ಸಿದ್ದರಾಮಯ್ಯ ಕ್ಷಮೆಯಾಚನೆಗೆ ಸಿ.ಟಿ.ರವಿ ಆಗ್ರಹ
ಕಪ್ರ ವಾರ್ತೆ, ಚಿಕ್ಕಮಗಳೂರು, ಏ.17
ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಪೋಟ ನಡೆದಿರುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಈ ಘಟನೆಯ ಕುರಿತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಸಚಿವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತೀವ್ರವಾಗಿ ಖಂಡಿಸಿ, ಸಾರ್ವಜನಿಕವಾಗಿ ಸಿದ್ಧರಾಮಯ್ಯ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ಖಂಡನೀಯ: ಬೆಂಗಳೂರಿನ ಬಿಜೆಪಿ ಕಾರ್ಯಲಯದ ಬಳಿ ಬೆಳಿಗ್ಗೆ ಬಾಂಬ್ ಸ್ಪೋಟ ಮಾಡಿರುವುದು ಖಂಡನೀಯ. ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಈ ಸಂಚು ರೂಪಿಸಿರುವ ಅನುಮಾನ ಇದೆ. ಸ್ಪೋಟದ ಮೂಲಕ ಬಿಜೆಪಿ ಕಾರ್ಯಕರ್ತರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಭಾವನೆ ಇದ್ದರೆ, ಅದು ಭ್ರಮೆ. ಪಕ್ಷದ ಕಾರ್ಯಕರ್ತರು ಎಲ್ಲಾ ಸವಾಲುಗಳನ್ನು ಎದುರಿಸಿ ಆತ್ಮಶಕ್ತಿಯಿಂದ ಚುನಾವಣೆ ಕಾರ್ಯದಲ್ಲಿ ತೊಡಗಲಿದ್ದಾರೆ.
ಈ ರೀತಿಯ ಬೆದರಿಕೆಗಳಿಗೆ ಹೆದರಿ ಪಲಾಯನ ಮಾಡುವ ದುರ್ಬಲ ಮಾನಸಿಕತೆ ನಮ್ಮವರಿಗಿಲ್ಲ ಎಂದರು.
ಸಮಾಜಕ್ಕೆ ಹಾಕಿರುವ ಸವಾಲು: ಈ ಘಟನೆ ಬಿಜೆಪಿಯ ಕಚೇರಿಯ ಬಳಿ ಆದರೂ ಕೂಡ ಇದು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಕಿರುವ ಸವಾಲು. ಸಣ್ಣ ರಾಜಕೀಯ ಮಾನಸಿಕತೆಯಿಂದ ಹೊರ ಬಂದು ಇದು, ದೇಶ, ಸಮಾಜಕ್ಕೆ ಹಾಕಿರುವ ಸವಾಲು ಎಂದು ಎಲ್ಲರೂ ಪರಿಗಣಿಸಬೇಕು. ಭಾರತದ ಸಮಗ್ರತೆಯನ್ನು ದುರ್ಬಲಗೊಳಿಸುವ ಇಂತಹ ಸಂಚನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಬೇಜವಬ್ದಾರಿ ಹೇಳಿಕೆ: ದುರ್ದೈವದ ಸಂಗತಿ ಎಂದರೆ ಈ ಘಟನೆಯ ಬಗ್ಗೆ ತನಿಖೆ ನಡೆಸುವ ಮೊದಲೇ ಕಾಂಗ್ರೆಸ್ ಕೀಳು ಮಟ್ಟದ ರಾಜಕಾರಣ ಮಾಡಲು ಹೊರಟಿದೆ. ಜವಬ್ದಾರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಬೇಜವಬ್ದಾರಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ನ ಮನಸ್ಥಿತಿಯನ್ನು ಬಿಂಬಿಸಿದ್ದಾರೆ. ಚುನಾವಣೆಗೋಸ್ಕರ ಬಿಜೆಪಿ ಈ ತಂತ್ರ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಅವರ ಈ ಹೇಳಿಕೆ ಭಯೋತ್ಪಾದನೆಯನ್ನು, ಭಯೋತ್ಪಾದಕರ ಜಾಲವನ್ನು ರಕ್ಷಿಸುವ ಪ್ರಯತ್ನ.
