ಚಾಮರಾಜನಗರ

ಚಿಕ್ಕಲ್ಲೂರಿನಲ್ಲಿ ಪ್ರಾಣಿ ಬಲಿ ನಿಷೇಧ ಜಿಲ್ಲಾಡಳಿತಕ್ಕೆ ಸವಾಲು

Published On :

ಕೊಳ್ಳೇಗಾಲ: ತಾಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರಿನಲ್ಲಿ ನಡೆಯುವ ಸಿದ್ದಪ್ಪಾಜಿ ಜಾತ್ರೆಯಲ್ಲಿ ಬುಧವಾರ ನಡೆಯುವ ಪಂಕ್ತಿ ಸೇವೆ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ಹಿಂದೆಂದೂ ಕಂಡರಿಯದ ರೀತಿ ಜಿಲ್ಲಾಡಳಿತ ಪ್ರಾಣಿಬಲಿ ತಡೆಯಲು ಹಲವು ತಂತ್ರ ರೂಪಿಸಿದೆ. ಅದೇ ರೀತಿ ಸಾವಿರಾರು ಭಕ್ತಾಧಿಗಳು ಸಹ ಪ್ರಾಣಿ ಬಲಿ ನಡೆಸಿಯೇ ಪಂಕ್ತಿ ಸೇವೆ ಪ್ರಾರಂಭಿಸುವ ಪ್ರತಿತಂತ್ರ ಅನುಸರಿಸಲು ಮುಂದಾಗಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧಕ್ಕೆ ಹಲವು ಕ್ರಮ ಕೈಗೊಂಡು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದಲ್ಲದೆ ಪ್ರಾಣಿ ಬಲಿ ನೀಡಿದರೆ ದಂಡ ವಿಧಿಸಲು ಸಜ್ಜಾಗಿದೆ. ಕರಪತ್ರದ ಮೂಲಕ ಭಕ್ತಾಧಿಗಳಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದೆ ಮಾತ್ರವಲ್ಲ. ಚಿಕ್ಕಲ್ಲೂರಿಗೆ ವಿವಿಧ ಜಿಲ್ಲೆಯಿಂದ ತೆರಳುವ ನೂರಾರು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳಲ್ಲೂ ಪ್ರಾಣಿ ಬಲಿ ನೀಡುವಂತಿಲ್ಲ ಎಂಬ ಸಂದೇಶದ ಕರಪತ್ರವನ್ನು ಅಂಟಿಸಿ ಸಂದೇಶ ರವಾನಿಸಿದೆ.
ಕೋಳಿ ಅಂಗಡಿ ಬಂದ್: ಪ್ರತಿ ಬಾರಿಯೂ ಚಿಕ್ಕಲ್ಲೂರಿನಲ್ಲಿ ನೂರಾರು ಕೋಳಿ ಅಂಗಡಿಗಳು ತಲೆ ಎತ್ತುತ್ತಿದ್ದವು. ಅದರಂತೆ ಕೋಳಿ ಖರೀದಿಯ ಭರಾಟೆಯೂ ಜೋರಿರುತ್ತಿತ್ತು.
ಆದರೆ ಈ ಬಾರಿ ಎಚ್ಚೆತ್ತ ಜಿಲ್ಲಾಡಳಿತ ಚಿಕ್ಕಲ್ಲೂರು ದೇವಸ್ಥಾನದ ವ್ಯಾಪ್ತಿಯಲ್ಲಿ ಎಲ್ಲೂ ಕೋಳಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿಲ್ಲ. ಆ ಮೂಲಕ ಪ್ರಾಣಿಬಲಿ ನಿಷೇಧಕ್ಕೆ ಒಂದು ಹೆಜ್ಜೆ ಮುಂದೆ ತೆರಳಿ ಕ್ರಮ ಕೈಗೊಂಡಿದೆ. ಇಷ್ಟು ಮಾತ್ರವಲ್ಲ, ಜಿಲ್ಲಾಡಳಿತ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ವಾಹನ ತಪಾಸಣೆ ನಡೆಸಿ ಪ್ರಾಣಿಗಳು ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಿದೆ. ಪ್ರಾಣಿ ಬಲಿ ನಡೆಸದಂತೆ ತಡೆಯಲು ಈಗಾಗಲೇ 5 ಮಂದಿ ಸೆಕ್ಟರ್ ಮ್ಯಾಜಿಸ್ಟ್ರೇಟರ್‌ಗಳನ್ನು ನೇಮಿಸಲಾಗಿದೆ.
ಚಿಕ್ಕಲ್ಲೂರು ಜಾತ್ರೆ ಎಂದರೆ ಪಂಕ್ತಿಸೇವೆಯ ಪ್ರಾಣಿ ಬಲಿ ಮೂಲಕ ಸಹಭೋಜನ ಎಂಬುದು ಕೆಲವು ಭಕ್ತರ ನಂಬಿಕೆಯಾಗಿದೆ. ಹಾಗಾಗಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ ಭಕ್ತಾಧಿಗಳಿಗೆ ನುಂಗಲಾರದ ತುತ್ತಾಗಿದೆ. ಮಾತ್ರವಲ್ಲ, ಪ್ರಾಣಿ ಮಾಂಸ ಪ್ರಿಯರಲ್ಲೂ ಹಾಗೂ ಹರಕೆ ಹೊತ್ತ ಭಕ್ತಾಧಿಗಳಲ್ಲೂ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕುಡಿಯುವ ನೀರಿಗೂ ಹಾಹಾಕಾರ: ಪ್ರತಿ ಬಾರಿಯ ಚಿಕ್ಕಲ್ಲೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿದೆ. ಈ ಬಾರಿ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ನೀರು ಪೂರೈಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಭಕ್ತಾಧಿಗಳ ಆರೋಪ. ನೀರಿನ ಅಗತ್ಯವುಳ್ಳ ಭಕ್ತರು ಪ್ರತಿ ಟ್ಯಾಂಕರ್‌ಗೆ 200ರಿಂದ 1 ಸಾವಿರದವರೆಗೂ ನೀಡಿ ಖರೀದಿಸುತ್ತಿದ್ದಾರೆ. ಈಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ಕೈಚೆಲ್ಲಿ ಕುಳಿತಿರುವುದು ಸಹಾ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸಿದ್ದಪ್ಪಾಜಿ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ದೂಳಿನ ಸಿಂಚನ ವಾಡಿಕೆಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸಾಗುವ ವಾಹನಗಳಿಂದ ದೂಳಿನ ಸಿಂಚನ ಅನಿವಾರ್ಯವಾಗಿದೆ.

