ಚಿಕ್ಕಮಗಳೂರು

ಮರಳು ದಂಧೆಗೆ ತಾತ್ಕಾಲಿಕ ಬ್ರೇಕ್

Published On :

ಕ.ಪ್ರ.ವಾರ್ತೆ, ನರಸಿಂಹರಾಜಪುರ, ಏ.5
ಬೇಸಿಗೆ ಬರುತ್ತಿದ್ದಂತೆ ಬತ್ತಿದ ಹಳ್ಳಗಳಿಂದ ಹಾಗೂ ಭದ್ರಾ ಹಿನ್ನೀರಿನಲ್ಲಿ ನಿರಂತರವಾಗಿ ಮರುಳು ದಂಧೆ ನಡೆಯುತ್ತಿದೆ. ಪರಿಸರದ ಮೇಲೆ ನಡೆಯತ್ತಿರುವ ಅತ್ಯಾಚಾರದ ವಿರುದ್ಧ ಹಿಳುವಳ್ಳಿ ಗ್ರಾಮದ ಯುವಕರೇ ಮರುಳು ರಕ್ಷಣೆಗೆ ನಿಂತು ಯಶಸ್ವಿಯಾಗಿದ್ದಾರೆ.
ಪಟ್ಟಣಕ್ಕೆ ಹೊಂದಿಕೊಂಡಿರುವ ಹಿಳುವಳ್ಳಿ ಗ್ರಾಮದ ವಿನಾಯಕ ಯುವಕ ಸಂಘ ಭದ್ರಾ ಹಿನ್ನೀರಿನಲ್ಲಿ ನಡೆಯುತ್ತಿದ್ದ ಮರುಳು ದಂಧೆಗೆ ಕಡಿವಾಣ ಹಾಕಿ ಪರಿಸರ ಪ್ರೇಮ ಮೆರೆದಿದ್ದಾರೆ. ಪಟ್ಟಣದ ಹಳೇ ಮಂಡಗದ್ದೆ ಸರ್ಕಲ್‌ನಿಂದ ಶಾರದಾ ವಿದ್ಯಾಮಂದಿರದ ರಸ್ತೆಯಲ್ಲಿ ಹಿಂದೆ ಶಿವಮೊಗ್ಗ ಸಂಪರ್ಕ ಸೇತುವೆಯಾಗಿ ಬ್ರಿಟಿಷರು ಕಟ್ಟಿದ ಇತಿಹಾಸದ ಸೇತುವೆಯೂ ಇದೆ. ಮಳೆಗಾಲದಲ್ಲಿ ಈ ಸೇತುವೆ ಮುಳುಗಿ ಹೋಗಲಿದೆ.
ಬೇಸಿಗೆಯಲ್ಲಿ ಸೇತುವೆ ಕಾಣುತ್ತದೆ. ಈ ಭಾಗದಲ್ಲಿ ಬೇಸಿಗೆ ದಿನಗಳಲ್ಲಿ ಹಿಟಾಚಿ, ಟ್ರಾಕ್ಟರ್‌ನೊಂದಿಗೆ ಬರುವ ಅಕ್ರಮ ಮರಳು ದಂಧೆಕೋರರು ಗುಂಡಿಗಳನ್ನು ಮಾಡಿ ಮಣ್ಣು, ಮರಳು ತೆಗೆದು ಟ್ರಾಕ್ಟರ್‌ನಲ್ಲಿ ಸಾಗಿಸುತ್ತಾರೆ. ಬೇರೆ ಸ್ಥಳದಲ್ಲಿ ಮರುಳು ಕಾಟಿಂಗ್ ಮಾಡಿದ ಮರಳನ್ನು ಮಳೆಗಾಲದಲ್ಲಿ ಒಂದಕ್ಕೆ ಎರಡು ಪಟ್ಟು ಧರದಲ್ಲಿ ಮಾರಾಟ ಮಾಡಿ ಹಣ ಮಾಡುತ್ತಾರೆ.
ಮರಳಿಗೆ ಚಿನ್ನದ ಬೆಲೆ: ಹಿಂದೆ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ಮರಳಿನ ಬೆಲೆ ಈಗ ಗಗನಕ್ಕೇರಿದ್ದು ಚಿನ್ನದ ಬೆಲೆ ಬಂದಿದೆ. ಬೇಸಿಗೆಯಲ್ಲಿ ಕಡಿಮೆ ಬೆಲೆ ಸಿಗುವ ಮರುಳು ಮಳೆಗಾಲದಲ್ಲಿ ದುಪ್ಪಟ್ಟು ದರವಾಗಲಿದೆ. ಆ ಸಮಯದಲ್ಲಿ ಕಟ್ಟಡದ ಮಾಲೀಕರಿಗೆ ಮರಳು ಅನಿವಾರ್ಯವಾಗಿದ್ದು, ಕೇಳಿದಷ್ಟು ಹಣ ಕೊಡಲು ತಯಾರಿರುತ್ತಾರೆ. ಇದನ್ನು ದುರುಪಯೋಗ ಪಡೆದುಕೊಳ್ಳುವ ಮರುಳು ದಂಧೆಗಾರರು ಮರಳು ಶೇಖರಣೆ ಮಾಡಿ ಮಾರಾಟ ಮಾಡುತ್ತಾರೆ. ಈ ದಂಧೆ ಮಾಡುವವರು ಯಾವುದೇ ಕಾನೂನು ಚೌಕಟ್ಟಿನೊಳಗೆ ಪರವಾನಿಗೆ ಪಡೆಯದೆ ದಂಧೆ ಮಾಡುತ್ತಾರೆ. ಇದರ ಪರಿಣಾಮದಿಂದ ಸಣ್ಣ ಮನೆ ಕಟ್ಟಿಕೊಳ್ಳುವ ಬಡವರಿಗೆ ಮರಳು ಗಗನ ಕುಸಮವಾಗುತ್ತದೆ. ಬಲಿಷ್ಠರಾದ ಮರುಳು ದಂಧೆಕೋರರು ಗ್ರಾಮಸ್ಥರನ್ನು ಹೆದರಿಸಿ ದಂಧೆ ಮಾಡುತ್ತಾರೆ.