ಈ ರೀತಿ ಅವರ ಮನೋಭಾವನೆಯಿಂದಾಗಿ ಕನ್ಯಾಕುಮಾರಿವರೆಗೆ ಭಯೋತ್ಪಾದನೆ ಬೇರು ಬಿಡಲು ಕಾರಣ ಎಂದರು.
ಖರ್ಗೆ ಕ್ಷಮೆ: 2000ರಲ್ಲಿ ಚರ್ಚ್ ಸ್ಪೋಟ ನಡೆದಾಗ, ಈ ಘಟನೆಯ ಬಗ್ಗೆ ತನಿಖೆಯಾಗುವ ಮೊದಲೇ ಆರ್ಎಸ್ಎಸ್ ಮತ್ತು ಬಿಜೆಪಿ ತಲೆಗೆ ಈ ಪ್ರಕರಣವನ್ನು ಕಟ್ಟಿ ರಾಜಕೀಯ ಲಾಭ ಪಡೆಯುವ ಸಣ್ಣತನವನ್ನು ಅಂದಿನ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪ ಹೊರಿಸಿರುವ ಮೂಲಕ ತೋರಿಸಿದ್ದರು.
ತನಿಖೆಯ ನಂತರ ಭಯೋತ್ಪಾದಕರು ಪತ್ತೆಯಾದಾಗ ಅವರು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡದ್ದನ್ನು ಮರೆಯುವಂತ್ತಿಲ್ಲ ಎಂದು ಹೇಳಿದರು.
ಹತ್ಯೆಯ ಲಾಭ ಪಡೆದ ಕಾಂಗ್ರೆಸ್: ಜನರ ಜೀವದ ಜತೆ ಚೆಲ್ಲಾಟ ಆಡಿ ಸಹಾನುಭೂತಿ ಮತ ಪಡೆಯುವ ಅವಶ್ಯಕತೆ ಬಿಜೆಪಿಗಿಲ್ಲ. ಇಂದಿರಾಗಾಂಧಿ, ರಾಜೀವ್ಗಾಂಧಿ ಹತ್ಯೆಯ ಲಾಭ ಪಡೆದ ಕಾಂಗ್ರೆಸ್ಸಿಗರು ಈ ರೀತಿಯ ಯೋಚನೆ ಮಾಡುತ್ತಾರೆ. ದೂರಗಾಮಿ ಪರಿಣಾಮ ತಿಳಿದು ಹೇಳಿಕೆಯನ್ನು ನೀಡಬೇಕು ಎಂದು ಹೇಳಿದ ಸಚಿವರು, ತಾವು ಮುಂದಿನ ಸಿಎಂ ಎಂದು ತನ್ನನ್ನು ತಾನೇ ಬಿಂಬಿಸಿಕೊಳ್ಳುತ್ತಿರುವ ಸಿದ್ಧರಾಮಯ್ಯ ಅವರ ಈ ಹೇಳಿಕೆ ಹಾಸ್ಯಾಸ್ಪದ ಮತ್ತು ಖಂಡನೀಯ ಎಂದರು.
ಅಫ್ಜಲ್ ಗುರು ಗಲ್ಲಿನ ನಂತರ ದೇಶದಲ್ಲಿ ಸರಣಿ ಸ್ಪೋಟ ಸಂಚನ್ನು ಲಷ್ಕರ್ ಎ ತೋಯಿಬಾ ಸಂಘಟನೆಗಳು ಯೋಜಿಸಿದ್ದು, ಗುಪ್ತಚರ ಇಲಾಖೆಯ ವರದಿ ಇದ್ದಾಗಲೂ, ಈ ರೀತಿ ಕಾಂಗ್ರೆಸ್ನ ಹೇಳಿಕೆ ಜನರ ದಿಕ್ಕು ತಪ್ಪಿಸುವ ಯತ್ನ, ಪರೋಕ್ಷವಾಗಿ ಭಯೋತ್ಪಾದನೆಯನ್ನು ಬೆಂಬಲಿಸುವ ಪ್ರಯತ್ನವನ್ನು ಸಿದ್ದು ಮಾಡುತ್ತಿದ್ದಾರೆ ಎಂದ ಸಿ.ಟಿ. ರವಿ, ಬಿಜೆಪಿ ಯಾವತ್ತೂ ಭಯೋತ್ಪಾದನೆ ಸಹಿಸಿಲ್ಲ, ಭಯೋತ್ಪಾದಕರನ್ನು ರಕ್ಷಿಸಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

