ಭಯೋತ್ಪಾದನೆಗೆ 'ಕೈ' ಕುಮ್ಮಕ್ಕು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ. 13
ರಾಷ್ಟ್ರದ ರಕ್ಷಣೆ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ರೀನಾ ಪ್ರಕಾಶ್ ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯ ಆವರಣದಲ್ಲಿ ಶನಿವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬೇಕೇ ಹೊರತು ಜನಪರ ಚಿಂತನೆಯಲ್ಲ.
ಜಾತಿವಾದದ ನೆಪವೊಡ್ಡಿ ಜನರ ಮನಸ್ಸು ಒಡೆಯುವ ಕೆಲಸ ವಿರೋಧ ಪಕ್ಷಗಳಿಂದ ನಡೆಯುತ್ತಿದೆ. ಇದನ್ನರಿತು ಮಹಿಳೆಯರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಟಾರ್ ಇಲ್ಲದ ರಸ್ತೆಗಳಿಲ್ಲ, ವಿದ್ಯುತ್ ಇಲ್ಲದ ಗ್ರಾಮಗಳಿಲ್ಲ, ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಹಲವು ಸೌಕರ್ಯಗಳನ್ನು ನೀಡಿ ಅಭಿವೃದ್ಧಿ ಮಾಡುವ ಮೂಲಕ ಸಾಮಾನ್ಯ ಜನರಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದ ಅವರು, ಚಿಕ್ಕಮಗಳೂರಿಗೆ ಸಚಿವ ರವಿಯವರು 800 ಕೋಟಿ ರೂ ವಿಶೇಷ ಅನುದಾನ ತರುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ ಎಂದರು.
ರಕ್ಷಣೆ ಭರವಸೆ ನೀಡಿ: ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿದವರಿಗೆ ಮಹಿಳೆಯರು ಒನಕೆ ಓಬವ್ವನ ರೀತಿ ರಕ್ಷಣೆ ನೀಡಿದರೆ ಬೇರಾವ ಶಕ್ತಿಗೂ ಜಗ್ಗುವುದಿಲ್ಲ.
ಜನಪರ ಕೆಲಸಕ್ಕೆ ವಿರುದ್ಧವಾಗಿ ನಿರಂತರ ಅಪಪ್ರಚಾರ ಮಾಡುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಷಡ್ಯಂತ್ರಕ್ಕೆ ನಿಮ್ಮ ರಕ್ಷಣೆಯ ಭರವಸೆ ಅಗತ್ಯ ಎಂದರು.
ಗೆಲವಿನ ವಿಶ್ವಾಸವಿದೆ: ಮೊದಲನೆ ಬಾರಿ ಚುನಾವಣೆ ಎದುರಿಸುವಾಗ ಮತದಾರರಿಗೆ ಆಶ್ವಾಸನೆಗಳ ಮೂಲಕ ನಂಬಿಸಬಹುದು. 2- 3ನೇ ಬಾರಿಗೆ ಸ್ಪರ್ಧಿಸುವಾಗ ಗುಂಡಿಗೆ ಗಟ್ಟಿ ಇರಬೇಕು.
ಏನು ಅಭಿವೃದ್ಧಿ ಮಾಡಿದ್ದೀರಿ, ಏಕೆ ಬಂದಿದ್ದೀರಿ ಎಂದು ಜನ ಪ್ರಶ್ನಿಸುತ್ತಾರೆ. ಆದರೆ, ಈ ಚುನಾವಣೆಗೆ ಸ್ಪರ್ಧಿಸಲು ಜನಾಭಿಪ್ರಾಯಕ್ಕೆ ನಾನು ಗ್ರಾಮಗಳಲ್ಲಿ ಮತದಾರರ ಬಳಿ ತೆರಳಿದಾಗ ಮತದಾರ ಆತ್ಮ ತೃಪ್ತಿಯಿಂದ ಸ್ವಾಗತಿಸಿ ಗೌರವದಿಂದ ಆಶೀರ್ವಾದ ನೀಡಿದ್ದು ಗೆಲುವಿನ ವಿಶ್ವಾಸ ಮೂಡಿಸಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಶಾಸಕ ಎಂ.ಪಿ. ಕುಮಾರಸ್ವಾಮಿ, ಜಿ.ಪಂ. ಸದಸ್ಯೆ ಭಾಗ್ಯ ರಂಗನಾಥ್, ಜಿಲ್ಲಾಧ್ಯಕ್ಷೆ ಗೀತಾ, ನಗರಾಧ್ಯಕ್ಷೆ ರೇಖಾ ಜಯಕುಮಾರ್, ನಗರಸಭಾ ಸದಸ್ಯರಾದ ಕವಿತಾ ಶೇಖರ್, ವನಿತಾ, ಹಿತಾಕ್ಷಿ ಚೆನ್ನಕೇಶವ, ಮುಖಂಡರಾದ ಸಿ.ಎಸ್. ರಂಗನಾಥ್, ವೀಣಾ ರತ್ನಾಕರ್ ಶೆಟ್ಟಿ, ಯಮುನಾ ಚೆನ್ನಬಸಪ್ಪ ಮೊದಲಾದವರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

