ಬಳ್ಳಾರಿ

ನಾಳೆ ಬಯಲು ಕುಸ್ತಿ ಪಂದ್ಯ

Published On :

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಶ್ರೀಬಂಡೆ ರಂಗನಾಥಸ್ವಾಮಿಯ ರಥೋತ್ಸವದ ಅಂಗವಾಗಿ ಮಾ. 18ರಂದು ಮಧ್ಯಾಹ್ನ 3 ಗಂಟೆಗೆ ಜರುಗುವ ಭಾರಿ ಬಯಲು ಕುಸ್ತಿಪಂದ್ಯಾಟಗಳಿಗೆ ಬೃಹತ್ ಮಣ್ಣಿನ ಅಖಾಡ ಸಜ್ಜುಗೊಳಿಸುವ ಕಾರ್ಯಬಿರುಸಾಗಿ ಸಾಗಿದೆ. ಇದೇ ಮೊದಲ ಬಾರಿಗೆ ಹಗರಿಬೊಮ್ಮನಹಳ್ಳಿ-ತಂಬ್ರಹಳ್ಳಿ ಜಿಲ್ಲಾ ಮುಖ್ಯರಸ್ತೆಯ ಬದಿಯಲ್ಲಿನ ಎಪಿಎಂಸಿ ಆವರಣದಲ್ಲಿ ಕುಸ್ತಿ ಪಂದ್ಯಾಟಕ್ಕಾಗಿ ಸುಮಾರು ಮೂರೂವರೆ ಅಡಿ ಎತ್ತರದ ಎಂಬತ್ತು ಅಡಿ ಅಗಲವುಳ್ಳ ವಿಸ್ತಾರದ ಕೆಂಪು ಮಣ್ಣಿನ ಅಖಾಡ ನಿರ್ಮಿಸುತ್ತಿದ್ದಾರೆ. ಏಕಕಾಲಕ್ಕೆ ಐದಾರು ಜೊತೆ ಪೈಲ್ವಾನರು ಕುಸ್ತಿ ಅಡುವಷ್ಟು ಅಖಾಡ ವಿಶಾಲವಾಗಿದೆ. ಹೀಗಾಗಿ ತಂಬ್ರಹಳ್ಳಿ ಎಪಿಎಂಸಿ ಯಾರ್ಡ್‌ನಲ್ಲಿ ನಿರ್ಮಿಸುತ್ತಿರುವ ಮಣ್ಣಿನ ಅಖಾಡ ಸಂಪೂರ್ಣಗೊಂಡ ಮೇಲೆ ಹಳ್ಳಿಗಾಡಿನ ಪ್ರಥಮ ಕಾಯಂ ಮಣ್ಣಿನ ಅಖಾಡ ಎಂಬ ಖ್ಯಾತಿ ಗಳಿಸಲಿದೆ. ಮಾ.18ರಂದು ಮಧ್ಯಾಹ್ನ 3 ಗಂಟೆಗೆ ಜರುಗುವ ಬಯಲು ಕುಸ್ತಿಪಂದ್ಯಾಟದಲ್ಲಿ ಭಾಗವಹಿಸಿ ವಿಜಯಶಾಲಿಯಾಗುವ ಕುಸ್ತಿಪಟುಗಳಿಗೆ ನಗದು ಬಹುಮಾನ ಹಾಗೂ ಪರೀಶಿ ಪೈಕಿ ಜಯಶಾಲಿಯಾದವರಿಗೆ ಬೆಳ್ಳಿಕಡಗ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಗುತ್ತದೆ. ಜೊತೆಗೆ ಭಾಗವಹಿಸುವ ಎಲ್ಲ ಪೈಲ್ವಾನರಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಹನುಮಾನ್ ಕುಸ್ತಿ ಮಂಡಳಿ ತಿಳಿಸಿದೆ.

ಬಿಜೆಪಿಗೆ ದೇವೇಂದ್ರಗೌಡ ಆಯ್ಕೆ
ಕೊಟ್ಟೂರು: ಬಿಜೆಪಿಯ ರಾಜ್ಯ ಪರಿಷತ್ ಸದಸ್ಯರನ್ನಾಗಿ ಸಮೀಪದ ಕುಡಿತಿನಮಗ್ಗಿಯ ಮುಖಂಡ ಪಿ. ದೇವೇಂದ್ರಗೌಡರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ವಿಧಾನಸಭಾ ಕ್ಷೇತ್ರಗಳ ಸಂಕುಲದಿಂದ ದೇವೇಂದ್ರಗೌಡರಿಗೆ ರಾಜ್ಯ ಪರಿಷತ್ ಸದಸ್ಯರಾಗಿ ಅವಕಾಶ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ ಶಿಫಾರಸಿನ ಮೇರೆಗೆ ಈ ಆಯ್ಕೆ ಮಾಡಲಾಗಿದೆ.

