ಬಿರು ಬೇಸಿಗೆಯಲ್ಲಿ ಪ್ರಚಾರದ ರಂಗು
ಟಿ ಕಡೂರು ಕೃಷ್ಣಮೂರ್ತಿ
ಕ.ಪ್ರ.ವಾರ್ತೆ ಟಿ ಕಡೂರು ಟಿ ಏ.25
ನೀರು ಮಳೆಯಿಲ್ಲದ ಬರಗಾಲದ ಬಿರು ಬೇಸಿಗೆಯಲ್ಲಿಯೂ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದ್ದು, ನಾಮಪತ್ರ ವಾಪಸಾತಿಯ ನಂತರ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ, ಪಕ್ಷ ತೊರೆಯುವಿಕೆ ಅಷ್ಟೇ ಬಿರುಸಾಗಿದೆ. ಇತ್ತ ವಿವಿಧ ಪಕ್ಷಗಳ ನಾಯಕರು ಮತಬೇಟೆಗೆ ತಂತ್ರ ಹೂಡುವ ಮೂಲಕ ವಿವಿಧ ವರ್ಗಗಳು ಹಾಗೂ ನಾಯಕರನ್ನು ತಮ್ಮತ್ತ ಸೆಳೆಯುವ ಕಾರ್ಯ ಕೂಡ ವ್ಯವಸ್ಥಿತವಾಗಿ ನಡೆಯುತ್ತಿದೆ.
ಕಡೂರು ವಿಧಾನಸಭೆಯಲ್ಲಿ ನಡೆದಿರುವ ಹಲವು ಚುನಾವಣೆಗಳಿಗೆ ಹೋಲಿಸಿದಲ್ಲಿ ಅದರಲ್ಲೂ 2010ರ ಉಪ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ವ್ಯವಸ್ಥೆಯ ದಂಡು ದಾಳಿಸಮೇತ ಬಂದು ನಡೆಸಿದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ನಡೆದಾಗಲೂ ಅಂತಹ ಪೈಪೋಟಿ ಎದುರಾಗಿರಲಿಲ್ಲ.
ಬಹುಕೋನ ಸ್ಪರ್ಧೆ: ಆದರೆ ಈ ಬಾರಿ ಈ ಮೂರೂ ಪಕ್ಷಗಳ ಜೊತೆ ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಸೇರಿದಂತೆ ಐವರು ಅಭ್ಯರ್ಥಿಗಳು ಕಣದಲ್ಲಿರುವ ಮೂಲಕ ಬಹುಮುಖ ಸ್ಪರ್ಧೆ ಏರ್ಪಟ್ಟು ಕಡೂರು ಕ್ಷೇತ್ರದ ಚುನಾವಣೆಯು ಹೊಸ ಖದರ್ ಪಡೆದುಕೊಂಡಿದೆ.
ಕಣದಲ್ಲಿರುವ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಸೇರಿದಂತೆ 5 ಪಕ್ಷದ ು ಅಭ್ಯರ್ಥಿಗಳೂ ಒಂದೊಂದು ರೀತಿಯಲ್ಲಿ ತಮ್ಮದೇ ಶಕ್ತಿ ಸಾಮರ್ಥ್ಯ ಹೊಂದಿರುವುದರಿಂದ ಯಾವ ಅಭ್ಯರ್ಥಿಯನ್ನೂ ಅಲ್ಲಗಳೆಯುವಂತಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ ಮಲ್ಲಿಕಾರ್ಜುನ್ ಒಮ್ಮೆ ಶಾಸಕರಾಗಿ ಎರಡು ಭಾರಿ ವಿಪ ಸದಸ್ಯರಾಗಿ 35 ವರ್ಷದ ಸಕ್ರಿಯ ರಾಜಕಾರಣದಲ್ಲಿದ್ದು, ಹಲವು ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಕಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ.
ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ ದತ್ತ ಒಮ್ಮೆ ವಿಪ ಸದಸ್ಯರಾಗಿ ಮತ್ತು ಹಲವು ದಶಕದಿಂದ ರಾಜ್ಯ ರಾಜಕಾರಣದಲ್ಲಿದ್ದು, ಜೆಡಿಎಸ್ ರಾಜ್ಯ ವಕ್ತಾರರಾಗಿ ರಾಜಕೀಯದ ಪ್ರತಿ ಮಗ್ಗುಲುಗಳನ್ನು ಹತ್ತಿರದಿಂದ ನೋಡಿ ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮೂರನೇ ಬಾರಿ ಸ್ಫರ್ಧಿಸುತ್ತಿದ್ದಾರೆ.
