ಜ್ವಲಂತ ಸಮಸ್ಯೆ: ನೆರವಿಗೆ ಬಾರದ ಸರ್ಕಾರ
ಕ.ಪ್ರ.ವಾರ್ತ್ಣೆ ಚಿಕ್ಕಮಗಳೂರು , ಏ.30
ಬಲವಾಗಿ ಬೇರು ಬಿಟ್ಟಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುವ ಆಶಾಭಾವನೆಯಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಜಿಲ್ಲೆಯ ಜನತೆ ಮುಂದೆ ಮತ್ತೊಂದು ಚುನಾವಣೆ ಬಂದಿದೆ.
ಜಿಲ್ಲೆಯಲ್ಲಿ ಒಂದೆಡೆ ಹಲವು ದಶಕಗಳಿಂದ ಜೀವಂತವಾಗಿರುವ ಸಮಸ್ಯೆಗಳು, ಇನ್ನೊಂದೆಡೆ ಪ್ರತಿವರ್ಷ ಪ್ರಕೃತಿಯ ವಿಕೋಪಕ್ಕೆ ಗುರಿಯಾಗಿ ಬರ ಬೆನ್ನು ಹತ್ತಿದ ಬೇತಾಳದಂತೆ ಜನರನ್ನು ಕಾಡುತ್ತಿದೆ.
ಮಾಲಿಕರು ನಿರಾಶ್ರಿತರು: ಈ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಆಧಾರವಾಗಿ ಚರ್ಚೆಗಳು ನಡೆಯುತ್ತಿವೆ. ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಯಾವುದೇ ರಾಜಕೀಯ ಪಕ್ಷ ಪ್ರಸ್ತಾಪ ಮಾಡುತ್ತಿಲ್ಲ.
ಕಳೆದ 6 ದಶಕಗಳ ಹಿಂದೆ ಕೊಪ್ಪ ತಾಲೂಕಿನ ಮೇಗೂರಿನಲ್ಲಿ ಕಾಣಿಸಿಕೊಂಡ ಅಡಿಕೆಗೆ ಹಳದಿ ಎಲೆ ರೋಗ ದಿನ ದಿನಕ್ಕೂ ತನ್ನ ಬಾವುಗಳನ್ನು ಚಾಚುತ್ತಿದೆ. ಇಂದು ಈ ರೋಗ ಬರೀ ಒಂದು ಪ್ರದೇಶ, ಒಂದು ಜಿಲ್ಲೆಯ ಮಾತ್ರ ಸೀಮಿತವಾಗಿಲ್ಲ.
ನೆರೆಯ ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೂ ವಿಸ್ತರಿಸಿಕೊಂಡಿದೆ. ಈ ರೋಗ ಪೀಡಿತ ತೋಟಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ಫಸಲಿಲ್ಲದೆ ಅಡಿಕೆ ಬೆಳೆಗಾರರು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವರು ತೋಟ ಮತ್ತು ಮನೆಗಳನ್ನು ಬಿಟ್ಟು ವಲಸೆ ಹೋಗಿದ್ದಾರೆ. ಈ ಮೂರು ಜಿಲ್ಲೆಗಳ ಅಡಿಕೆ ಬೆಳೆಯುವ ತೋಟ ಮಾಲಿಕರು ನಿರಾಶ್ರಿತರಾಗಿದ್ದಾರೆ.
ಇವರಿಗೆ ಸ್ಪಂದಿಸಲು ಕೇಂದ್ರ ಸರ್ಕಾರ ಗೋರಕ್ಸಿಂಗ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕಳೆದ ಎರಡು ವರ್ಷದ ಹಿಂದೆ ರೋಗ ಪೀಡಿತ ತೋಟಗಳಿಗೆ ಕಳುಹಿಸಿತ್ತು. ಅದರಂತೆ ಗೋರಕ್ಸಿಂಗ್ ಅವರು ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಕೆಲವು ಶಿಫಾರಸ್ಸು ಮಾಡಿದ್ದರು. ಅದರಲ್ಲಿ ಪ್ರಮುಖವಾಗಿ 10 ಎಕರೆ ಅಡಿಕೆ ತೋಟಗಳ ಸಾಲ ಮನ್ನಾ, ತೋಟಗಳ ಪುನಶ್ಚೇತನ, ಮರು ಹೊಂದಾಣಿಕೆ. ಇದರಲ್ಲಿ ಪುನಶ್ಚೇತನಕ್ಕಾಗಿ ಪ್ರತಿಯೊಬ್ಬ ರೈತರಿಗೆ 30 ಸಾವಿರ ನೀಡಲಾಗಿದೆ.
