'ಹೈ'ಸ್ಫೋಟದಲ್ಲಿ ಕನ್ನಡಿಗ ಸಾವು
ಬೀದರ್: ಆಂಧ್ರದ ಹೈದಾರಾಬಾದಿನಲ್ಲಿ ಗುರುವಾರ ಸಂಜೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಸತ್ತವರ 16 ಜನರ ಪೈಕಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾಟಸಾಂಗ್ವಿ ಗ್ರಾಮದ ನಿವಾಸಿಯೂ ಸೇರಿದ್ದಾರೆ. ಅಲ್ಲದೆ, ಕೆರೂರು ಗ್ರಾಮದ ಯುವಕ ಕೂಡಾ ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತನನ್ನು ಪದ್ಮಾಕರ್ ನರಸಿಂಗರಾವ್ ಕುಲಕರ್ಣಿ(52) ಎಂದು ಗುರುತಿಸಲಾಗಿದೆ. ಪಾರ್ಥೀವ ಶರೀರವನ್ನು ಶುಕ್ರವಾರ ಸ್ವಗ್ರಾಮಕ್ಕೆ ತಂದು, ಸಂಜೆ ವೇಳೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಗಾಯಗೊಂಡಿರುವ ಯುವಕ ಮಾರುತಿ ಕೆರೂರು(17) ಎಂದು ಗುರುತಿಸಲಾಗಿದ್ದು, ಇವರು ಸಾಯಿ ಮಂದಿರದ ಬಳಿ ತಳ್ಳು ಗಾಡಿಯಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದರು. ಪದ್ಮಾಕರ್ ರೀತಿಯಲ್ಲಿ ಮಾರುತಿ ಅವರೂ ಆನಂದ್ ಹೊಟೇಲ್ನಲ್ಲಿ ತಿಂಡಿಗೆ ಹೋಗಿದ್ದರು. ಆ ವೇಳೆ ನಡೆದ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಾರುತಿ ಅವರನ್ನು ಹೈದರಾಬಾದ್ನ ಯಶೋದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೃತ್ತಿಯಲ್ಲಿ ಬಾಣಸಿಗರಾಗಿರುವ ಪದ್ಮಾಕರ್, ಅಲ್ಲಲ್ಲಿ ಅಡುಗೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. 15 ದಿನಗಳ ಹಿಂದಷ್ಟೇ ಹೈದರಾಬಾದ್ಗೆ ತೆರಳಿ ಅಲ್ಲಿನ ದಿಲ್ಸುಖ್ ನಗರದ ಸಾಯಿ ಮಂದಿರದ ಬಳಿ ತಳ್ಳುವ ಗಾಡಿಯ ಮೇಲೆ ಜಿಲೇಬಿ ವ್ಯಾಪಾರ ಮಾಡುತ್ತಿದ್ದರು.