ಯುವಕರಿಂದ ಪ್ರತಿಭಟನೆ: ಹಿಳುವಳ್ಳಿ ಗ್ರಾಮದಲ್ಲೂ ಭದ್ರಾ ಹಿನ್ನೀರಿನ ಮರುಳಿಗಾಗಿ ದಂಧೆಕೋರರು ಗುಂಡಿ ತೆಗೆದು ಅಕ್ರಮ ಮರುಳು ಸಾಗಾಣೆ ಮಾಡುತ್ತಿದ್ದರು. ಸ್ಥಳೀಯರಿಗೆ ಮರಳು ಕೊಡುತ್ತಿರಲಿಲ್ಲ. ಇದರಿಂದ ಆಕ್ರೋಶಗೊಂಡ ಹಿಳುವಳ್ಳಿ ವಿನಾಯಕ ಯುವಕ ಸಂಘ ಮರುಳು ದಂಧೆಕೋರರ ಟ್ರ್ಯಾಕ್ಟರ್ ಅಡ್ಡಹಾಕಿ ಮರುಳನ್ನು ತಡೆದು ನಿಲ್ಲಿಸಿ ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ಮರಳು ದಂಧೆಗೆ ಕಡಿವಾಣ ಬಿದ್ದಿದೆ. ಆದರೆ, ತಾಲೂಕಿನ ಉಳಿದ ಭಾಗದ ಭದ್ರಾ ಹಿನ್ನೀರು ಹಾಗೂ ಬತ್ತಿದ ಹಳ್ಳಗಳಲ್ಲಿ ಮುಂದುವರಿಯುತ್ತಿದೆ.
ಅಪಾಯ ತರುವ ಗುಂಡಿಗಳು: ಭದ್ರಾ ಹಿನ್ನೀರು ಹಾಗೂ ಬತ್ತಿದ ಹಳ್ಳಗಳಲ್ಲಿ ಹಿಟಾಚಿಯಿಂದ ಮರಳಿಗಾಗಿ ತೆಗೆದಿರುವ ದೊಡ್ಡ ಗುಂಡಿಗಳು ಮೃತ್ಯುವಿಗೆ ಆಹ್ವಾನಿಸಿದಂತೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತಂಬಿ ಈಜಲು ಹೋದವರು, ಮೀನುಗಾರರು ಗುಂಡಿಯನ್ನು ಗಮನಿಸದೆ ಮುಳುಗಿ ಜೀವ ತೆತ್ತ ಉದಾಹರಣೆ ಇದೆ ಎನ್ನುತ್ತಾರೆ ಹಿಳುವಳ್ಳಿಯ ವಿನಾಯಕ ಯುವಕ ಸಂಘದ ಕಾರ್ಯದರ್ಶಿ ಗುರುಶಾಂತಪ್ಪ ಹಾಗೂ ಸದಸ್ಯರಾದ ಶ್ರೀಕಾಂತ್, ರಾಜೇಶ್.
 ಭದ್ರಾ ಹಿನ್ನೀರು ಹಾಗೂ ಬತ್ತಿದ ಹಳ್ಳಗಳಿಂದ ಆಯಾ ಗ್ರಾಮದ ಬಡವರಿಗೆ ಮನೆ ಕಟ್ಟಿಕೊಳ್ಳಲು ನಿರ್ದಿಷ್ಠ ಪ್ರಮಾಣದಲ್ಲಿ ಮರುಳು ತೆಗೆಯಲು ಪರವಾನಿಗೆ ನೀಡಬೇಕು. ವ್ಯಾಪಾರಿಗಳಿಗೆ ಮರಳು ತೆಗೆಯಲು ಅವಕಾಶ ನೀಡಬಾರದು. ಪರಿಸರದ ಮೇಲೆ ಆಗುತ್ತಿರುವ ಹಾನಿಯನ್ನು ತಡೆಗಟ್ಟಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
-ಯಡಗೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.