ಚಿಕ್ಕಮಗಳೂರು

ಬಿಎಸ್‌ಆರ್ ಕಾಂಗ್ರೆಸ್‌ಅಭ್ಯರ್ಥಿ ನಾಮಪತ್ರ

Published On :

ಕಡೂರು: ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಕೆಂಪರಾಜು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.  ಪಟ್ಟಣದ ಶ್ರೀ ಮೈಲಾರಲಿಂಗಸ್ವಾಮಿ ಮತ್ತು ಗ್ರಾಮ ದೇವರಾದ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮರವಂಜಿ ವೃತ್ತದಲ್ಲಿ ಸೇರಿದ್ದ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ನಾಲ್ಕು ಭಾರಿ ಕ್ಷೇತ್ರದ ಶಾಸಕರಾಗಿ ಕೋಟ್ಯಂತರ ರು. ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಸಹೋದರ ದಿ.ಕೆ.ಎಂ. ಕೃಷ್ಣಮೂರ್ತಿಯವರನ್ನು ಆಶೀರ್ವದಿಸಿದ ಕ್ಷೇತ್ರದ ಜನರು ಅದೇ ಅಭಿಮಾನವನ್ನು ನನಗೂ ತೋರಿಸುವ ಮೂಲಕ ಗೆಲ್ಲಿಸಲಿದ್ದಾರೆ ಎಂದರು. ಪಕ್ಷದ ಸಿಂಗಟಗೆರೆ ರಮೇಶ್, ಕಲ್ಲೇಶ್, ಮಂಜುನಾಥ್, ನಲ್ಲೂರಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಡೂರು: 12 ಜನ ನಾಮಪತ್ರ
ಕಡೂರು: ನಾಮಪತ್ರ ಸಲ್ಲಿಕೆಯ ಕಡೆ ದಿನವಾದ ಬುಧವಾರ ಒಟ್ಟು 12 ಜನ ಅಭ್ಯರ್ಥಿಗಳು  22 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.  ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಬಿಜೆಪಿಯಿಂದ ಬೀರೂರು ದೇವರಾಜು, ಕಾಂಗ್ರೆಸ್‌ನ ಕೆ.ಬಿ. ಮಲ್ಲಿಕಾರ್ಜುನ್, ಕೆಜೆಪಿ ಬೆಳ್ಳಿ ಪ್ರಕಾಶ್, ಜೆಡಿಎಸ್‌ನವೈ.ಎಸ್.ವಿ. ದತ್ತ, ಬಿಎಸ್‌ಆರ್ ಕಾಂಗ್ರೆಸ್ ಕೆ.ಎಂ. ಕೆಂಪರಾಜು, ವೆಲ್ ಫೇರ್ ಪಾರ್ಟಿ ಕುಮಾರನಾಯ್ಕ, ಪಕ್ಷೇತರ ಅಭ್ಯರ್ಥಿಗಳು ಗಂಗಾಧರಪ್ಪ, ಬಿ.ಎಂ. ಮಧು, ನಾಗರಾಜು, ಜನಾರ್ಧನ ರಾವ್ ಸೇರಿದಂತೆ 12 ಅಭ್ಯರ್ಥಿಗಳಿಂದ ಒಟ್ಟು  22 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಲಕ್ಷ್ಮೀನರಸಯ್ಯ ತಿಳಿಸಿದ್ದಾರೆ.
ಸುಳ್ಳಿನ ರಾಜಕಾರಣ ಬೇಡ: ಧರ್ಮೇಗೌಡ
ಚಿಕ್ಕಮಗಳೂರು: ಬಯಲು ಭಾಗದ ಜನರನ್ನು ನಂಬಿ ಈ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಹೇಳಿದರು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಖರಾಯಪಟ್ಟಣ, ಹನುಮಂತಪುರ, ನಾಗೇನಹಳ್ಳಿಗಳಲ್ಲಿ ಬುಧವಾರ ಮತಯಾಚನೆ ಮಾಡಿ ಅವರು ಮಾತನಾಡಿದರು. ಸುಳ್ಳಿನ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ. ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ. ದೈವಶಕ್ತಿ ಇದ್ದರೆ ಶಾಸಕನಾಗುವ ಮೂಲಕ ಐಯ್ಯನಕೆರೆ ಮತ್ತು ಮದಗದಕೆರೆಗೆ ಹೆಬ್ಬೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿ ಈ ಭಾಗದ ನೂರಾರು ಹಳ್ಳಿಗಳ ಜನರ ನೀರಡಿಕೆ ತಣಿಸುವ ಗುರಿ ಹೊಂದಲಾಗಿದೆ ಎಂದರು. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯುತ್ತಿರುವ ರವಿಯವರಿಗೆ ಚುನಾವಣೆ ಶಾಪವಾಗಿ ಪರಿಣಮಿಸಲಿದೆ. ಈ ಬಗ್ಗೆ ಜನತಾ ನ್ಯಾಯಾಲಯ ಶಿಕ್ಷೆ ಕೊಡಬೇಕು ಎಂದರು.  ಪಕ್ಷದ ಮುಖಂಡರಾದ ಕೆಂಚಯ್ಯ, ಮಂಜುನಾಥ್, ರುದ್ರಪ್ಪ, ಮಲ್ಲಯ್ಯ, ರಾಜಪ್ಪ, ಗಿರಿಯಪ್ಪ, ಗಂಗಮ್ಮ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.