ಚಿಕ್ಕಮಗಳೂರು

ಬಗೆಹರಿಯದ ಕಸ ವಿಲೇವಾರಿ ಸಮಸ್ಯೆ

Published On :

ಕ.ಪ್ರ.ವಾರ್ತೆ  ಚಿಕ್ಕಮಗಳೂರು   ಆ.3
ಒಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆ, ಒಳ ಚರಂಡಿ ಕಾಮಗಾರಿಯಿಂದಾಗಿ ಕೆಸರಾದ ರಸ್ತೆಗಳು, ಇನ್ನೊಂದೆಡೆ ವಿಲೇವಾರಿಯಾಗದೆ ರಸ್ತೆಯ ಬದಿಯಲ್ಲಿ ಕಳೆದ 11 ದಿನಗಳಿಂದ ಬಿದ್ದಿರುವ ಕಸದ ರಾಶಿ ಚಿಕ್ಕಮಗಳೂರು ನಗರದ ಜನತೆಗೆ ಕಿರಿ ಕಿರಿಯಾಗಿದೆ.
ಇತ್ತೀಚಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಇದೇ ಮೊದಲ ಬಾರಿಗೆ ಚಿಕ್ಕಮಗಳೂರು ನಗರದಲ್ಲಿ ಸತತವಾಗಿ ಒಂದು ತಿಂಗಳಿಂದ ಬಿಡುವಿಲ್ಲದೆ ಮಳೆ ಸುರಿದಿದೆ. ಕಳೆದ ಒಂದು ವರ್ಷದಿಂದ ನಗರದಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಸದ್ಯ ಮ್ಯಾನ್‌ಹೋಲ್ ನಿರ್ಮಾಣ ಕಾರ್ಯ ಶೇ.60ರಷ್ಟು ಮುಕ್ತಾಯಗೊಂಡಿದೆ. ಇನ್ನುಳಿದ ಕಾಮಗಾರಿ ಮುಂದುವರೆಸಲು ಮಳೆ ಬಿಡುವು ನೀಡಬೇಕಾಗಿದೆ. ಮ್ಯಾನ್‌ಹೋಲ್ ನಿರ್ಮಾಣಕ್ಕೆ ಅಗೆದಿರುವ ರಸ್ತೆಯನ್ನು ಸರಿಯಾದ ರೀತಿಯಲ್ಲಿ ರೆಸ್ಟೋರೆಷನ್ ಮಾಡದೆ ಇರುವುದರಿಂದ ನಗರದ ವಿವಿಧ ಬಡಾವಣೆಗಳಲ್ಲಿ ಜನರು ಓಡಾಡದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕೆಟ್ಟ ವಾಸನೆ: ಇದರ ನಡುವೆ ನಗರದ ಕಸ ವಿಲೇವಾರಿ ಜನರಿಗೆ ಕಿರಿ ಕಿರಿಯಾಗಿದೆ. ಕಸ ವಿಲೇವಾರಿಗೆ ಇಂದಾವರ ಗ್ರಾಮಸ್ಥರು ಅವಕಾಶ ನೀಡದೆ ಇರುವುದರಿಂದ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಮುಖ ರಸ್ತೆಗಳಲ್ಲಿರುವ ಕ್ಯಾಂಟರ್‌ಗಳಲ್ಲಿ ಕಸ ಕೊಳೆಯುತ್ತಿದೆ.
ಕಸದಲ್ಲಿರುವ ಪ್ಲಾಸ್ಟಿಕ್‌ಗಳು ಗಾಳಿಗೆ ರಸ್ತೆ ತುಂಬೆಲ್ಲಾ ಹಾರಾಡುತ್ತಿರುವ ಸತ್ತ ಪ್ರಾಣಿಗಳು ಕಸದ ಕ್ಯಾಂಟರ್‌ನಲ್ಲಿಯೇ ಹಾಕಿರುವುದರಿಂದ ಸಾರ್ವಜನಿಕರು ಮೂಗಿ ಮುಚ್ಚಿಕೊಂಡು ಓಡಾಡುತ್ತಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಪ್ರತಿದಿನ 42 ಟನ್ ಕಸ ಸಂಗ್ರಹವಾಗುತ್ತಿದೆ. ಆದರೆ, ವಿಲೇವಾರಿ ಮಾತ್ರ ಆಗುತ್ತಿಲ್ಲ. ಜಿಲ್ಲಾ ಕೇಂದ್ರದಲ್ಲಿ ಉಂಟಾಗಿರುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲಾಧಿಕಾರಿಗಳು ಇಂದಾವರ ಗ್ರಾಮಸ್ಥರೊಂದಿಗೆ ನಡೆಸಿದ ಎರಡು ಸುತ್ತಿನ ಮಾತುಕತೆ ವಿಫಲವಾಗಿದೆ.
