ಭರವಸೆಗೆ ಬಗ್ಗದೆ ಶಾಸಕನಾದ ಬಾಲರಾಜು!
ಕೊಳ್ಳೇಗಾಲ: ಮಾಜಿ ಶಾಸಕ ಎಸ್.ಜಯಣ್ಣ ಮಾತಿಗೆ ಮರುಳಾಗಿ 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಬಾಲರಾಜು ಕಣದಿಂದ ಹಿಂದೆ ಸರಿದಿದ್ದರೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಪಕ್ಷೇತರ ಶಾಸಕ ಎಂಬ ಹೆಗ್ಗಳಿಕೆ ತಪ್ಪಿಸಿಕೊಳ್ಳುತ್ತಿರಲಿಲ್ಲ.
ಕೇಂದ್ರದ ಮಾಜಿ ಸಚಿವ ದಿ.ಎಂ.ರಾಜಶೇಖರಮೂರ್ತಿ ಕಟ್ಟಾ ಬೆಂಬಲಿಗ ಎಸ್. ಬಾಲರಾಜು 1999ರಲ್ಲಿ ಮೊದಲ ಬಾರಿಗೆ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವ ಮೂಲಕ 24, 250 ಮತ ಪಡೆದು ಸೋಲು ಅನುಭವಿಸಿದರೂ, ಇದು ಮುಂದಿನ ರಾಜಕೀಯಕ್ಕೆ ಸ್ಫೂರ್ತಿಯಾಗಿತ್ತು. 2004ರಲ್ಲಿ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇವರಿಗೆ ಬಿಜೆಪಿಯಲ್ಲಿ ಟಿಕೆಟ್ ಖಚಿತವಾಗಿತ್ತು.
ಆದರೆ, ರಾಜ್ಯ ಮಟ್ಟದಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟ ಪರಿಣಾಮ ಕೊಳ್ಳೇಗಾಲ ಕ್ಷೇತ್ರ ಜೆಡಿಯು ಪಾಲಾಯಿತು. ಸರ್ವೇಶ ಬಸವಯ್ಯ ಜೆಡಿಯು ಅಭ್ಯರ್ಥಿಯಾಗಿ ಕಣದಲ್ಲುಳಿದರು. ಕೊನೆವರೆವಿಗೂ ಕಾದು ನಿರಾಶರಾದ ಬಾಲರಾಜು ಕೊನೆಗೂ ಬೇಸತ್ತು ಕಣ್ಣಿರಿಟ್ಟು ಅಪಾರ ಬೆಂಬಲಿಗರು, ತಮ್ಮ ಅಭಿಮಾನಿಗಳ ಸಭೆ ನಡೆಸಿ ಕೊನೆಗೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಜೆಡಿಎಸ್ನಿಂದ ಕಣದಲ್ಲಿದ್ದ ಮಾಜಿ ಶಾಸಕ ಎಸ್.ಜಯಣ್ಣ ನೀವು ಕಣದಿಂದ ಹಿಂದೆ ಸರಿಯಿರಿ.
ನಮ್ಮ ಪಕ್ಷದಲ್ಲಿ ಗುರ್ತಿಸಿಕೊಳ್ಳಿ, ಜಿಪಂ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಕೊಡಿಸಿ ಗೆಲ್ಲಿಸುವ ಜವಾಬ್ದಾರಿ ನಮ್ಮದು, ನಾನು ಶಾಸಕರಾದ ಬಳಿಕ ನಿಮ್ಮ ಕೆಲಸ ಕಾರ್ಯಗಳನ್ನು ಸುಗಮ ರೀತಿಯಲ್ಲಿ ನೆರವೆರಿಸಿಕೊಡುವುದಾಗಿ ಭರವಸೆ ನೀಡಿದರು. ಆದರೆ, ಬಾಲರಾಜು ತಮ್ಮ ಬೆಂಬಲಿಗರ ಮಾತಿಗೆ ಕಟ್ಟು ಬಿದ್ದು ಹಿಂದೆ ಸರಿಯಲು ಒಪ್ಪಲಿಲ್ಲ, ತದ ನಂತರ ಜಯಣ್ಣ ಅವರ ಕೆಲ ಬೆಂಬಲಿಗರು ಬಾಲರಾಜು ಅವರಿಗೆ ಹಣ ನೀಡಿ ಸರಿ ಮಾಡಿಕೊಂಡಿದ್ದೇವೆ ಕೊನೆ ಕ್ಷಣದಲ್ಲಿ ಅವರು ನಾಮಪತ್ರ ವಾಪಸ್ ಪಡೆದೇ ಪಡೆಯುತ್ತಾರೆ ಎಂಬ ಉಹಾಪೋಹ ಹಬ್ಬಿಸಿದ್ದರು.
