ಚಾಮರಾಜನಗರ

ಡೀವಿ, ಶೆಟ್ಟರ್‌ಗೆ ಸಿಎಂ ಸ್ಥಾನ ಭಿಕ್ಷೆ

Published On :

ಕೆ.ಆರ್.ನಗರ:  ಡಿ.ವಿ.ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್‌ಗೆ ಮುಖ್ಯಮಂತ್ರಿ ಸ್ಥಾನ ಬಿ.ಎಸ್. ಯಡಿಯೂರಪ್ಪ ನೀಡಿದ ಭಿಕ್ಷೆಯಾಗಿದ್ದು, ಅವರು ಜನಾಭಿಪ್ರಾಯ ಪಡೆದು ಆಯ್ಕೆಯಾದ ಮುಖ್ಯಮಂತ್ರಿಗಳಲ್ಲ ಎಂದು ರಾಜ್ಯ ಕೆಜೆಪಿ ಸಂಘಟನಾ ಕಾರ್ಯದರ್ಶಿ ಕಾ.ಪು. ಸಿದ್ದಲಿಂಗಸ್ವಾಮಿ ಹೇಳಿದರು.
ಇಲ್ಲಿನ ಬಳೆ ಬಸವರಾಜಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ತಾಲೂಕು ಕೆಜೆಪಿ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ 16,676 ಸಾವಿರ ಎಕರೆ ಭೂಮಿ ಡಿನೋಟಿಪೈ ಆಗಿದೆ. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 279 ಎಕರೆ ಡಿನೋಟಿಪೈ ಆಗಿದ್ದು, ಹಿಂದಿನದ್ದನ್ನು ತನಿಖೆ ಮಾಡದೆ, ಕುತಂತ್ರದಿಂದ ಯಡಿಯೂರಪ್ಪನವರ ವಿರುದ್ದ ತನಿಖೆ ಮಾಡಲು ಮುಂದಾಗಿ, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು ಎಂದು ಕಿಡಿಕಾರಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರೆ ಪ್ರಮುಖ ಕಾರಣ. ಅವರನ್ನು ನೋಡಿ ಮತದಾರರು ಪಕ್ಷವನ್ನು ಅಧಿಕಾರಕ್ಕೆ ತಂದರೆ ಹೊರತು, ಬಿಜೆಪಿಯಿಂದಲ್ಲ. ಚುನಾವಣೆಗೆ ಮುಂಚಿತವಾಗಿಯೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷ ಘೋಷಿಸಿತ್ತು. ಆದ್ದರಿಂದ ನಾಯಕತ್ವ ನೋಡಿ ಬೆಂಬಲ ನೀಡಿದರು ಎಂದು ಅವರು ಸಮರ್ಥನೆ ನೀಡಿದರು.
ಕುತಂತ್ರದಿಂದ ಯಡಿಯೂರಪ್ಪನವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿರುವ ಅವರು ತಮ್ಮ ಸಾಮರ್ಥ್ಯವನ್ನು ಹಾವೇರಿ ಸಮಾವೇಶದಲ್ಲಿ ತೋರಿಸಿದ್ದರು. ನೆಲ, ಜಲ, ಭಾಷೆ ಮತ್ತು ರಾಜ್ಯದ ಜನರ ಏಳಿಗೆಗಾಗಿ ಜನ್ಮ ತಳೆದಿರುವ ಕೆಜೆಪಿಗೆ ಉತ್ತಮ ಭವಿಷ್ಯವಿದ್ದು, ಕಾರ್ಯಕರ್ತರು ಯಡಿಯೂರಪ್ಪನವರ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕೆಂದು ಅವರು ಹೇಳಿದರು.
ಜಿಲ್ಲಾ ಮುಖಂಡರಾದ ಕೆ.ಎನ್. ಪುಟ್ಟಬುದ್ದಿ, ಬಿ.ಎಂ. ರಾಮು, ಎಂ.ಜಿ. ರಾಮಕೃಷ್ಣಪ್ಪ, ತಾ. ಸಂಚಾಲಕ ಸಿವಿಗುಡಿ ಜಗದೀಶ್, ಮುಖಂಡ ಲೋಕೇಶ್ ಪಿ. ಗೋಪಾಲ್, ಹಾಡ್ಯ ಶಂಕರಪ್ಪ, ಶಿವಪ್ಪಾಜಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಣ್ಣಲಿಂಗಪ್ಪ, ಲಾಳನಹಳ್ಳಿ ಕೆಂಪರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.