ಸಾಲ ಮನ್ನಾ ಆಗಿಲ್ಲ: ಆದರೆ, ಸಾಲ ಮನ್ನಾ ಮಾತ್ರ ಈವರೆಗೆ ಆಗಿಲ್ಲ. ಸಾಲ ಮನ್ನಾ ಮಾಡುವಂತೆ ಕೆಪಿಸಿಸಿ ಕಿಸಾನ್ ಸೆಲ್ ಉಪಾಧ್ಯಕ್ಷ ಸಚಿನ್ ಮೀಗಾ ಅವರು ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು.
ಇದಕ್ಕೆ ಸ್ಪಂದಿಸಿದ ಹೈಕೋರ್ಟ್ 3 ತಿಂಗಳೊಳಗೆ ಸಾಲ ಮನ್ನಾ ಮಾಡುವಂತೆ ಸೂಚನೆ ನೀಡಿತ್ತು. ಅದು, ಕಾರ್ಯ ರೂಪಕ್ಕೆ ಬರದೆ ಹೋಗಿದ್ದರಿಂದ ಹೈಕೋರ್ಟ್ ಕೇಂದ್ರ ಹಣಕಾಸು ಸಚಿವಾಲಯಕ್ಕೆ ನ್ಯಾಯಾಂಗ ನಿಂಧನೆಯ ನೋಟಿಸ್ ಜಾರಿ ಮಾಡಿದೆ.
ಈ ನೋಟಿಸ್ಗೆ ಕೇಂದ್ರ ಹಣಕಾಸು ಸಚಿವಾಲಯ ಸೂಕ್ತವಾದ ಉತ್ತರ ನೀಡಬೇಕಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಮುಂದೆ ಮೂರು ಅವಕಾಶಗಳಿವೆ.
ಸಾಲ ಮನ್ನಾ ಮಾಡಬೇಕು. ಇಲ್ಲವೇ ನ್ಯಾಯಾಂಗ ನಿಂಧನೆಯ ಶಿಕ್ಷೆ ಎದುರಿಸಬೇಕು ಇಲ್ಲವಾದರೆ ಸುಪ್ರೀಂಕೋರ್ಟ್ಗೆ ಅಫೀಲ್ ಹೋಗಬೇಕು.
ನೆರವಿನ ನಿರೀಕ್ಷೆಯಲ್ಲಿ: ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅಫೀಲ್ ಹೋದರೆ, ಮಲೆನಾಡಿನ ಅಡಿಕೆ ಬೆಳೆಗಾರರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಈಗ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಇತ್ತೀಚೆಗೆ ಚಿಕ್ಕಮಗಳೂರಿಗೆ ಬಂದಾಗ ಗೋರಕ್ ಸಿಂಗ್ ವರದಿ ಜಾರಿ ಮಾಡಲು ಭರವಸೆ ನೀಡಿದ್ದರು.
ಜತೆಗೆ 2014ರಲ್ಲಿ ಲೋಕಸಭಾ ಚುನಾವಣೆ ನಡೆಯುವುದರಿಂದ ಕೇಂದ್ರ ಸರ್ಕಾರ ಸ್ಪಷ್ಟವಾದ ತೀರ್ಮಾನಕ್ಕೆ ಬರಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದೆ. ಅಡಿಕೆ ಬೆಳೆಗಾರರು ಆಶಾವಾದಿಗಳಾಗಿದ್ದು, ನೆರವಿನ ನಿರೀಕ್ಷೆಯಲ್ಲಿದ್ದಾರೆ.
2012ರಲ್ಲಿ ನಡೆದ ಲೋಕಸಭೆಯ ಉಪ ಚುನಾವಣೆಯಲ್ಲಿ ಈ ವಿಷಯ ಚರ್ಚೆಗೆ ಬರುತ್ತಿತ್ತು. ಆದರೆ, ಈ ವಿಷಯ ಈ ಚುನಾವಣಾ ಪ್ರಚಾರದಲ್ಲಿ ಚರ್ಚೆಗೆ ಬರುತ್ತಿಲ್ಲ.
