ತೂಗುಗತ್ತಿಯಲ್ಲಿ ರಾಜಕೀಯ ಭವಿಷ್ಯ: ಪರಿಮಳಾ ಕಳವಳ
ಕ.ಪ್ರ.ವಾರ್ತೆ ಚಾ.ನಗರ ಮಾ.25
ತನಗೆ ಕೆಜೆಪಿ ಟಿಕೆಟ್ ಸಿಗಲಿದೆ ಎಂದು ಅಪಾರ ವಿಶ್ವಾಸವಿರಿಸಿಕೊಂಡಿದ್ದ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರಿಗೆ ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹನೂರಿಗೆ ಬಂದರೂ ಟಿಕೆಟ್ ಘೋಷಣೆ ಮಾಡದೆ ತೆರಳಿದ್ದು ಚಿಂತಾಕ್ರಾಂತರನ್ನಾಗುವಂತೆ ಮಾಡಿದೆ.
ಹಾಗಾಗಿ ಬೇಸತ್ತಿರುವ ಪರಿಮಳಾ ನಾಗಪ್ಪ ಈಗ ಮೌನಕ್ಕೆ ಶರಣಾಗಿದ್ದಾರೆ. ಸೋಮವಾರ ಅಪಾರ ಕಾರ್ಯಕರ್ತರು ಬೆಳಗ್ಗೆ 8 ಗಂಟೆಗೆ ಮನೆಗೆ ಆಗಮಿಸಿದರೂ 12 ಗಂಟೆವರೆಗೂ ಯಾರಿಗೂ ಕಾಣಿಸಿಕೊಳ್ಳಲಿಲ್ಲ. ಮೌನಕ್ಕೆ ಶರಣಾಗಿರುವ ಪರಿಮಳಾ ಮುಂದಿನ ರಾಜಕೀಯ ನಡೆಯನ್ನು ತಮ್ಮ ಕಾರ್ಯಕರ್ತರು ಹಾಗೂ ನಾಗಪ್ಪ ಅಭಿಮಾನಿಗಳಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ.
ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಎಚ್.ನಾಗಪ್ಪ ಅವರಿಗೆ ಹಿಂದಿನ ಪಕ್ಷದ ಮುಖಂಡರೇ ಅವರ ಮುಂದಕ್ಕೆ ಬಿ ಫಾರಂ ತಂದು ನೀಡುತ್ತಿದ್ದರು. ನಾಗಪ್ಪ ಎಂದರೆ ಎಲ್ಲಿಲ್ಲದ ಗೌರವ ಹಾಗೂ ಪ್ರೀತಿ ಮನೆ ಮಾಡಿತ್ತು. ಅಂಥ ಮನೆ ಮಾತಾಗಿದ್ದ ನಾಗಪ್ಪ ಅವರ ಪತ್ನಿ ಪರಿಮಳಾ ನಾಗಪ್ಪ ಅವರು ಈಗ ಕೆಜೆಪಿ ಟಿಕೆಟ್ಗೆ ಅಂಗಲಾಚಿದರೂ ದೊರಕದ ದುಸ್ಥಿತಿ ಬಂದಿದೆ ಎಂದರೆ ನಾಗಪ್ಪ ಅಭಿಮಾನಿಗಳೇ ನಾಚುವಂತಾಗಿದೆ. ಮಾತ್ರವಲ್ಲ, ಭಾನುವಾರ ಯಡಿಯೂರಪ್ಪ ಅವರ ನಡೆ ನಾಗಪ್ಪ ಅಭಿಮಾನಿಗಳ ಅಸಮಾಧಾನಕ್ಕೆ ಆಸ್ಪದ ನೀಡಿದೆ.
ನಾಗಪ್ಪ ನಿಧನದ ಬಳಿಕ 2004ರಲ್ಲಿ ಜೆಡಿಎಸ್ನಿಂದ ಗೆಲವು ಸಾಧಿಸಿದ್ದ ಪರಿಮಳಾ ನಾಗಪ್ಪ ಅವರು 2008ರಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ಬಿಜೆಪಿ ಸೇರ್ಪಡೆಗೊಂಡಿದ್ದರು. ಯಡಿಯೂರಪ್ಪ ಅವರ ನಿರ್ಗಮನದ ಬಳಿಕ ಅವರನ್ನು ಹಿಂಬಾಲಿಸಿದ್ದರು. ಟಿಕೆಟ್ ಪರಿಮಳಾ ನಾಗಪ್ಪ ಅವರಿಗೆ ಎಂಬ ಮಾತು ಇಲ್ಲೀವರೆಗೆ ಕೇಳಿ ಬಂದಿತ್ತು. ಇದೀಗ ಸಚಿವ ವಿ.ಸೋಮಣ್ಣ ಕೆಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಹಿನ್ನಲೆಯಲ್ಲಿ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಟಿಕೆಟ್ಗಾಗಿ ಇಬ್ಬರ ಪೈಪೋಟಿ ಏರ್ಪಟ್ಟಿದೆ.
