ಚಿಕ್ಕಮಗಳೂರು

ಪ್ರಥಮ ಚುನಾವಣೆಯಲ್ಲೇ ಮಹಿಳೆ ಜಯ

Published On :

ಕಪ್ರ ವಾರ್ತೆ, ಚಿಕ್ಕಮಗಳೂರು, ಏ.3
ಮಹಿಳೆಯರಿಗೆ ಶೇ.35 ರಷ್ಟು ಪ್ರಾತಿನಿಧ್ಯ ನೀಡಲಾಗಿದೆ. ಈ ಮೀಸಲಾತಿಯನ್ನು ಶೇ. 50ಕ್ಕೆ ಏರಿಸಬೇಕೆಂಬ ಮಹಿಳೆಯರ ಧ್ವನಿ ಆಗಾಗ ಪ್ರತಿಧ್ವನಿಸುತ್ತಿದೆ.
   ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮತದಾರರು 1952ರಲ್ಲೇ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದಾರೆ. ದೇಶದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿ.ಎಲ್. ಸುಬ್ಬಮ್ಮ ಅವರನ್ನು ಇಲ್ಲಿನ ಮತದಾರರು ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದರು.
   ಜಿಲ್ಲೆಯಲ್ಲಿ ಈವರೆಗೆ ನಡೆದಿರುವ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಪುಟಗಳನ್ನು ತಿರುವಿ ಹಾಕಿದರೆ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಹಿಳೆಯೋರ್ವರು ಪ್ರಥಮ ಚುನಾವಣೆಯಲ್ಲಿ ಜಯಗಳಿಸಿರುವುದಕ್ಕೆ ಮಹಿಳೆಯರು ಹೆಮ್ಮೆ ಪಡಬೇಕು.
ಭದ್ರಕೋಟೆ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ, ಇದಕ್ಕೆ ಬಹಳಷ್ಟು ಸಾಕಷ್ಟು ಪುರಾವೆಗಳಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಎಲ್ಲರ ಮನೆ ಮಾತಾಗಿತ್ತು. 1952ರಲ್ಲಿ ಚುನಾವಣೆ ನಡೆದಾಗ ಚಿಕ್ಕಮಗಳೂರು ಹಾಗೂ ಮೂಡಿಗೆರೆ ಕ್ಷೇತ್ರಗಳು ಒಂದಾಗಿದ್ದವು. ಇಬ್ಬರನ್ನು ಆಯ್ಕೆ ಮಾಡಬೇಕಾಗಿತ್ತು. ಆಗ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಬಿ.ಎಲ್. ಸುಬ್ಬಮ್ಮ, ಹಾಗೂ ಜಿ. ಪುಟ್ಟಸ್ವಾಮಿ ಜಯಗಳಿಸಿದರು.
  1957ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಎ.ಎಂ. ಬಸವೇಗೌಡ  ಹಾಗೂ ಕಾಂಗ್ರೆಸ್‌ನಿಂದ ಎಲ್. ಎಚ್. ತಿಮ್ಮಬೋವಿ ಜಯಗಳಿದರು.
 1962ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಪ್ರತ್ಯೇಕವಾಗಿ ರೂಪುಗೊಂಡಿತು. ಆಗ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್. ಸುಬ್ಬಮ್ಮ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. ಆದರೆ, 1967ರ ಚುನಾವಣೆಯಲ್ಲಿ ಬಿ.ಎಲ್. ಸುಬ್ಬಮ್ಮ ಸೋತರು. ಆಗ ಪಿಎಸ್‌ಪಿಯಿಂದ ಸ್ಪರ್ಧೆ ಮಾಡಿದ್ದ ಸಿಎಂಎಸ್ ಶಾಸ್ತ್ರಿ ಜಯಗಳಿಸಿದರು.
1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಇ.ಇ. ವಾಜ್ ಜಯಗಳಿಸಿದರು.
  ದೇಶದಲ್ಲಿ ತುರ್ತು ಪರಿಸ್ಥಿತಿಯ ದಿನಗಳು ಕಳೆದ ಮೇಲೆ ಅಂದರೆ 1978ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ (ಐ)ಯಿಂದ ಸ್ಪರ್ಧೆ ಮಾಡಿದ್ದ ಸಿ.ಎ. ಚಂದ್ರೇಗೌಡ ಜಯಗಳಿಸಿದರು.
 1983ರಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಚ್.ಎ. ನಾರಾಯಣಗೌಡ ವಿಧಾನಸಭೆಗೆ ಆಯ್ಕೆಯಾದರು. 1985ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಐ.ಬಿ. ಶಂಕರ್ ಜಯಗಳಿಸಿದರು.
 1989ರಿಂದ 1999ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಸಿ.ಆರ್. ಸಗೀರ್ ಅಹಮದ್ ಹ್ಯಾಟ್ರಿಕ್ ಗೆಲವು ಸಾಧಿಸಿದರು. 1999ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸಿ.ಟಿ. ರವಿ ಎರಡನೇ ಸ್ಥಾನದಲ್ಲಿದ್ದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಸಿ.ಟಿ. ರವಿ ಗೆಲುವು ಸಾಧಿಸಿದರು. ಆಗ ಸಗೀರ್ ಅಹಮದ್ ಎರಡನೇ ಸ್ಥಾನದಲ್ಲಿದ್ದರು.
   2008ರ ಚುನಾವಣೆಯಲ್ಲಿ ಸಿ.ಟಿ. ರವಿ ಎರಡನೇ ಬಾರಿ ಗೆಲುವು ಸಾಧಿಸಿದರು. ಆಗ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಬೋಜೇಗೌಡ ಎರಡನೇ ಸ್ಥಾನ, ಕಾಂಗ್ರೆಸ್‌ನ ಕೆ.ಬಿ. ಮಲ್ಲಿಕಾರ್ಜುನ್ ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಯಿತು.
 ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಒಟ್ಟು 13 ಚುನಾವಣೆಗಳಲ್ಲಿ ಕಾಂಗ್ರೆಸ್- 7, ಬಿಜೆಪಿ- 2, ಪಕ್ಷೇತರ- 2, ಪಿಎಸ್‌ಪಿ-1, ಜೆಎನ್‌ಪಿ- 1 ಬಾರಿ ಗೆಲವು ಸಾಧಿಸಿದೆ. ಆದರೆ, ಜೆಡಿಎಸ್ ಈ ಕ್ಷೇತ್ರದಲ್ಲಿ ಒಮ್ಮೆಯೂ ಗೆಲುವು ಸಾಧಿಸಿಲ್ಲ. 2013ರ ಮೇ 5 ರಂದು ನಡೆಯಲಿರುವ ಚುನಾವಣೆಯಲ್ಲಿ ಯಾರು ಅದೃಷ್ಟವಂತರು ಎಂಬುದನ್ನು ಕಾದು ನೋಡಬೇಕಿದೆ.
-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.