ಭದ್ರಾ ಮೇಲ್ದಂಡೆ: ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳಿಗೆ ಮಳೆಗಾಲದಲ್ಲಿ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆಯ ಹೋರಾಟ ತರೀಕೆರೆ ತಾಲೂಕಿನಲ್ಲಿ ಇಂದಿಗೂ ಜೀವಂತವಾಗಿದೆ.
2008ರ ಚುನಾವಣೆಯಲ್ಲಿ ಈ ಬಗ್ಗೆ ತರೀಕೆರೆ ಕ್ಷೇತ್ರದಲ್ಲಿ ಚರ್ಚೆಗೆ ಅವಕಾಶ ನೀಡಿತ್ತು. ಅಜ್ಜಂಪುರದಲ್ಲಿ ಹೋದು ಹೋಗಲಿರುವ ಸುರಂಗ ಕಾಲುವೆ ನಿರ್ಮಾಣ ಮಾಡುವುದು ಬೇಡ, ಪಥ ಬದಲಾವಣೆ ಮಾಡುವಂತೆ ಆಗ್ರಹಿಸಿ ಹಲವು ವರ್ಷಗಳಿಂದ ವಿವಿಧ ಹಂತದಲ್ಲಿ ಆ ಭಾಗದ ರೈತರು ಹೋರಾಟವನ್ನು ನಡೆಸಿದ್ದಾರೆ.
ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ತರೀಕೆರೆ ತಾಲೂಕಿನ ಕೆಲವು ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರನ್ನು ಹಾಯಿಸಲಾಗುವುದೆಂದು ಹೇಳಿತ್ತು. ಆದರೆ, ಅದು, ಆದೇಶ ರೂಪದಲ್ಲಿ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಪಥ ಬದಲಾವಣೆಗೆ ರೈತರು ಆಗ್ರಹಿಸಿದರೂ ಕೂಡ ಸರ್ಕಾರ ಅದನ್ನು ಕಿವಿಗೆ ಹಾಕಿಕೊಂಡಿಲ್ಲ. ಕಾಲುವೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ.
ಅಂತರ್ಜಲ ಮಟ್ಟ ಕುಸಿತ: ತರೀಕೆರೆ ತಾಲೂಕು ಪ್ರತಿ ವರ್ಷ ಬರಗಾಲಕ್ಕೆ ತುತ್ತಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ಮುಂಗಾರು ಮಳೆಯ ಪ್ರಮಾಣ ಕ್ಷಿಣಿಸುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬೋರ್ವೆಲ್ಗಳು ನೀರಿಲ್ಲದೆ ಬರಿದಾಗಿವೆ.
ಸುರಂಗ ಕಾಲುವೆ ನಿರ್ಮಾಣ ಮಾಡಿದ್ದೆಯಾದರೆ ಈ ಭಾಗದಲ್ಲಿ ಅಂತರ್ಜಲ ಮಟ್ಟ ಇನ್ನಷ್ಟು ಕುಸಿದು, ರೈತರು ಮುಂದಿನ ಕರಾಳ ದಿನವನ್ನು ಎದುರಿಸಬೇಕಾಗುತ್ತದೆ. ಈ ಜಟಿಲ ಸಮಸ್ಯೆ ಬಗ್ಗೆಯೂ ಕೂಡ ಚುನಾವಣಾ ಪ್ರಚಾರದಲ್ಲಿ ಆಡಳಿತ ಪಕ್ಷವಾಗಲೀ, ವಿರೋಧ ಪಕ್ಷಗಳಾಗಲೀ ಚಕಾರ ಎತ್ತುತ್ತಿಲ್ಲ.
ಮಲೆನಾಡಿನ ಅಡಿಕೆ ಬೆಳೆಗಾರರು ಅತಂತ್ರರಾಗಿದ್ದಾರೆ. ತರೀಕೆರೆ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕರಿ ನೆರಳು ಆವರಿಸಿಕೊಂಡಿದೆ. ಈ ಎರಡು ಜ್ವಲಂತ ಸಮಸ್ಯೆಗಳು ರಾಜಕೀಯ ಪಕ್ಷಗಳಿಗೆ ಕಣ್ಣಿಗೆ ಕಾಣದಂತಾಗಿವೆ.
- ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