ಸಕ್ರಿಯ ರಾಜಕಾರಣ: ಹಾಲಿ ಶಾಸಕ ಡಾ ವೈ.ಸಿ. ವಿಶ್ವನಾಥ್ ತಮಗೆ ಇದ್ದ ಬಿಜೆಪಿ ಟಿಕೆಟನ್ನು ಬೀರೂರು ದೇವರಾಜ್ಗೆ ಬಿಟ್ಟು ಕೊಟ್ಟಿದ್ದಾರೆ. ದೇವರಾಜು 15 ವರ್ಷದಿಂದ ಸಕ್ರಿಯ ರಾಜಕಾರಣದಲ್ಲಿದ್ದು, ಹಳೇ ಬೀರೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಮತ್ತೊಮ್ಮೆ ಜನತಾ ಪಕ್ಷ, ಪಕ್ಷೇತರರಾಗಿ ಮೂರು ಬಾರಿ ವಿಧಾನಸಭೆ ಚುನಾವಣೆ ಎದುರಿಸಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬೆಳ್ಳಿಪ್ರಕಾಶ್ 13 ವರ್ಷದಿಂದ ಸಕ್ರಿಯ ರಾಜಕಾರಣ ಮಾಡುತ್ತಾ ಜಿಪಂ ಅಧ್ಯಕ್ಷರಾಗಿ ಇದೀಗ ಚುನಾವಣಾ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಇನ್ನು ಬಿ.ಎಸ್.ಆರ್. ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಕೆಂಪರಾಜು ಶಾಸಕರಾಗಿದ್ದ ದಿ.ಕೆ.ಎಂ. ಕೃಷ್ಣಮೂರ್ತಿಯವರ ಸಹೋದರರಾಗಿದ್ದು, ಕೆಎಂಕೆ ಯವರ ನಿರಂತರ ಗೆಲುವಿಗೆ ಶ್ರಮಿಸಿ ಜಿಪಂ ಅಧ್ಯಕ್ಷರಾಗಿ ರಾಜಕಿಯದ ಅನುಭವದ ಹಿನ್ನೆಲೆಯಿಂದ 2010 ರಲ್ಲಿ ನಡೆದ ಕಡೂರು ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರಿಗೆ ಇದು ಎರಡನೇ ವಿಧಾನಸಭಾ ಚುನಾವಣೆಯಾಗಿದೆ.
ಇಬ್ಬರು ಪಕ್ಷೇತರ: ಒಬ್ಬರು ಲೋಕಸತ್ತಾ ಪಕ್ಷದಿಂದ ಮತ್ತು ಇಬ್ಬರು ಪಕ್ಷೇತರ ಅಭ್ಯಥಿಯಾಗಿ ಒಟ್ಟು 9ಮಂದಿ ಕಣದಲ್ಲಿದ್ದಾರೆ. ಇದೀಗ ಅಭ್ಯರ್ಥಿಗಳು ಮತಯಾಚನೆ ಜೊತೆ ವಿವಿಧ ಸಮುದಾಯಗಳ ಮತಬುಟ್ಟಿಗೆ ಕೈಹಾಕಲು ತಮ್ಮದೇ ಆದ ರೀತಿಯಲ್ಲಿ ಆಕರ್ಷಿಸುತ್ತಿದ್ದಾರೆ.
ಈ ಬಾರಿ ಬಹುಮುಖ ಸ್ಪರ್ಧೆ ಏರ್ಪಟ್ಟಿರುವುದರಿಂದ ಎಲ್ಲ ಸಮುದಾಯಗಳ ಮತಗಳೂ ಕೂಡ ಕಣದಲ್ಲಿರುವ ಐವರು ಅಭ್ಯರ್ಥಿಗಳಿಗೆ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಮತಬೇಟೆ ಕೂಡ ಬಿರುಸಿನಿಂದ ಸಾಗುತ್ತಿದೆ. ಚುನಾವಣೆಯ ಕಾವು ಜೋರಾಗುವ ಮೂಲಕ ಕೆಲವೇ ದಿನಗಳಲ್ಲಿ ಯಾವ ಪಕ್ಷ ಯಾವ ಪಕ್ಷದ ಪ್ರಭಲ ಎದುರಾಳಿ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