ರೇಣುಕಾಚಾರ್ಯರ ಜಯಂತ್ಯುತ್ಸವ
ಹೊಸಪೇಟೆ:  ಬೇಡ ಜಂಗಮ ಸಮಾಜ ತಾಲೂಕು ಸಮಿತಿಯಿಂದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಸಮಾರಂಭ ನಗರದಲ್ಲಿ ಶುಕ್ರವಾರ ನಡೆಯಿತು. ಸಂಘದ ಅಧ್ಯಕ್ಷ ಎಸ್.ಎಂ. ಕಾಶಿನಾಥಯ್ಯ, ಪ್ರಧಾನ ಕಾರ್ಯದರ್ಶಿ ಎ.ಎಂ. ಬಸವರಾಜ ಮಾತನಾಡಿದರು. ವೀರಶೈವ ಸನಾತನ ಧರ್ಮದ ಬಗ್ಗೆ ಮಳಿಮಠ ವಿರೂಪಾಕ್ಷಯ್ಯ ಉಪನ್ಯಾಸ ನೀಡಿದರು. ಟಿ.ಎಚ್.ಎಂ. ಗುರುಮೂರ್ತಿ, ಎಂ.ಎಂ. ವಿರೂಪಾಕ್ಷಯ್ಯ, ನಿರಂಜನ ಮೂರ್ತಿ, ವೀರಯ್ಯ, ಕಲ್ಯಾಣಯ್ಯ, ಅಮರಯ್ಯ, ಚಿತ್ತವಾಡ್ಗಿ ಕೊಟ್ರಯ್ಯ, ಟಿ.ಎಚ್.ಎಂ. ಚಂದ್ರಶೇಖರಯ್ಯ, ಅನ್ನಪೂರ್ಣಮ್ಮ, ಶುಶೀಲಮ್ಮ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಜಯಂತಿ ಅಂಗವಾಗಿ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು.

ಕ್ಷಿತಿಜ ಬ್ಯಾಂಕ್‌ಗೆ ಆಯ್ಕೆ
ಕೊಟ್ಟೂರು: ಪಟ್ಟಣದ ಕ್ಷಿತಿಜ ಸೌಹಾರ್ದ ವಿವಿಧೋದ್ದೇಶ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಮಂಜುನಾಥ ಮೋರಗೇರಿ, ಉಪಾಧ್ಯಕ್ಷರಾಗಿ ಕೆ. ಅನಿಲ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬ್ಯಾಂಕಿನ ನಿರ್ದೇಶಕರು ಈ ನಿರ್ಣಯ ಕೈಗೊಂಡರು. ಚುನಾವಣಾಧಿಕಾರಿಗಳಾಗಿ ಕೆ. ರೇವಣ್ಣ ಕಾರ್ಯ ನಿರ್ವಹಿಸಿದರು ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚನ್ನವೀರಗೌಡ ಎಂ. ತಿಳಿಸಿದರು.

