ದಕ್ಷಿಣ ಕೇಂದ್ರಿತ ಜನಪದ ಕಲೆಗಳು
ಕ.ಪ್ರ ವಾರ್ತೆ, ಚಿತ್ರದುರ್ಗ, ಏ.18
ಜನಪದ ಕಲೆಗಳ ಶೋಧದಿಂದ ಇತಿಹಾಸವನ್ನು ಪುನಾರಚಿಸಬಹುದು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಕರಿಯಪ್ಪ ಮಾಳಿಗೆ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಮತ್ತು ಬಾದರದಿನ್ನಿ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಂಸಾಳೆ ಮತ್ತು ಪಟ್ಟಾ ಕುಣಿತದ ಕನಸು ಶಿಬಿರ ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಭಾರತದಲ್ಲೆ ಕರ್ನಾಟಕದ ಜನಪದ ಕಲೆಗಳು ಹೆಚ್ಚು ವೈವಿಧ್ಯ ಮತ್ತು ಅಧಿಕ ಪ್ರಮಾಣದಲ್ಲಿವೆ. ಇದಕ್ಕೆ ಕಾರಣ ಇಲ್ಲಿ ಸಾಂಸ್ಕೃತಿಕ ಪರಂಪರೆ ಮತ್ತು ಭೌಗೋಳಿಕತೆ. ಇಲ್ಲಿನ ಕಲೆಗಳು ನಾನಾ ಕಾರಣಗಳಿಂದ ಹುಟ್ಟಿವೆ. ಪ್ರತಿ ಜನಪದ ಕಲೆಗಳ ಹಿಂದೆ ಒಂದು ದೇಶೀ ಸಂಸ್ಕೃತಿ ಇದೆ. ಒಂದು ಚರಿತ್ರೆ ಇದೆ. ಹಾಗಾಗಿ ಮನುಷ್ಯನ ಸಾಂಸ್ಕೃತಿಕ ಚರಿತ್ರೆಗೂ ಜನಪದ ಕಲೆಗಳ ಹುಟ್ಟಿಗೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಿದರು.
ಧಾರ್ಮಿಕ ಲೇಪನ: ಇಲ್ಲಿ ಕೆಲವು ಆರಾಧನಾ ಕಲೆಗಳಿವೆ. ಧರ್ಮ ಪ್ರಸಾರದ ಕಲೆಗಳಿವೆ, ಶುದ್ಧ ಮನರಂಜನೆಯ ಕಲೆಗಳಿವೆ, ನೀತಿ ರೂಪದ ಕಲೆಗಳಿವೆ, ರಂಗಭೂಮಿ ಕಲೆಗಳಿವೆ, ಬುಡಕಟ್ಟು ಕಲೆಗಳಿವೆ. ಒಂದರ್ಥದಲ್ಲಿ ಎಲ್ಲಾ ಕಲೆಗಳ ಹಿಂದೆ ಧಾರ್ಮಿಕ ಲೇಪನವಿದೆ. ಧರ್ಮ, ದೇವರು, ಆರಾಧನೆ, ಪಂಥ, ಪಂಗಡ ಇವೆಲ್ಲಾ ಸೇರಿಕೊಂಡಿವೆ. ಹಾಗಾಗಿ ಆರಾಧನೆ ಮತ್ತು ಆಚರಣೆಯೆ ಕಾರ್ಯಗಳೇ ಕಲೆಗಳಾಗಿ ಹುಟ್ಟಿವೆ. ಕ್ರಮೇಣ ಅವೇ ವೃತ್ತಿ ಕಲೆಗಳಾಗಿ, ಪರಂಪರೆಗಳಾಗಿ ಬೆಳೆದಿವೆ. ನಮ್ಮ ಕಲೆಗಳು ಮೂಲ ಸಂಸ್ಕೃತಿಯ ಅಧ್ಯಯನಕ್ಕೆ ಪ್ರಧಾನ ಆಕರಗಳು. ಇಂಥ ಕಲೆಗಳ ಶೋಧದಿಂದ ಬಹುತೇಕ ದುಡಿಯುವ ವರ್ಗವಿದೆ. ಆ ವರ್ಗದ ಮೌಖಿಕ ಇತಿಹಾಸವಿದೆ. ಇವುಗಳ ಶೋಧದಿಂದ ಇತಿಹಾಸವನ್ನು ಪುನರ್ ರಚಿಸಬಹುದಾಗಿದೆ. ಜಾಗತೀಕರಣದ ಈ ಸಂದರ್ಭದಲ್ಲಿ ಜನಪದ ಕಲೆಗಳ ದಾಖಲೀಕರಣ ಮತ್ತು ಪುನಶ್ಚೇನ ಕಾರ್ಯಗಳು ಅಗತ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಿರಂಜನ ದೇವರಮನಿ ಮಾತನಾಡಿ, ಬಯಲ ಸೀಮೆಯಲ್ಲಿ ಕಲೆಗಳು ಹೆಚ್ಚು. ಆದರೆ, ಕಂಸಾಳೆ ಮತ್ತು ಪಟ್ಟಾ ಕುಣಿತಗಳು ಈ ಭಾಗದಲ್ಲಿ ಅಪರೂಪ. ಇಂಥ ಕಲೆಗಳನ್ನು ಕಲಿಯುವ ಮೂಲಕ ಬದುಕಿನಲ್ಲಿ ಸಜ್ಜನಿಕೆಯನ್ನ ಬೆಳೆಸಿಕೊಳ್ಳಬಹುದೆಂದು ಕೆಲವು ಹಾಡುಗಳನ್ನು ಹೇಳುವ ಮೂಲಕ ಶಿಬಿರಾರ್ಥಿಗಳಲ್ಲಿ ಆಸಕ್ತಿ ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಲಾವಿದರು ಮತ್ತು ರಂಗನಿರ್ದೇಶಕರೂ ಆದ ಅಶೋಕ ಬಾದರದಿನ್ನಿ ವಹಿಸಿದ್ದರು. ಕಂಸಾಳೆ ತರಬೇತುದಾರರಾಗಿ ಪಿರಿಯಾಪಟ್ಟಣದಿಂದ ಕುಮಾರ್ ನಾಯಕ್ ಮತ್ತು ಸಂಗಡಿಗರು, ಪಟ್ಟಾ ಕುಣಿತಕ್ಕೆ ದಿನೇಶ್ ಮತ್ತು ಸಂಗಡಿಗರು ಆಗಮಿಸಿದ್ದರು. ಶಿಬಿರದ ಸಂಚಾಲಕ ಪ್ರಕಾಶ್ ಬಾದರದಿನ್ನಿ ಮತ್ತು ರಂಗಕರ್ಮಿ ಗಣೇಶಯ್ಯ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

