ಚಿಕ್ಕಮಗಳೂರು

ಚುನಾವಣಾ ಬಿಸಿ ನಡುವೆ ವರುಣ ಸಿಂಚನ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಏ.15
ಕಳೆದ ವರ್ಷಕ್ಕೆ ಹೋಲಿಸಿದರೆ ಬೇಸಿಗೆ ಬಿಸಿಲಿನ ಝಳ ಕಾವೇರುತ್ತಿದೆ. ಇದನ್ನು ಮೀರಿ ಚುನಾವಣಾ ಪ್ರಚಾರದ ಅಬ್ಬರ ಸಾಗುತ್ತಿದೆ.
ಸೋಮವಾರದಂದು ಚಿಕ್ಕಮಗಳೂರು ನಗರದಲ್ಲಿ ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮುರ್ಹೂತ ನಿಗದಿಪಡಿಸಿದ್ದರು. ರಾಜಕೀಯ ಪಕ್ಷದವರು ನಗರವೂ ಸೇರಿದಂತೆ ಕ್ಷೇತ್ರದ ವಿವಿಧೆಡೆಗಳಿಂದ ಜನರನ್ನು ವಾಹನಗಳಲ್ಲಿ ನಗರಕ್ಕೆ ಕರೆಸಿಕೊಂಡಿದ್ದರು. ಪಕ್ಷಗಳ ಕಚೇರಿ ಎದುರು ವಾಹನಗಳು ಸಾಲುಗಟ್ಟಿ ನಿಂತಿರುವುದು ಹಲವೆಡೆ ಕಂಡು ಬಂದಿತು.
ತಂಡೋಪತಂಡ: ನಗರದ ಎಂ.ಜಿ. ರಸ್ತೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮೆರವಣಿಗೆಯಲ್ಲಿ ತಂಡೋಪ ತಂಡದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಇಲ್ಲಿನ ಹನುಮಂತಪ್ಪ ವೃತ್ತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೆರವಣಿಗೆ ಪರಸ್ಪರ ಮುಖಾಮುಖಿಯಾದವು. ಮಧ್ಯಾಹ್ನ 1.30ರ ವೇಳೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತು ಸಿಪಿಐ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಮೆರವಣಿಗೆಯ ಉದ್ದಕ್ಕೂ ಹಾಗೂ ಚುನಾವಣಾ ಕಚೇರಿಯ ಹೊರ ಭಾಗದಲ್ಲಿ ರಾಜಕೀಯ ಪಕ್ಷಗಳ ಬೆಂಬಲಿಗರು ತಮ್ಮ ಅಭ್ಯರ್ಥಿಳ ಪರವಾಗಿ ಘೋಷಣೆ ಹಾಕುತ್ತಿದ್ದರು.
ಮಜ್ಜಿಗೆ ವಿತರಣೆ: ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಅವರು ನಾಮಪತ್ರ ಸಲ್ಲಿಸಿದ ಬಳಿಕ ಎಂ.ಜಿ. ರಸ್ತೆಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದರು. ಈ ಮೆರವಣಿಗೆ ಆಜಾದ್ ಪಾರ್ಕ್ ಸಮೀಪಕ್ಕೆ ಬರುತ್ತಿದ್ದಂತೆ ಧಾರಾಕಾರವಾಗಿ ಗುಡುಗು ಸಹಿತ ಮಳೆ ಸುರಿಯಿತು. ಮಳೆಯಲ್ಲಿಯೇ ಅವರ ಬೆಂಬಲಿಗರು ಕುಣಿದು ಕುಪ್ಪಳಿಸಿದರು. ಕೆಲವರು ಆಸುಪಾಸಿನಲ್ಲಿರುವ ಅಂಗಡಿಗಳಲ್ಲಿ ನಿಂತಿರುವುದು ಅಲ್ಲಲ್ಲಿ ಕಂಡು ಬಂದಿತು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಳೆ ಬಂದಿತು.
ಮಳೆಯಲ್ಲಿಯೇ ಆಜಾದ್ ಪಾರ್ಕ್ ವೃತ್ತದಲ್ಲಿ ನಂದಿನಿ ಮಜ್ಜಿಗೆಯ ಪ್ಯಾಕೇಟ್‌ಗಳನ್ನು ಲಾರಿಯಲ್ಲಿ ತಂದು ಜನರಿಗೆ ವಿತರಣೆ ಮಾಡುವುದು ಕಂಡು ಬಂದಿತು. ಮಜ್ಜಿಗೆಯ ಪ್ಯಾಕೇಟ್‌ಗಳನ್ನು ಜನರ ಮೇಲೆ ಆಗಾಗ ತೂರುತ್ತಿದ್ದರು. ಕೆಲವರು ಬ್ಯಾಗ್ ಮತ್ತು ಮಡಿಲಲ್ಲಿ ಮಜ್ಜಿಗೆ ಪ್ಯಾಕೇಟ್ ತುಂಬಿಸಿಕೊಂಡು ಹೋದರು.  
ರಾಜಾರೋಷವಾಗಿ ಮಜ್ಜಿಗೆ ವಿತರಣೆ ಮಾಡಲಾಗುತ್ತಿದ್ದರೂ, ಸಮೀಪದಲ್ಲಿದ್ದ ಪೊಲೀಸರು ತಮಗೆ ಸಂಬಂಧಪಡದಂತೆ ಸುಮ್ಮನಿದ್ದರು. ಕೊನೆ ಕ್ಷಣದಲ್ಲಿ ಮಾದರಿ ನೀತಿ ಸಂಹಿತೆ ಅಧಿಕಾರಿಗಳು ಹಾಗೂ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಸ್ಪೆಕ್ಟರ್ ರಾಕೇಶ್ ಅವರು ಆಗಮಿಸಿ ಮಜ್ಜಿಗೆ ವಿತರಣೆ ಮಾಡುವುದನ್ನು ತಡೆದರು. ಬಳಿಕ ಮಜ್ಜಿಗೆ ತಂದಿದ್ದ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಜೆಡಿಎಸ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಯಿತು.
ಇಲ್ಲಿನ ಮಿಲನ್ ಚಿತ್ರ ಮಂದಿರದ ಬಳಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಮಾಜಿ ಸಚಿವ ಸಿ.ಆರ್. ಸಗೀರ್ ಅಹಮದ್ ಅವರು ಮಾತನಾಡುವ ವೇಳೆಗೆ  ಮಳೆ ಬಂದಿತು. ಆಗ ಕಾರ್ಯಕ್ರಮದಲ್ಲಿದ್ದ ಸಾರ್ವಜನಿಕರು ಮನೆಗಳಿಗೆ ತೆರಳಿದರು. ಇಡೀ ಕಾರ್ಯಕ್ರಮ ಅಸ್ತವ್ಯಸ್ತವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.