ಯಡಿಯೂರಪ್ಪನವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ
ಕ.ಪ್ರ.ವಾರ್ತೆ, ಕಡೂರು, ಏ.30
ನಮ್ಮ ನೊಣಂಬ ವೀರಶೈವ ಸಮಾಜಕ್ಕೆ ಕೆಜೆಪಿ ಟಿಕೆಟ್ ನೀಡುವುದಾಗಿ ಹೇಳಿ ಸಮುದಾಯಕ್ಕೆ ಮೋಸ ಮಾಡಿರುವ ಯಡಿಯೂರಪ್ಪನವರಿಗೆ ಕಡೂರು ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಮತ ಕೇಳುವ ನೈತಿಕ ಹಕ್ಕು ಇಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಾಮನಕೆರೆ ಶಶಿಧರ್ ಆರೋಪಿಸಿದ್ದಾರೆ. ಅವರು ಕಡೂರು ವಿಧಾನಸಭಾ ಕ್ಷೇತ್ರದ ಕನ್ನೇನಹಳ್ಳಿ, ಚಿಕ್ಕಂಗಳ, ಅಂದೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜು ಪರವಾಗಿ ಮತಯಾಚಿಸಿ ಮಾತನಾಡಿದರು.
ಕಳೆದ ಕಡೂರು ಉಪ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಮುಂದಿನ ಬಾರಿ ಕಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವುದಾಗಿ ಯಳನಾಡು ಮಠಾಧೀಶರು ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಸಮ್ಮುಖದಲ್ಲಿ ನನಗೆ ಭರವಸೆ ನೀಡಿದ್ದರು.
ಬದಲಾದ ರಾಜಕೀಯ: ಬದಲಾದ ರಾಜಕಿಯದಲ್ಲಿ ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದ ಮೇಲೆ ನನಗೆ ಕಡೂರು ಕ್ಷೇತ್ರದಲ್ಲಿ ಕೆಜೆಪಿ ಸಂಘಟಿಸುವಂತೆ ಮತ್ತು ಕಡೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರನ್ನು ಸಂಘಟಿಸಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಲಕ್ಷಾಂತರ ರು. ವ್ಯಯಿಸಿ ಕೆಲವೇ ದಿನಗಳಲ್ಲಿ ಕಡೂರು ಕ್ಷೇತ್ರದಲ್ಲಿ ಕೆಜೆಪಿಯನ್ನು ದೊಡ್ಡ ಪಕ್ಷವಾಗಿ ಬೆಳೆಸಿದೆ ಎಂದರು.
ಆದರೆ ತಮಗೆ ನೀಡಬೇಕಾಗಿದ್ದ ಕೆಜೆಪಿ ಟಿಕೇಟನ್ನು ಯಡಿಯೂರಪ್ಪನವರು ಬೇರೆಯವರಿಗೆ ನೀಡುವ ಮೂಲಕ ನನಗೆ ಮೋಸ ಮಾಡಿದ್ದು, ಕಡೂರು ಕ್ಷೇತ್ರಕ್ಕೆ ಬಂದು ಮತ ಕೇಳುವ ನೈತಿಕ ಹಕ್ಕು ಯಡಿಯೂರಪ್ಪವರಿಗೆ ಇಲ್ಲ ಎಂದು ಟೀಕಿಸಿದರು.
ಸ್ಥಾನಮಾನವಿಲ್ಲ: ಸರ್ವರಿಗೂ ಸಮಪಾಲು ಸಮಬಾಳು ಎಂದು ಬೊಬ್ಬೆಯಿಡುವ ಯಡಿಯೂರಪ್ಪ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತೀ ವಿಧಾನಸಭಾ ಚುನಾವಣೆಯಲ್ಲಿ ಬೇರೆ ಸಮುದಾಯಕ್ಕೆ ಮತ ನೀಡಿ ನಿರ್ಣಾಯಕ ಮತದಾರರಾಗಿರುವ ನೊಣಂಬ ವೀರಶೈವ ಮತದಾರರಿಗೆ ಮತ್ತು ಮುಖಂಡರಿಗೆ ಯಾವುದೇ ರಾಜಕಿಯ ಸ್ಥಾನಮಾನ ನೀಡದೆ ಮೋಸ ಮಾಡಿರುವುದರಿಂದ ನಾನು ಮಾತೃಪಕ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದರು.
ಈ ಮೂಲಕ ಪಕ್ಷದ ಉತ್ತಮ ಅಭ್ಯರ್ಥಿಯಾಗಿರುವ ಬೀರೂರು ದೇವರಾಜುರವರ ಗೆಲುವಿಗೆ ಶ್ರಮಿಸುತ್ತಿದ್ದೇನೆ. ನಮ್ಮ ನೊಣಂಬ ಸಮುದಾಯ ಸೇರಿದಂತೆ ಎಲ್ಲ ವರ್ಗಗಳ ಪ್ರೀತಿ, ವಿಶ್ವಾಸ ಹೊಂದುವ ಮೂಲಕ ಬಿಜೆಪಿ ಗೆಲವಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದವರು ಹೇಳಿದರು.
ಎಲ್ಲರ ಬೆಂಬಲ: ಕಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜುರವರು ಜನಸಾಮಾನ್ಯರ ಪರವಾಗಿ ಸ್ಪಂದಿಸಿ ಸಂಕಷ್ಟದಲ್ಲಿ ಇರುವವರ ಹೃದಯಕ್ಕೆ ಹತ್ತಿರವಾಗಿ ಕೆಲಸ ಮಾಡುವ ವ್ಯಕ್ತಿಯಾಗಿರುವ ಅವರಿಗೆ ಎಲ್ಲ ವರ್ಗಗಳೂ ಕೂಡ ಬೆಂಬಲಿಸುತ್ತಿವೆ. ಮತದಾರರು ಹೆಚ್ಚಿನ ಮತ ನೀಡುವ ಮೂಲಕ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕೋರಿದ್ದಾರೆ. ಬಿಜೆಪಿ ಮುಖಂಡ ಚಂದ್ರಶೇಖರ್, ಮಹೇಶ್, ಸೋಮಶೇಖರ್, ಶಿವು, ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