ಆಧಾರ್ ಕಾರ್ಡ್ನಿಂದ ಗುರುತು ಪತ್ತೆ: ಗುರುವಾರ ಸಂಜೆ ಪದ್ಮಾಕರ್ ಅವರು ದಿಲ್ಸುಖ್ ನಗರದ ಸಾಯಿ ಮಂದಿರದ ಬಳಿ ಇರುವ ಆನಂದ್ ಹೋಟೆಲ್ಗೆ ತಿಂಡಿ ತಿನ್ನಲು ಹೋದದ್ದೇ ಇವರ ಪಾಲಿಗೆ ಮುಳುವಾಯಿತು. ತಿಂಡಿ ತಿನ್ನುತ್ತಿದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಪದ್ಮಾಕರ್ ಗುರುತು ಪತ್ತೆಯಾದದ್ದು ಅವರ ಜೇಬಿನಲ್ಲಿದ್ದ ಆಧಾರ್ ಕಾರ್ಡ್ನಿಂದ. ತಡ ರಾತ್ರಿಯಾದ್ರೂ ಪದ್ಮಾಕರ್ ಮನೆಗೆ ಬಾರದಿದ್ದನ್ನು ಕಂಡು ಗಾಬರಿಗೊಂಡ ಸಹೋದರಿ ಸುಧಾ ಜೋಶಿ, ಜಿಲೇಬಿ ಮಾರಾಟ ಮಾಡುತ್ತಿದ್ದ ಸ್ಥಳದ ಅಕ್ಕಪಕ್ಕದಲ್ಲಿಯೇ ಬಾಂಬ್ ಸ್ಫೋಟಗೊಂಡಿದ್ದನ್ನು ಅರಿತು, ಸ್ಥಳಕ್ಕೆ ತೆರಳಿ ಪೊಲೀಸರನ್ನು ವಿಚಾರಿಸಿದ್ದಾರೆ. ಆಗ ಗಾಯಾಳು ಹಾಗೂ ಮೃತ ದೇಹಗಳು ಉಸ್ಮಾನಿಯಾ ಆಸ್ಪತ್ರೆಯಲ್ಲಿದ್ದು ಗುರುತು ಪತ್ತೆ ಹಚ್ಚುವಂತೆ ಸೂಚಿಸಿದ್ದಾರೆ. ನಂತರ ಆಸ್ಪತ್ರೆಯಲ್ಲಿದ್ದ ಪೊಲೀಸರು ತೋರಿಸಿದ ಆಧಾರ ಕಾರ್ಡ್ನಿಂದ ಪದ್ಮಾಕರ್ ಮೃತಪಟ್ಟಿದ್ದು ಸುಧಾ ಅವರಿಗೆ ಖಚಿತವಾಗಿದೆ.
ಮೃತ ಪದ್ಮಾಕರ್ ಕುಲಕರ್ಣಿ ಅವರ ಮನೆಗೆ ಭಾಲ್ಕಿ ಡಿವೈಎಸ್ಪಿ ಬಿಎಸ್ ಮಾಲಗತ್ತಿ ಹಾಗೂ ತಹಸೀಲ್ದಾರ್ ಅರುಣ ಕುಲಕರ್ಣಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ
ಪದ್ಮಾಕರ್ ಸಾವಿಗೀಡಾದ ಸುದ್ದಿ ಭಾಟಸಾಂಗ್ವಿಯಲ್ಲಿನ ಕುಟುಂಬಸ್ಥರಿಗೆ ಗೊತ್ತಾಗುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿದೆ. ಗುರುವಾರ ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆದು, ಶುಕ್ರವಾರ ಮಧ್ಯಾಹ್ನ ಮೃತ ದೇಹವನ್ನು ಸ್ವಗ್ರಾಮಕ್ಕೆ ತರಲಾಗಿದೆ. ಸಂಜೆ 5ರ ಸುಮಾರಿಗೆ ಪದ್ಮಾಕರ್ ಅವರ ಅಂತ್ಯಸಂಸ್ಕಾರ ನೆರವೇರಿದ್ದು ಗ್ರಾಮಸ್ಥರು ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಅತ್ಯಂತ ಕಡುಬಡತನದಲ್ಲಿದ್ದ ಪದ್ಮಾಕರ್ ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದು ಈಗಷ್ಟೇ ಹೈದರಾಬಾದ್ನಲ್ಲಿ ಜಿಲೇಬಿ ವ್ಯಾಪಾರ ಆರಂಭಿಸಿದ್ದರು. ಅಲ್ಲಿದ್ದ ಸಹೋದರಿ ಸುಧಾ ಜೋಶಿಯ ಮನೆಯ ಆಸರೆಯಾಗಿತ್ತು. ಮಕ್ಕಳ ಮದುವೆಯ ಕನಸನ್ನು ಹೆಣೆದುಕೊಂಡಿದ್ದ ಪದ್ಮಾಕರ್ ಇನ್ನಿಲ್ಲವಾದದ್ದು ಕುಟುಂಬಕ್ಕೆ ಭಾರಿ ಆಘಾತ ತಂದಿದೆ ಎಂದು ಆತನ ಗೆಳೆಯ ಸಂತೋಷಕುಮಾರ ಅವರು ನೊಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

