ಚಿಕ್ಕಮಗಳೂರು

ಬಡವರ ಜಮೀನಿನ ಬಗ್ಗೆ ದನಿ ಎತ್ತದ ಸಚಿವ

Published On :

ಕ.ಪ್ರ.ವಾರ್ತೆ, ನರಸಿಂಹರಾಜಪುರ, ಏ.28 ರಾಜ್ಯದಲ್ಲಿ ಬಡ ರೈತರು 3 ಲಕ್ಷ ಎಕರೆ ಬಗರ್ ಹುಕುಂ ಸಾಗುವಳಿ ಮಾಡಿದ್ದು, ಬಡ ರೈತರ ಜಮಿನು ಉಳಿಸಿಕೊಳ್ಳುವ ಬಗ್ಗೆ ಡಿ.ಎನ್. ಜೀವರಾಜ್ ವಿಧಾನ ಸಭೆಯಲ್ಲಿ ಧ್ವನಿ ಎತ್ತಿದ್ದಾರೆಯೇ  ಎಂದು ರಾಜ್ಯ ಕೆಪಿಸಿಸಿ ವಕ್ತಾರ ದಿವಾಕರ್ ಪ್ರಶ್ನಿಸಿದರು.
ಅವರು ಶನಿವಾರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣದವರನ್ನು ಜೀವರಾಜ್ ಅವರು ಬಿಜೆಪಿಯಿಂದ ಹೊರ  ಹಾಕಿದ್ದಾರೆ. ಅಧಿಕಾರ, ಹಣ ಶಾಶ್ವತವಲ್ಲ ಎಂದು ಜೀವರಾಜ್ ಅರಿಯಬೇಕಾಗಿದೆ. ಜನರ ವಸತಿ ಸಮಸ್ಯೆ ಬಗೆಹರಿಸಲಾರದ ಅವರು ತಮ್ಮ ವಸತಿ ಸಂಕೀರ್ಣವನ್ನು ವಿಸ್ತರಣೆ ಮಾಡುತ್ತ ಹೋಗಿದ್ದಾರೆ ಎಂದು ಆರೋಪಿಸಿದರು.
ಹೊಸತನವಿಲ್ಲ: ಬಿಜೆಪಿ ಪ್ರಣಾಳಿಕೆಯಲ್ಲಿ ಯಾವುದೇ ಹೊಸತನ, ಬದ್ಧತೆಯೂ ಇಲ್ಲವಾಗಿದೆ. ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಮಾತ್ರ ಹೊಣೆಯಲ್ಲ. ಅವರ ಸಂಪುಟದ ಎಲ್ಲಾ ಮಂತ್ರಿಗಳು ರಾಜ್ಯಕ್ಕೆ ತಟ್ಟಿದ ಕಳಂಕದ ಜವಬ್ದಾರಿ ಹೊರಬೇಕಾಗಿದೆ ಎಂದರು.
ಕೊಪ್ಪದ ವಕೀಲ ಸುಧೀಕ್ ಕುಮಾರ್ ಮರೊಳ್ಳಿ ಮಾತನಾಡಿ, ಶೃಂಗೇರಿ ಕ್ಷೇತ್ರದ 8 ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳನ್ನು ಶಾಸಕ ಡಿ.ಎನ್. ಜೀವರಾಜ್ ಸಸ್ಪೆಂಡ್ ಮಾಡಿದ್ದಾರೆ. ಬಯೋವುಟ್ರಿಕ್ ಪದ್ಧತಿಯ ಯಂತ್ರ ಖರೀದಿಸುವಲ್ಲಿ ಭಾರಿ ಭ್ರಷ್ಟಾಚಾರ ನಡೆದ ಶಂಕೆ ಇದೆ. ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಶೃಂಗೇರಿ ಕ್ಷೇತ್ರದ ವಿಧಾನ ಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಸಜ್ಜನ ರಾಜಕಾರಣಿಗಳಾದ ಕಡಿದಾಳ್ ಮಂಜಪ್ಪ, ಡಿ.ಬಿ. ಚಂದ್ರೇಗೌಡ, ಗೋವಿಂದೇಗೌಡ, ವೀರಪ್ಪಗೌಡ ಮುಂತಾದವರು ಸ್ಪರ್ಧೆ ಮಾಡಿದ್ದರು. ಆದರೆ ಈಗಿನ ಶಾಸಕರು ಸ್ವಜನ ಪಕ್ಷಪಾತ, ಗುಂಪಗಾರಿಕೆ, ತಾರತಮ್ಯ, ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸೋನಿಯಾ ಗಾಂಧಿ ಜೊತೆ ಚರ್ಚೆ: ಅಡಕೆ ಹಳದಿ ಎಲೆ ರೋಗದ ಬಗ್ಗೆ ಶನಿವಾರ ಚಿಕ್ಕಮಗಳೂರಿಗೆ ಆಗಮಿಸಿದ ಸೋನಿಯಾಗಾಂಧಿ ಜೊತೆಗೆ ಚರ್ಚಿಸಲಾಗಿದೆ. ಅಡಕೆ ಬೆಳೆಗಾರರ ಸಾಲ ಮನ್ನಾ ಬಗ್ಗೆ ಸೋನಿಯಾ ಗಾಂಧಿ ಭರವಸೆ ನೀಡಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ  ಬಿ.ಸಿ. ಗೀತ, ಸಚಿನ್ ಮೀಗ, ಕೆ.ಎಂ. ಗಂಗಾಧರ್, ಆರ್. ಸದಾಶಿವ, ಟಿ.ವಿ. ರಾಜು, ಎಚ್.ಬಿ. ರಘುವೀರ್, ಕೆ.ವಿ. ವಸಂತ ಕುಮಾರ್, ಲಕ್ಷ್ಮಣಶೆಟ್ಟಿ, ಪಿ.ಆರ್. ಸುಕುಮಾರ್, ಲೇಖಾ ವಸಂತ್, ಅಂಜುಮ್, ಕೆ.ಎಂ. ಸುಂದರೇಶ್, ಇ.ಸಿ. ಜೋಯ್, ಇ.ಸಿ. ಶೇವಿಯಾರ್ ಮೊದಲಾದವರು ಇದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಹಲವು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.