ಚಿಕ್ಕಮಗಳೂರು

ಹುಲಿ ಉಗುರು ಮಾರಾಟ ಜಾಲ ಪತ್ತೆ: ಬಂಧನ

Published On :

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.5
ಜಿಲ್ಲೆಯ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ದೇಹದ ಭಾಗಗಳನ್ನು  ಮಾರಾಟ ಮಾಡುತ್ತಿರುವ ತಂಡವನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಹೇಳಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಕನಕ ಹಾಗೂ ಶರವಣಕುಮಾರ್ ಎಂಬವರನ್ನು ಬಂಧಿಸಿ  ಅವರ ಬಳಿ ಇದ್ದ ಹುಲಿಯ ನಾಲ್ಕು ಉಗುರು ಮತ್ತು ಕಾಡು ಪ್ರಾಣಿಗಳ ಭೇಟಿಗೆ ಬಳಸಿದ್ದ ಬಲೆಗಳನ್ನು ವಶಕ್ಕೆ  ತೆಗೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನು ಕೆಲವರು ಇರುವ ಶಂಕೆ ಇದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭದ್ರಾ ಅಭಯಾರಣ್ಯ, ದಾಂಡೇಲಿ ಅರಣ್ಯ ಪ್ರದೇಶಗಳಲ್ಲಿ ಹುಲಿಗಳಿರುವುದನ್ನು ಅರಣ್ಯ ಇಲಾಖೆ ದೃಢಪಡಿಸಿದೆ. ನಮ್ಮ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಹುಲಿಗಳು ಆಸುಪಾಸಿನಲ್ಲಿರುವ ಎಮ್ಮೆದೊಡ್ಡಿ, ಸಾರಗೋಡು, ಮಸಗಲಿ  ಸೇರಿದಂತೆ ಇತರೆ ಭಾಗದಲ್ಲಿ ಓಡಾಡುತ್ತಿವೆ. ಇತ್ತೀಚೆಗೆ ಎನ್.ಆರ್.ಪುರದ ವ್ಯಕ್ತಿಯೊಬ್ಬ ಹುಲಿಯನ್ನು ಕೊಂದು ಅದರ ಚರ್ಮ ಮಾರಾಟ ಮಾಡಿರುವುದು ಕೇರಳದಲ್ಲಿ ಪತ್ತೆ ಹಚ್ಚಲಾಗಿದೆ ಎಂದರು.
ಪೊಲೀಸರ ದಾಳಿ: ಪ್ರಕರಣದ ನಂತರದಲ್ಲಿ ಜಿಲ್ಲೆಯ ಪೊಲೀಸರು ಉತ್ತರ ಕನ್ನಡ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ, ಅವರು ಕೊಟ್ಟ ಮಾಹಿತಿ ಮೇರೆಗೆ ಮಲ್ಲೇನಹಳ್ಳಿಯ ಹಕ್ಕಿಪಿಕ್ಕಿ ಕಾಲೋನಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಹುಲಿಯ 4 ಉಗುರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಸ್ಥಳೀಯರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಹಲ್ಲೆಯೂ ನಡೆಸಿದ್ದಾರೆ ಎಂದರು. ಹುಲಿಗಳ ಉಗುರು ಸಿಕ್ಕಿವೆ. ಮುಂದಿನ ತನಿಖೆಯಲ್ಲಿ ಮತ್ತಷ್ಟು ಮಾಹಿತಿ ಸಿಗುವ ವಿಶ್ವಾಸ ಇದೆ ಎಂದರು.
ಹಕ್ಕಿಪಿಕ್ಕಿ ಕಾಲೋನಿಯಲ್ಲಿರುವವರು ಕಾಡು ಪ್ರಾಣಿಗಳ ಬೇಟೆಗಾಗಿ ಬಲೆ ಸಿದ್ಧಪಡಿಸಿದ್ದು, ಅವುಗಳಿಂದ ಹುಲಿ, ಚಿರತೆ ಇತರೆ ಪ್ರಾಣಿಗಳನ್ನು ಹಿಡಿದು, ಅವುಗಳ ಕೂದಲು, ಚರ್ಮ ಸೇರಿದಂತೆ ದೇಹದ ಭಾಗಗಳನ್ನು ಮಾರಾಟ ಮಾಡುತ್ತಿದ್ದಾರೆ.
ಜಾಲದ ಶಂಕೆ: ನೆರೆಯ ಹಾಸನ, ಶಿವಮೊಗ್ಗ ಹಾಗೂ ಉತ್ತರ ಕನ್ನಡದಲ್ಲೂ ಈ ಜನಾಂಗದವರು ವಾಸವಾಗಿದ್ದಾರೆ. ಈ ದಂಧೆ ಬರೀ ಜಿಲ್ಲೆ, ರಾಜ್ಯಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಾಡು ಪ್ರಾಣಿಗಳ ದೇಹದ ಭಾಗಗಳನ್ನು ಮಾರಾಟ ಮಾಡುವವರ ಜಾಲ ಇರುವ ಶಂಕೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಮಧುಸೂದನ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.