ನೀತಿ ಸಂಹಿತೆ ಜಾರಿಗೆ ಕಣ್ಗಾವಲು ತಂಡ
ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಏ.7
ಮತದಾನದ ಪ್ರಮಾಣ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಹಲವಾರು ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡಿದೆ. ಇದರ ಜತೆಗೆ ನೀತಿ ಸಂಹಿತೆ ಜಾರಿಗೆ 24 ಗಂಟೆಗಳ ಕಣ್ಗಾವಲು ತಂಡಗಳನ್ನು ರಚನೆ ಮಾಡಲಾಗಿದೆ.
ಮತದಾರರ ನೋಂದಣಿ ಮತ್ತು ಮತದಾನ ಶೇಖಡಾವಾರು ಪ್ರಮಾಣವನ್ನು ಹೆಚ್ಚಳ ಮಾಡಲು ಚುನಾವಣಾ ಆಯೋಗ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಎಂಬ ಕಾರ್ಯಕ್ರಮವನ್ನು ಈ ಬಾರಿ ಜಾರಿಗೆ ತಂದಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಜಾಥಾ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆದಿದೆ. ಇದಲ್ಲದೆ ವಿವಿಧ ಇಲಾಖೆಗಳು ತಮ್ಮದೇ ಆದ ಯೋಜನೆಗಳನ್ನು ರೂಪಿಸಿ ಮತದಾರರಲ್ಲಿ ಮತದಾನದ ಮಹತ್ವ ತಿಳಿಸುವತ್ತ ಹೆಜ್ಜೆ ಹಾಕುತ್ತಿದೆ.
ಜಾಗೃತಿ ಕಾರ್ಯ: ಇದರಲ್ಲಿ ಮುಖ್ಯವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ದೊಡ್ಡ ಗಾತ್ರದ ಫಲಕಗಳನ್ನು ಹಾಕುವ ಮೂಲಕ ಮತದಾರರನ್ನು ಆಕರ್ಷಿಸುವ ಕಾರ್ಯ ನಡೆದಿದೆ. ಮುಖ್ಯವಾಗಿ ಜಿಲ್ಲಾ, ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಇಂತಹ ಫಲಕಗಳನ್ನು ಅಳವಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಕೈಹಾಕಿದೆ.
ರಾಜ್ಯ ಸರಕಾರದ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಲು ಜಿಲ್ಲೆಯ ವಿವಿಧೆಡೆ ವಾರ್ತಾ ಇಲಾಖೆಯಿಂದ 42 ಹಾಗೂ ಕಂದಾಯ ಇಲಾಖೆಯಿಂದ 34 ಹೋಬಳಿ ಕೇಂದ್ರಗಳಲ್ಲಿ ಹೆದ್ದಾರಿ ಫಲಕಗಳನ್ನು ಅಳವಡಿಸಿ, ಅವುಗಳಲ್ಲಿ ಫ್ಲೆಕ್ಸ್ ವಿನೈಲ್ ಅಂಟಿಸಲಾಗಿತ್ತು. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಈ ಫಲಕಗಳಲ್ಲಿರುವ ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಗಿತ್ತು.
ಫ್ಲೆಕ್ಸ್ ಅಳವಡಿಕೆ ಪೂರ್ಣ: ಈಗ ಇದೇ ಹೆದ್ದಾರಿ ಫಲಕಗಳಲ್ಲಿಯೇ ಮತದಾರರಿಗೆ ಅರಿವು ಮೂಡಿಸುವ ಸಂದೇಶಗಳನ್ನು ತಿಳಿಸುವ ಫಲಕಗಳನ್ನು ಹಾಕಿಸುವ ಮೂಲಕ ಜಿಲ್ಲಾಡಳಿತ ವಿನೂತನ ಕಾರ್ಯಕ್ರಮ ನಡೆಸಿದೆ. ಈಗಾಗಲೇ ಎಲ್ಲಾ ಹೆದ್ದಾರಿ ಫಲಕಗಳಲ್ಲೂ ಫ್ಲೆಕ್ಸ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದರ್ ಸಿಂಗ್ ದೋಣಿ, ಕನ್ನಡ ಚಿತ್ರನಟ ಪುನೀತ್ ರಾಜ್ಕುಮಾರ್, ನಟಿ ಐಂದ್ರಿತಾ ರೈ, ಖ್ಯಾತ ಕ್ರೀಡಾ ಆಟಗಾರ್ತಿ ನೈನಾ ಸೆಹವಾಲ್, ಮೇರಿ ಮತ್ತಿತರರ ಚಿತ್ರಗಳು ಮತ್ತು ಮತದಾನಕ್ಕೆ ಪ್ರೇರೇಪಿಸುವ ಆಕರ್ಷಕ ಸಂದೇಶವನ್ನೊಳಗೊಂಡ ಈ ಫಲಕಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ.
ಈ ಮೂಲಕ ಮೇ 5ರಂದು ನಡೆಯುವ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಯೆಡೆಗೆ ಹೆಜ್ಜೆ ಇಡಲು ಪ್ರಯತ್ನವನ್ನು ಜಿಲ್ಲಾಡಳಿತ ನಡೆಸುತ್ತಿದೆ.
ಕಾವಲಿಗೆ ತಂಡಗಳ ರಚನೆ: ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶಕ್ಕಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿ ತಂಡ ರಚಿಸಲಾಗಿದೆ. ಚುನಾವಣಾ ನೀತಿ ಸಂಹಿತೆಯಲ್ಲಿಯ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಗ್ರಾಮ ಹೋಬಳಿ ಮಟ್ಟದಲ್ಲಿ
ನಡೆಯುವ ಕಾರ್ಯಕ್ರಮಗಳು, ಚುನಾವಣಾ ಪ್ರಚಾರ ಸಭೆ, ಸಮಾರಂಭಗಳು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚು ವೆಚ್ಚ ಇತ್ಯಾದಿಗಳನ್ನು ವೀಕ್ಷಿಸಲು ಹಾಗೂ ಮಾದರಿ ನೀತಿ ಸಂಹಿತೆ ಕಾರ್ಯವನ್ನು ಯಶಸ್ವಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಅಧಿಕಾರಿಗಳನ್ನೊಳಗೊಂಡ ಹಗಲು ರಾತ್ರಿ ಸಂಚಾರಿ ದಳ ತಂಡವನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