10 ತಿಂಗಳವರೆಗೆ ಸಹಕರಿಸಿ: ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವಿ. ಯಶ್ವಂತ್ ಅವರ ಅಧ್ಯಕ್ಷತೆಯಲ್ಲಿ ಇಂದಾವರ ಗ್ರಾಮಸ್ಥರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು ನಗರದ ಕಸ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ವಿವರಿಸಿ, ಇದಕ್ಕೆ ಕನಿಷ್ಠ 10 ತಿಂಗಳಾದರೂ ಕಾಲಾವಕಾಶ ಬೇಕು. ಅಲ್ಲಿಯವರೆಗೆ ಕಸ ವಿಲೇವಾರಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಇದಕ್ಕೆ ಗ್ರಾಮಸ್ಥರು ಒಪ್ಪಲಿಲ್ಲ, ಆಗ 3 ತಿಂಗಳಾದರೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅದಕ್ಕೆ ಗ್ರಾಮಸ್ಥರು ಒಪ್ಪಲಿಲ್ಲ. 2006 ರಿಂದ ಇಂದಾವರ ಗ್ರಾಮದ ಸಮೀಪದಲ್ಲಿ ನಗರದ ಕಸ ವಿಲೇವಾರಿ ಮಾಡಲಾಗುತ್ತಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವಂತೆ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಲಾಗಿದ್ದು, ಸಂಬಂಧಪಟ್ಟವರು ಗಮನ ಹರಿಸಿಲ್ಲ.
ಕಸದಿಂದ ಗ್ರಾಮಕ್ಕೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಕುಡಿಯುವ ನೀರು ಕಲುಷಿತವಾಗುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಅದುದರಿಂದ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಷರತ್ತುಗಳೇನು? ನಗರದ ಮನೆಗಳಿಂದ ಸಂಗ್ರಹವಾಗುತ್ತಿರುವ ಕಸವನ್ನು ಮೂರು ಭಾಗವಾಗಿ ವಿಂಗಡಿಸಬೇಕು. ಅದರಲ್ಲಿ ಕರಗುವ, ಕರಗದ ಕಸ ಮತ್ತು ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸಬೇಕು. ಕಸವನ್ನು ವೈಜ್ಞಾನಿಕವಾಗಿ ಕರಗಿಸಿ ಅದನ್ನು ಗೊಬ್ಬರವನ್ನಾಗಿ ಬಳಕೆ  ಮಾಡಬೇಕು.
ಕಸವನ್ನು ತಂದು ಹಾಕುವ ವಾಹನಗಳು ಹಾಳಾಗಿದ್ದು, ಎಲ್ಲಾ ಕಸವನ್ನು ಕ್ಯಾಂಟರ್ ಮೂಲಕವೇ ತಂದು ಹಾಕಬೇಕು. ಕಸ ತಂದು ಹಾಕುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು. ಕಸದ ನೀರು ಗ್ರಾಮದೊಳಗೆ ಹರಿದು ಬರದಂತೆ ಕ್ರಮ ವಹಿಸಬೇಕು. ಈ ಎಲ್ಲಾ ಕೆಲಸಗಳು ತಕ್ಷಣಕ್ಕೆ ಆಗಬೇಕು. ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಕಸ ಹಾಕಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಸಭೆ ಒಮ್ಮತದ ನಿರ್ಣಯ ಕೈಗೊಳ್ಳುವಲ್ಲಿ ವಿಫಲವಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಇಂದಾವರ ಗ್ರಾಮದ ಐ.ಡಿ. ಚಂದ್ರಶೇಖರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.