25ಕ್ಕೆ ಬಿಎಸ್‌ಎನ್‌ಎಲ್ ಟೆಲಿಫೋನ್ ಅದಾಲತ್
ಬಳ್ಳಾರಿ: ಭಾರತ ಸಂಚಾರ ನಿಗಮ ನಿಯಮಿತದಿಂದ ಮಾ. 25ರಂದು ಬೆಳಗ್ಗೆ 11 ಗಂಟೆಗೆ ಬಳ್ಳಾರಿ ನಗರದ ದೂರವಾಣಿ ಮಹಾಪ್ರಬಂಧಕರ ಕಾರ್ಯಾಲಯದಲ್ಲಿ ಟೆಲಿಫೋನ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಟಿಲಿಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗ್ರಾಹಕರು ದೂರವಾಣಿ ಸೇವೆ ಕುರಿತು ಕುಂದು-ಕೊರತೆ ಮತ್ತು ದೂರುಗಳನ್ನು ಮಾ. 22ರೊಳಗಾಗಿ  ಟೆಲಿಫೋನ್ ಕೊರತೆ, ಸಲಹೆ ಅದಾಲತ್, ಬಳ್ಳಾರಿ ಎಂದು ಲಕೋಟೆ ಮೇಲೆ ಬರೆದು ಸಾರ್ವಜನಿಕ ಸಂಪರ್ಕ ಅಧಿಕಾರಿ, ದೂರವಾಣಿ ಮಹಾಪ್ರಬಂಧಕರ ಕಾರ್ಯಾಲಯ ಬಿಎಸ್‌ಎನ್‌ಎಲ್ ಬಳ್ಳಾರಿ ಇವರಿಗೆ ಸಲ್ಲಿಸಬಹುದಾಗಿದೆ. ಕೋರ್ಟ್ ಹಾಗೂ ಗ್ರಾಹಕರ ವೇದಿಕೆಯಲ್ಲಿ ಈಗಾಗಲೇ ಇರುವ ದೂರುಗಳನ್ನು ಅದಾಲತ್‌ನಲ್ಲಿ ಸ್ವೀಕರಿಸಲಾಗುವುದಿಲ್ಲ. ಗ್ರಾಹಕರು ತಮ್ಮ ದೂರಿನಲ್ಲಿ ಎಕ್ಸೇಚೆಂಜ್ ಹೆಸರು, ದೂರವಾಣಿ ಸಂಖ್ಯೆ, ಬಿಲ್ ನಂಬರ್ ಹಾಗೂ ದೂರಿನ ವಿವರಗಳನ್ನು ಒದಗಿಸಿರಬೇಕು ಎಂದು ಅವರು ತಿಳಿಸಿದ್ದಾರೆ.

ಜೆಡಿಎಸ್‌ಗೆ ನೂತನ ಪದಾಧಿಕಾರಿಗಳ ನೇಮಕ                 
ಬಳ್ಳಾರಿ: ಜೆಡಿಎಸ್‌ನ ವಿದ್ಯಾರ್ಥಿ ನಗರ, ಗ್ರಾಮೀಣ ಹಾಗೂ ಸಿರುಗುಪ್ಪ ತಾಲೂಕು ಘಟಕಗಳಿಗೆ ಪದಾಧಿಕಾರಿಗಳನ್ನು ಈಚೆಗೆ ನೇಮಕ ಮಾಡಲಾಯಿತು.  ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕುಡತಿನಿ ಶ್ರೀನಿವಾಸ್ ನೇತೃತ್ವದಲ್ಲಿ ಈಚೆಗೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಅಯ್ಕೆ ಮಾಡಲಾಯಿತು. ವಿದ್ಯಾರ್ಥಿ ಘಟಕಕ್ಕೆ ಜಿಲ್ಲಾಧ್ಯಕ್ಷರಾಗಿ ಕೌಲ್‌ಬಜಾರ್‌ನ ಜಾವಿದ್ ಪಾಷ, ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿ ಘಟಕಕ್ಕೆ ಅಧ್ಯಕ್ಷರಾಗಿ ಮಹಮ್ಮದ್ ಇರ್ಫಾನ್, ನಗರ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಎಸ್. ಮಹ್ಮದ್ ರಫೀಕ್, ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ಗೌರವಾಧ್ಯಕ್ಷರಾಗಿ ತಾಳೂರು ಪುರುಷೋತ್ತಮರೆಡ್ಡಿ, ಅಧ್ಯಕ್ಷರಾಗಿ ಸಿರುಗುಪ್ಪ ಎ. ಯಲ್ಲನಗೌಡ, ಉಪಾಧ್ಯಕ್ಷರುಗಳಾಗಿ ಈರಣ್ಣ, ಊಳೂರು ಕುರುಬರ ನೆಣಿಕಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಸಿರುಗುಪ್ಪ ಎಚ್. ಬಸವರಾಜ್, ಸಂಘಟನಾ ಕಾರ್ಯದರ್ಶಿಯಾಗಿ ಕೊಂಚಿಗೇರಿ ಎಸ್. ಬಸವರಾಜ್ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಪಕ್ಷದ ಮುಖಂಡರಾದ ಪಿ.ಎಸ್. ಸೋಮಲಿಂಗನಗೌಡ, ಮುಂಡ್ರಿಗಿ ನಾಗರಾಜ್, ಮೀನಳ್ಳಿ ತಾಯಣ್ಣ, ಬನ್ನಿಗೋಳ ವೆಂಕಣ್ಣ, ನಿಯಾಜ್ ಅಹ್ಮದ್, ಜಗದೀಶ್ವರರೆಡ್ಡಿ ಫೋಟೋ ರಾಜ, ನಟರಾಜ, ರಾಮೇಶ್ವರಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.