ನಾಳೆ ಚುನಾವಣಾ ಸಿಬ್ಬಂದಿಗೆ ತರಬೇತಿ
ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಏ.28
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣಾ ಕೆಲಸಕ್ಕೆ ನಿಯೋಜಿತ ಅಧಿಕಾರಿ ಹಾಗೂ ನೌಕರರಿಗೆ 2ನೇ ಹಂತದ ತರಬೇತಿ ಏ. 30 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಸಭಾ ಭವನದಲ್ಲಿ ನಡೆಯಲಿದೆ.
ಚುನಾವಣೆ ಕೆಲಸಕ್ಕೆ ನಿಯೋಜಿತ ಅಧಿಕಾರಿ, ರಕ್ಷಣಾ ಸಿಬ್ಬಂದಿ, ಚಾಲಕ ಸಿಬ್ಬಂದಿಗಳಿಗೆ ಮತದಾನ ಮಾಡಲು ಅನುಕೂಲವಾಗುವಂತೆ ತರಬೇತಿ ಸ್ಥಳದಲ್ಲಿಯೇ ಫೆಸಿಲಿಯೇಷನ್ ಸೆಂಟರ್ ತೆರೆದು ಅಂಚೆ ಮತ ಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಸದರಿ ದಿನದಂದು ಫೆಸಿಲಿಯೇಷನ್ ನಡವಳಿಯನ್ನು ವೀಕ್ಷಿಸಲು ರಾಜಕೀಯ ಪಕ್ಷದವರು ತಮ್ಮ ಪರ ಅಧಿಕೃತವಾಗಿ ಒಬ್ಬ ವ್ಯಕ್ತಿಯನ್ನು ನಿಯೋಜಿಸಲು ಅವಕಾಶವಿದ್ದು, ಮಹಾವಿದ್ಯಾಲಯದ ಆವರಣದಲ್ಲಿ ರಾಜಕೀಯ ಪಕ್ಷಗಳು ಯಾವುದೇ ರೀತಿಯ ಪ್ರಚಾರ ನಡೆಸಲು ಅವಕಾಶವಿರುವುದಿಲ್ಲ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಬಸ್: ವಿಧಾನಸಭಾ ಚುನಾವಣೆಯ ತರಬೇತಿಯು ಏ. 29 ಹಾಗೂ 30ರಂದು ನಡೆಯಲಿದ್ದು, ತರಬೇತಿಗೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಿಂದ ಮತದಾನ ಸಿಬ್ಬಂದಿಗಳು ಬೇರೆ ಬೇರೆ ತಾಲ್ಲೂಕು ಕೇಂದ್ರಗಳಿಗೆ ತೆರಳಲು ಅನುಕೂಲವಾಗಲು ಕೆ.ಎಸ್.ಆರ್.ಟಿ.ಸಿ ಹೆಚ್ಚುವರಿ ಬಸ್ಸುಗಳನ್ನು ಬಿಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅಕ್ರಮ ಮದ್ಯ ವಶ
ಬಾಳೆಹೊನ್ನೂರು ರಸ್ತೆಯ ಕಡಬಗೆರೆಯ ಪೂರ್ಣಪ್ರಜ್ಞಾ ಶಾಲೆಯ ಮುಂಭಾಗ ಇ.ಎನ್. ವಿನಯಕುಮಾರ್ ಎಂಬಾತ ದ್ವಿಚಕ್ರ ವಾಹನದಲ್ಲಿ 52,112 ರುಪಾಯಿ ಮೌಲ್ಯದ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅಬಕಾರಿ ಇಲಾಖೆಯವರು ಅವರನ್ನು ಬಂಧಿಸಿ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಕ್ಯಾ ಹೋಬಳಿ, ಬಿಳೇಕಲ್ಲಹಳ್ಳಿ ಗ್ರಾಮದ ಕೃಷ್ಣಮೂರ್ತಿ ಎಂಬುವರ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ದಾಸ್ತಾನು ಮಡಿದ್ದ 2112 ರು. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕೊಪ್ಪ ತಾಲ್ಲೂಕಿನ ಮೇಗೂರಿನ ಕೆ.ಎಲ್. ರಮೇಶ್ ಎಂಬಾತನು ಮಹೇಂದ್ರ ಪಿಕಪ್ ಜೀಪ್ನಲ್ಲಿ 5,01,950 ರು. ಮೌಲ್ಯದ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅಬಕಾರಿ ಇಲಾಖಾ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅಬಕಾರಿ ಇಲಾಖೆ ಕ:ಕೇರಿ ಪ್ರಕಟಣೆ ತಿಳಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆ ಪ್ರಯುಕ್ತ ಅಬಕಾರಿ ಇಲಾಖೆಯು ಅಕ್ರಮ ಮದ್ಯ ಸಾಗಾಣಿಕೆ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಉಪಾಯುಕ್ತ ವೆಂಕಟೇಶ್ ಪದಕಿ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.
ಮದ್ಯ ಮಾರಾಟ ನಿಷೇಧ
ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ 5 ರಂದು ಮತದಾನ ಹಾಗೂ ಮೇ 8 ರಂದು ಮತಎಣಿಕೆ ನಡೆಯಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಾ ನಮೂನೆಯ ಮಧ್ಯದಂಗಡಿಗಳನ್ನು ಮೇ 3ರ ಸಂಜೆ 5 ಗಂಟೆಯಿಂದ ಮೇ 5ರ ಸಂಜೆ 5 ಗಂಟೆಯವರೆಗೆ ಹಾಗೂ ಮೇ 7ರ ಮಧ್ಯರಾತ್ರಿಯಿಂದ ಮೇ 8ರ ಮಧ್ಯ ರಾತ್ರಿಯವರೆಗೆ ಮುಚ್ಚುವಂತೆಯೂ ಮತ್ತು ಮಧ್ಯ ಸಾಗಾಣಿಕೆ, ಶೇಖರಣೆ ತಯಾರಿಕೆ, ಸರಬರಾಜು ಮತ್ತು ಮಾರಾಟವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ವಿ. ಯಶವಂತ್ ಆದೇಶ ಹೊರಡಿಸಿದ್ದಾರೆ.
ಸಂತೆ ನಿಷೇಧ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೇ 5 ರಂದು ಚಿಕ್ಕಮಗಳೂರು ತಾಲ್ಲೂಕಿನ ಕಡಬಗೆರೆ, ಮೂಡಿಗೆರೆ ತಾಲ್ಲೂಕಿನ ಅರಮನೆಮಕ್ಕಿ ಅರಳಿಕಟ್ಟೆ, ಕೆಳಗೂರು, ನಿಡುವಾಳೆ ಪೇಟೆ, ಕೊಪ್ಪ ತಾಲ್ಲೂಕಿನ ಕೊಪ್ಪ ಮಾರ್ಕೆಟ್ ರಸ್ತೆ, ಜಯಪುರ, ಎನ್.ಆರ್. ಪುರದ ಬಾಳೆಹೊನ್ನೂರು, ತರೀಕೆರೆಯ ಬಳ್ಳಾವರ, ಕಲ್ಲತ್ತಿಪುರ ಹ್ಯಾಂಡ್ ಪೋಸ್ಟ್, ಸಂತವೇರಿ, ಲಕ್ಕವಳ್ಳಿ, ಹಾಗೂ ಮೇ 8 ರಂದು ಮತ ಎಣಿಕೆ ನಡೆಯುವ ಹಿನ್ನೆಲೆ ಚಿಕ್ಕಮಗಳೂರಿನ ಸಂತೆಯನ್ನು ನಿಷೇಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