ಇದಕ್ಕೆ ತಲೆಕೆಡೆಸಿಕೊಳ್ಳದ ಎಸ್.ಬಾಲರಾಜು ಅಭಿಮಾನಿಗಳ ಪಡೆಯೊಂದಿಗೆ ಜನರ ಮುಂದೆ ತೆರಳಿ ಪಕ್ಷೇತರ ಅಭ್ಯರ್ಥಿಯಾಗಿ 27, 736 ಮತ ಪಡೆದು ಮೀಸಲು ಕ್ಷೇತ್ರದಲ್ಲಿ ಗೆದ್ದ ಏಕೈಕ ಪಕ್ಷೇತರ ಶಾಸಕ ಎಂಬ ಖ್ಯಾತಿ ಪಡೆದರು.
ಪಕ್ಷೇತರವಾಗಿ ಗೆದ್ದು ಹೋಗಿದ್ದ ಬಾಲರಾಜುಗೆ ಜೆಡಿಎಸ್ನ ರಾಜ್ಯ ಮಟ್ಟದ ನಾಯಕರು ಹತ್ತಿರವಾದರು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹತ್ತಿರದಿಂದ ಗುರುತಿಸುವಷ್ಟರ ಮಟ್ಟಿಗೆ ವಿಶ್ವಾಸ ಬೆಳೆಸಿಕೊಂಡಿದ್ದರು. ಆದರೆ ನಂತರ ಕುಮಾರಸ್ವಾಮಿ ಅವರು ಯಡಿಯೂರಪ್ಪಗೆ ಅಧಿಕಾರ ಕೊಡಲು ಹಿಂದೇಟು ಹಾಕಿದ ಪರಿಣಾಮ, ಜಿಲ್ಲೆಯಲ್ಲಿ ಜೆಡಿಎಸ್ ವಿರೋಧಿ ಅಲೆಕಾಣಿಸಿ ಕೊಂಡಿತು.
ಇದರಿಂದ ಎಚ್ಚೆತ್ತುಕೊಂಡ ಬಾಲರಾಜು ಕಾಂಗ್ರೆಸ್ಗೆ ಹಾರಲು ನೋಡಿದರು. ಸಾಧ್ಯವಾಗಲಿಲ್ಲ, ಕೊನೆಗೂ ಜೆಡಿಎಸ್ ಸೇರುವಷ್ಟರಲ್ಲಿ ಸಂತೇಮರಹಳ್ಳಿ ಕ್ಷೇತ್ರ ರದ್ದಾದ
ಪರಿಣಾಮ ಜೆಡಿಎಸ್ ಟಿಕೆಟ್ ಸಹ ಕೈ ತಪ್ಪಿ ಹೋಯಿತು. ಹೀಗಾಗಿ ಮತ್ತೇ ಪಕ್ಷೇತರ ಅಭ್ಯರ್ಥಿಯಾಗಿ ಸ್ರರ್ಧಿಸಿ 11, 805 ಮತ ಪಡೆದು ಠೇವಣಿ ಕಳೆದುಕೊಂಡರು.
ಮತ್ತೆ ಕುಮಾರಸ್ವಾಮಿ ವಿಶ್ವಾಸ ಗಿಟ್ಟಿಸಿ 2009ರ ಕೊಳ್ಳೇಗಾಲ ಮೀಸಲು ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ 25 ಸಾವಿರ ಮತ ಪಡೆದರೂ ಗೆಲವು ಸಾಧಿಸಲು ಸಾಧ್ಯವಾಗಲಿಲ್ಲ. ಇದೀಗ 2013ರ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕೆಜೆಪಿ ಅಭ್ಯರ್ಥಿಯಾಗಿ ಬಾಲರಾಜು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
- ಎನ್.ನಾಗೇಂದ್ರಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

