ಕಾನೂನು ಬಾಹಿರ ಚಂದಾ
ಕ.ಪ್ರ.ವಾರ್ತೆ, ನರಸಿಂಹರಾಜಪುರ. ಏ.2
ಜಾಮೀಯಾ ಮಸೀದಿ ಹಕ್ಕಿಗೆ ಒಳಪಟ್ಟ ಹಜರತ್ ಹಯಾತ್ ಷಾ ವಲಿ ದರ್ಗಾ ಕಟ್ಟಡ ಸಹಾಯಾರ್ಥವಾಗಿ 2011 ಹಾಗೂ 2012 ನೇ ಸಾಲಿನ ದರ್ಗಾ ಸಮಿತಿಯ ಅಧ್ಯಕ್ಷರು 2013 ನೇ ಸಾಲಿನಲ್ಲೂ ಸಾರ್ವಜನಿಕರಿಂದ ಚಂದಾ ಹಣ ವಸೂಲಿ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಜಾಮೀಯ ಮಸೀದಿಯ ಸಲಹಾ ಸಮಿತಿ ಸದಸ್ಯ ಸೈಯದ್ ಸಾದಿಕ್ ಪಾಷಾ ಆರೋಪಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾಮೀಯ ಮಸೀದಿ ಆಡಳಿತಾಧಿಕಾರಿಯನ್ನಾಗಿ ಮುಜೀಬ್ ಖಾನ್ ಅವರನ್ನು ಕರ್ನಾಟಕ ವಕ್ಫ್ ಮಂಡಳಿ 2012 ರಲ್ಲಿ ನೇಮಕ ಮಾಡಿದೆ. ಆಡಳಿತಾಧಿಕಾರಿಯ ಜವಾಬ್ದಾರಿಯಲ್ಲಿ ಜಾಮೀಯ ಮಸೀದಿ, ಶಾದಿ ಮಹಲ್, ಬ್ಯಾಂಕ್ ಕಾಂಪ್ಲೆಕ್ಸ್, 5 ದರ್ಗಾಗಳು, ಈದ್ಗಾ ಪ್ರದೇಶ ಬರಲಿದೆ ಎಂದು ಅವರು ತಿಳಿಸಿದರು.
ಚಂದಾ ವಸೂಲಿ: 2011 ಮತ್ತು 12 ನೇ ಸಾಲಿನ ದರ್ಗಾ ಉರುಸ್ ಸಮಿತಿ ಅಧ್ಯಕ್ಷರಾಗಿದ್ದ ಶಬೀರ್ ಅವರ ಅಧಿಕಾರದ ಅವಧಿ 2012 ರ ಮೇ 1 ಕ್ಕೆ ಮುಕ್ತಾಯವಾಗಿದೆ. ಈ ಬಗ್ಗೆ ಜಾಮೀಯ ಮಸೀದಿ ಅಧ್ಯಕ್ಷರು 2012 ರಲ್ಲಿ ಮನದಟ್ಟು ಮಾಡಿದ್ದರು. ಆದರೂ, ಹಿಂದಿನ ಸಾಲಿನ ದರ್ಗಾ ಉರುಸ್ ಸಮಿತಿಯ ಅಧ್ಯಕ್ಷರು 2013 ನೇ ಸಾಲಿನಲ್ಲೂ ಹಜರತ್ ಷಾ ವಲಿ ದರ್ಗಾ ಕಟ್ಟಡದ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದವರು ಹೇಳಿದರು.
ಅಧಿಕಾರದ ಅವಧಿ ಮುಗಿದಿದ್ದರೂ ಈ ವರ್ಷದ ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ಚಂದಾ ಹಣ ವಸೂಲಿ ಮಾಡುತ್ತಿರುವುದು ತಪ್ಪು ಎಂದು ಜಾಮೀಯ ಮಸೀದಿ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
2012ರ ಏಪ್ರಿಲ್ 30 ಕ್ಕೆ ದರ್ಗಾ ಕಟ್ಟಡದ ಕಾಮಗಾರಿ ಮುಗಿದಿದೆ. ಕಟ್ಟಡದ ಉದ್ಘಾಟನೆಯೂ ಆಗಿದ್ದು, ಮತ್ತೆ ಕಟ್ಟಡಕ್ಕೆ ಚಂದಾ ವಸೂಲಿ ಮಾಡುತ್ತಿರುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಸಾರ್ವಜನಿಕರಿಗೆ ಆಧಾರ ರಹಿತ ಮಾಹಿತಿ ನೀಡಿ ಚಂದಾ ವಸೂಲಿ ಮಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದು ಅವರು ತಿಳಿಸಿದರು.
ಲೆಕ್ಕ ಪತ್ರ ಪರಿಶೋಧನೆ: ರಾಜ್ಯ ವಕ್ಫ್ ಮಂಡಳಿಯಿಂದ ಆಡಿಟರ್ ನೇಮಿಸಲಾಗಿದೆ. ಏ.15 ರಂದು ಆಡಿಟರ್ ನರಸಿಂಹರಾಜಪುರಕ್ಕೆ ಬಂದು ಸಂಪೂರ್ಣ ಲೆಕ್ಕ ಪರಿಶೋಧನೆ ತನಿಖೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಮುಖಂಡ ಅಬ್ದುಲ್ ಘನಿ, ಅಲ್ನೂರ್ ಮಸೀದಿ ಅಧ್ಯಕ್ಷ ಗೌಸ್ ಬಾಷಾ, ದರ್ಗಾ ಉರುಸ್ ಸಮಿತಿಯ ನೂತನ ಅಧ್ಯಕ್ಷ ಮುನಾವರ್ ಪಾಷ, ಮಹಮ್ಮದ್ ಇಬ್ರಾಹಿಂ, ಸಮೀರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