ಪರಿಮಳಾ ನಡೆ ಕಾರಣವೆ?: ಇದಕ್ಕೆಲ್ಲಾ ಪರಿಮಳಾ ನಾಗಪ್ಪ ಅವರು ಶಾಸಕರಾಗಿದ್ದಾಗ ಮತ್ತು ನಂತರದ ದಿನಗಳಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ನಡೆಸಿಕೊಂಡ ರೀತಿ ನೀತಿಗಳೇ ಕಾರಣ. ಇದರಿಂದ ನಾಗಪ್ಪ ಕುಟುಂಬಕ್ಕೆ ಗೌರವ ನೀಡಬೇಕಾದ ನೂರಾರು ಕುಟುಂಬಗಳು ಈಗ ಪರಿಮಳಾ ಅವರಿಂದ ದೂರಾಗಿದ್ದಾರೆ. ದೂರಾದ 50ಕ್ಕೂ ಹೆಚ್ಚು ಪ್ರಭಾವಿ ಮುಖಂಡರು ಸೋಮಣ್ಣ ಜೊತೆ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಮುನಿಸಿಕೊಂಡು ದೂರಾದ ಕಾರ್ಯಕರ್ತರನ್ನು ಸಮಾಧಾನಪಡಿಸಿ ಕರೆತಂದಿದ್ದರೆ ಇಂಥ ದುಸ್ಥಿತಿ ಬರುತ್ತಿರಲಿಲ್ಲ ಎಂಬುದು ಅಪಾರ ಸಂಖ್ಯೆಯ ನಾಗಪ್ಪ ಅಭಿಮಾನಿಗಳ ಅಭಿಪ್ರಾಯವಾಗಿದೆ.
ಬುಧವಾರ ನಿರ್ಧಾರ: ಹನೂರಿಗೆ ಬಂದರೂ ಯಡಿಯೂರಪ್ಪ ಕೆಜೆಪಿ ಟಿಕೆಟ್ ಬಗ್ಗೆ ಏನೂ ಹೇಳದೆ, ಸಚಿವ ಸೋಮಣ್ಣ ಬಂದರೆ ಟಿಕೆಟ್ ನೀಡುವುದಾಗಿ ಹೇಳಿಕೆ ನೀಡಿ, ನಂತರ ಸಭೆಯಲ್ಲಿ ಪರಿಮಳಾ ಬೆಂಬಲಿಗರು ಟಿಕೆಟ್ ಘೋಷಣೆ ಮಾಡುವಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಬೇಸರದಿಂದ ತೆರಳಿದ್ದರು. ಇದರ ಬೆನ್ನಲ್ಲೇ ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲು ಮಾ.27ರ ಬುಧವಾರ ಬೆಳಗ್ಗೆ 10ಕ್ಕೆ ಕಾಮಗೆರೆಯ ತಮ್ಮ ನಿವಾಸದಲ್ಲಿ ಪರಿಮಳಾ ನಾಗಪ್ಪ ಕಾರ್ಯಕರ್ತರ ಹಾಗೂ ನಾಗಪ್ಪ ಅಭಿಮಾನಿಗಳ ಸಭೆ ಕರೆದಿದ್ದಾರೆ.
ಪರಿಮಳಾ ನಾಗಪ್ಪ ಮುಂದೇನು ಮಾಡಬೇಕು ಎಂಬುದನ್ನು ತಮ್ಮ ಬೆಂಬಲಿಗರಿಗೆ ಬಿಟ್ಟಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಸೇರಿದ್ದ ಬೆಂಬಲಿಗರ ಗುಪ್ತಸಭೆಯಲ್ಲಿ ಕೆಲವರು ನೀವು ಪಕ್ಷೇತರವಾಗಿ ಅಥವಾ ಕೆಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯಿರಿ ಎಂದು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ನಿಮ್ಮ ಪುತ್ರ ಡಾ.ಪ್ರೀತನ್ ನಾಗಪ್ಪ ಅವರನ್ನು ಕಣಕ್ಕೆ ನಿಲ್ಲಿಸಿ. ಯಾವುದೆ ಪಕ್ಷ ಬೇಡ. ನಾಗಪ್ಪ ಫೋಟೊ ಹಾಕಿ ಚುನಾವಣೆಗೆ ಹೋಗೋಣ ಎಂಬ ಸಲಹೆ ನೀಡಿದ್ದಾರೆ. ಇನ್ನು ಕೆಲವರು ಇಂದಿನ ಬೆಳವಣಿಗೆಯಲ್ಲಿ ಜೆಡಿಎಸ್ ಸೇರುವುದು ಸರಿಯಲ್ಲ. ಕೆಜೆಪಿಯಲ್ಲೇ ಇದ್ದು ಸೋಮಣ್ಣ ಗೆಲ್ಲಿಸಿ. ನೀವು ಸಹಾ ಸೂಕ್ತ ಸ್ಥಾನಮಾನ ಪಡೆಯಿರಿ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲ್ಲಿಸಲು ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಬುಧವಾರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಸಚಿವ ಸೋಮಣ್ಣ ಅವರ ಬೆಂಬಲಕ್ಕೆ ಪರಿಮಳಾ ನಾಗಪ್ಪ ನಿಂತರೆ ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಬಗ್ಗೆ ಭರವಸೆ ದೊರೆತಿದೆ ಎಂದು ಕೆಜೆಪಿ ಮೂಲಗಳು 'ಕನ್ನಡಪ್ರಭ'ಕ್ಕೆ ತಿಳಿಸಿವೆ.
- ದೇವರಾಜು ಕಪ್ಪಸೋಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

