಶ ಚಿಕೇನಕೊಪ್ಪ, ಜಾಫರ ಅಲಿ ಪೈಲ್ವಾನ್, ಮಖಬೂಲ್ ರಾಯಚೂರ, ಶಿವಪ್ಪ ಹಡಪದ, ನನ್ನುಸಾಬ ನೀಲಿ, ಈರಪ್ಪ ಡೊಳ್ಳಿನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.