ಚಿಕ್ಕಲ್ಲೂರು ಜಾತ್ರೆ: ಮಂಡಳಿ ನಿರ್ಲಕ್ಷ್ಯ
ಚಿಕ್ಕಲ್ಲೂರು ದೇವಸ್ಥಾನ ಖಾಸಗಿ ಒಡೆತನದ ದೇವಸ್ಥಾನವಾಗಿದೆ. ಪ್ರತಿ ಬಾರಿಯೂ ಜಾತ್ರೆಯ ಸಂದರ್ಭದಲ್ಲಿ ಸಂಬಂಧಪಟ್ಟ ಆಡಳಿತ ಮಂಡಳಿ ಭಕ್ತಾಧಿಗಳಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗುವುದು ವಿಪರ್ಯಾಸವಾಗಿದೆ. ದೇಗುಲದ ಆಡಳಿತ ಮಂಡಳಿ ಪ್ರತಿ ಬಾರಿ ಜಾತ್ರೆ ಸಂದರ್ಭದಲ್ಲಿ ಅಂಗಡಿ ಹರಾಜು ಪ್ರಕ್ರಿಯೆ ಹಾಗೂ ಹರಕೆ ಕಾಣಿಕೆಗಳಿಗೆ ನೀಡುವ ಆದ್ಯತೆಯನ್ನು ಭಕ್ತಾಧಿಗಳ ಅನುಕೂಲಕ್ಕೆ ನೀಡುತ್ತಿಲ್ಲ. ಜಿಲ್ಲಾಡಳಿತ, ಸರ್ಕಾರಕ್ಕೆ ಸಿದ್ದಪ್ಪಾಜಿ ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಎಷ್ಟು ಮುಖ್ಯವೋ, ದೇವಾಲಯದ ಆಡಳಿತ ಮಂಡಳಿಗೂ ಅಷ್ಟೇ ಜವಾಬ್ದಾರಿ ಇದೆ ಎಂಬುದನ್ನು ಅರಿಯಬೇಕು ಎಂಬುದು ಸಾವಿರಾರು ಭಕ್ತರ ಆಗ್ರಹ. ಪೊಲೀಸ್ ಬಂದೆಬೀಬಸ್ತ್, ವೈದ್ಯಕೀಯ ಸೌಲಭ್ಯಕ್ಕೆ ಮಾತ್ರ ಹಣ ಪಾವತಿಸುವ ಚಿಕ್ಕಲ್ಲೂರು ದೇವಾಲಯದ ಆಡಳಿತ ಮಂಡಳಿ ಭಕ್ತಾಧಿಗಳಿಗೆ ಮೂಲಸೌಲಭ್ಯ ಒದಗಿಸಲೂ ಹೆಚ್ಚಿನ ಒತ್ತು ನೀಡಬೇಕು ಎಂಬುದು ಭಕ್ತರ ಮನವಿ.  
-ಎನ್.ನಾಗೇಂದ್ರಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.