ಶೀಘ್ರದಲ್ಲೇ ವಿವಿಧ ಪಕ್ಷಗಳಿಂದ ಬಿಜೆಪಿಗೆ
ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಹಲವು ಮುಖಂಡರು ಶೀಘ್ರದಲ್ಲೇ ಬಿಜೆಪಿ ಪಕ್ಷಕ್ಕೇ ಸೇರಲಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ತಿಳಿಸಿದರು.
ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡಿದ ಕಾರ್ಯಕರ್ತರನ್ನೆ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಶೃಂಗೇರಿ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ನನಗೆ ಬಿ ಪಾರಂ ಸಿಕ್ಕಿದ್ದು ಶೃಂಗೇರಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ, ಮತದಾರರ ಸರ್ವಾನುಮತದ ಅಭ್ಯರ್ಥಿಯಾಗಿದ್ದೇನೆ. ಹಿಂದೆ 2 ಬಾರಿ ಗೆದ್ದ ನಾನು ಮತ್ತೆ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸಲಿದ್ದೇನೆ. ಅಭಿವೃದ್ಧಿ ಕಾರ್ಯದಿಂದ ನಾನು ನೇರವಾಗಿ ಜನರ ಕೈಗೆ ಸಿಗುವ ಶಾಸಕನಾಗಿದ್ದೇನೆ.
ಶಾಸಕ ಹೇಗಿರಬೇಕು ಎಂದು ತೋರಿಸಿಕೊಟ್ಟೆ: ಒಬ್ಬ ಶಾಸಕ, ಮಂತ್ರಿ ಹೇಗಿರಬೇಕು ಎಂದು ನನ್ನ ಅಧಿಕಾರದ ಅವದಿಯಲ್ಲಿ ತೋರಿಸಿಕೊಟ್ಟಿದ್ದೇನೆ. ವಿರೋದ ಪಕ್ಷಗಳ ಅಪಪ್ರಚಾರದ ನಡುವೆ ನಾನು ಜಯಗಳಿಸುತ್ತೇನೆ. ಕಾಂಗ್ರೆಸ್ ಹಿಂದಿನ ಚುನಾವಣೆಯಲ್ಲಿ ಅಡಕೆ ಹಳದಿ ಎಲೆ ರೋಗ ಸಂತ್ರಸ್ತರಿಗೆ 1,400 ಕೋಟಿ ರುಪಾಯಿ ಪ್ಯಾಕೇಜ್ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಆ ಪ್ಯಾಕೇಜ್ ಏನಾಯಿತು ಎಂದು ಅವರು ಪ್ರಶ್ನಿಸಿದರು.
ರಾಜೇಂದ್ರ ಅವರಿಗೆ ಟಿಕೆಟ್ ನೀಡಬೇಕಿತ್ತು: ಜೆಡಿಎಸ್ ಮುಖಂಡ ಎಚ್.ಟಿ. ರಾಜೇಂದ್ರ ಅವರಿಗೆ ಜೆಡಿಎಸ್ ಶೃಂಗೇರಿ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕಿತ್ತು ಎಂದು ಜೀವರಾಜ್ ಅಭಿಪ್ರಾಯಪಟ್ಟರು. ಎಚ್.ಟಿ. ರಾಜೇಂದ್ರ ಜೆಡಿಎಸ್ ಪಕ್ಷವನ್ನು ತಳ ಹಂತದಿಂದಲೇ ಸಂಘಟಿಸಿದ್ದರು. ಅವರೇ ಅಭ್ಯರ್ಥಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಎಂದರು.
ವೇಷ ಬದಲಾಗಿದೆ: ಜನಪರ ವೇದಿಕೆ ಎಂಬ ಹೆಸರಿನಲ್ಲಿ ಕೆಲವು ಸಂಘಟನೆಗಳು ಬಿಜೆಪಿ ವಿರುದ್ಧ ಕೆಲಸ ಮಾಡುತ್ತಿದೆ. ಹಿಂದೆ ಹಸಿರು ಸೇನೆ ಮುಂತಾದ ಹೆಸರಿನಲ್ಲೂ ಕೆಲವು ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿದ್ದರು. ಅವರೇ ಮತ್ತೆ ಹಲವು ವೇಷಗಳಲ್ಲಿ ನನ್ನ ವಿರೋದಿಸುತ್ತಿದ್ದಾರೆ. ಈ ವಿರೋದ ನನಗೆ ಹೊಸದಾಗಿಲ್ಲ ಎಂದರು. ತಾಂಡ್ಯ ಹೋಬಳಿಯಲ್ಲೂ ಬಿಜೆಪಿ ಪರ ವಾತಾವರಣವಿದೆ. ನಾನು ಈಗಾಗಲೇ ಶೃಂಗೇರಿ ಕ್ಷೇತ್ರದ 56 ಗ್ರಾಪಂಗಳಲ್ಲಿ ಸಭೆ ನಡೆಸಿದ್ದೇನೆ. ಎಲ್ಲಾ ಕಡೆ ಬಿಜೆಪಿಗೆ ಪೂರಕ ವಾತಾವರಣವಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಶೃಂಗೇರಿ ಕ್ಷೇತ್ರದ ಅಧ್ಯಕ್ಷ ನೀಲೇಶ್, ತಾಲೂಕು ಅಧ್ಯಕ್ಷ ಕೆ.ಪಿ. ಸಂಪತ್ ಕುಮಾರ್, ಹೋಬಳಿ ಅಧ್ಯಕ್ಷ ಎಚ್.ಎಂ. ಮನು, ಪ್ರಧಾನ ಕಾರ್ಯದರ್ಶಿಗಳಾದ ವೈ.ಎಸ್. ಗಣೇಶ್, ಗುಳದಮನೆ ಪ್ರಕಾಶ್, ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಆಶೀಶ್ ಕುಮಾರ್, ಗೋಪಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

