ಮುಂಗಾರಿನ ಆರ್ಭಟಕ್ಕೆ 56.19 ಕೋಟಿ ನಷ್ಟ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಆ.6
ಮುಂಗಾರಿನ ಆರ್ಭಟಕ್ಕೆ ತತ್ತರಿಸಿದ ಮಲೆನಾಡು ಈಗ ತಾನೇ ಮಳೆಯ ಬಿಡುವಿನಿಂದ ಚೇತರಿಸಿಕೊಳ್ಳುತ್ತಿದೆ. ಆದರೆ, ಹಲವೆಡೆ ಭೂ ಕುಸಿತ ಮುಂದುವರೆದಿದೆ.
ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚು ನಷ್ಟ ಸಂಭವಿಸಿದೆ. ಜುಲೈ ಮೊದಲ ವಾರದ ವರದಿ ಪ್ರಕಾರ ಜಿಲ್ಲೆಯಲ್ಲಿ ಮಳೆಯಿಂದಾಗಿ 27 ಕೋಟಿ ರುಪಾಯಿ ನಷ್ಟ ಸಂಭವಿಸಿತ್ತು. ಭಾರಿ ಮಳೆ ಮತ್ತು ಗಾಳಿಗೆ ಜುಲೈ 31ರವರೆಗೆ ಆಗಿರುವ ನಷ್ಟ 56.19 ಕೋಟಿ ರುಪಾಯಿ. ಅಂದರೆ 25 ದಿನಗಳಲ್ಲಿ ಆಗಿರುವ ನಷ್ಟ ಬರೋಬರಿ 29 ಕೋಟಿ ರು.ನಷ್ಟು.
ಮಳೆಗೆ 243 ಹೆಕ್ಟೇರ್ಗಳಲ್ಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದ್ದು, ಇದರ ಅಂದಾಜು ನಷ್ಟ 54.60 ಲಕ್ಷ, ಜಿಲ್ಲೆಯಲ್ಲಿ 436.20 ಕಿ.ಮೀ. ರಸ್ತೆ ಹಾಳಾಗಿದ್ದು, ಇದರಿಂದ 3758.25 ಲಕ್ಷ ರುಪಾಯಿ ಹಾನಿ ಸಂಭವಿಸಿದೆ. 116 ಸೇತುವೆ ಮತ್ತು ಮೋರಿಗಳಿಗೆ ಹಾನಿ ಉಂಟಾಗಿದ್ದರಿಂದ 624 ಲಕ್ಷ, 21 ಕುಡಿಯುವ ನೀರಿನ ಟ್ಯಾಂಕ್ಗಳಿಗೆ ಹಾನಿಯಾಗಿದ್ದು, ಇದರಿಂದಾಗಿ 109 ಲಕ್ಷ, 61 ಸರ್ಕಾರಿ ಕಟ್ಟಡಗಳಿಗೆ ಹಾನಿ ಉಂಟಾಗಿದ್ದು, ಇದರಿಂದ 257 ಲಕ್ಷ, 6 ನೀರು ಸರಬರಾಜು, ಏತ ನೀರಾವರಿ ಕೇಂದ್ರಗಳಿಗೆ ಹಾನಿಯಾಗಿದೆ. ಇದರಿಂದ 33 ಲಕ್ಷ ರು. ನಷ್ಟವಾಗಿದೆ. ಜಿಲ್ಲೆಯಲ್ಲಿ ಈವರೆಗೆ 142 ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಇದರಿಂದಾಗಿ 715.90 ಲಕ್ಷ ರು. ನಷ್ಟವಾಗಿದೆ.
ಮಳೆಯ ಆರ್ಭಟಕ್ಕೆ ಗಾಳಿ ಸಾಥ್ ನೀಡಿತ್ತು. ಒಂದೆಡೆ ಮಳೆ, ಇನ್ನೊಂದೆಡೆ ಬಲವಾಗಿ ಬೀಸುತ್ತಿರುವ ಗಾಳಿ. ಇದರಿಂದಾಗಿ ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್. ಪುರ ತಾಲೂಕುಗಳು ವಿದ್ಯುತ್ ಸಂಪರ್ಕವನ್ನು ಕಳೆದುಕೊಂಡಿದ್ದವು. ಇಂದಿಗೂ ಮಲೆನಾಡಿನ ಕೆಲವು ಗ್ರಾಮಗಳು ವಿದ್ಯುತ್ನ ಬೆಳಕು ಕಾಣದ ಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಮಳೆ ಮತ್ತು ಗಾಳಿಗೆ 998 ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫಾರ್ಮರ್ಗಳಿಗೆ ಹಾನಿ ಸಂಭವಿಸಿದ್ದು, ಇದರಿಂದ 67.36 ಲಕ್ಷ ರುಪಾಯಿ ನಷ್ಟವಾಗಿದೆ.
ವಾಡಿಕೆ ಮೀರಿದ ಮಳೆ: ಕಳೆದ ವರ್ಷದಲ್ಲಿ ಜಿಲ್ಲೆಯ ಬಯಲುಸೀಮೆಯಲ್ಲಿ ಬರಗಾಲ, ಮಲೆನಾಡಿನ ಕೆಲವು ಪ್ರದೇಶದಲ್ಲಿ ಅತೀವೃಷ್ಟಿ ಸಂಭಿಸಿತ್ತು. ಅತಿವೃಷ್ಟಿಯಿಂದ ಈ ಮಟ್ಟದಲ್ಲಿ ನಷ್ಟ, ಭೂ ಕುಸಿತ ಉಂಟಾಗಿರಲಿಲ್ಲ. ಈ ಮಟ್ಟದಲ್ಲಿ ಹಾನಿ ಸಂಭವಿಸಿರಲಿಲ್ಲ.
ಜಿಲ್ಲೆಯಾದ್ಯಂತ ಇರುವ 46 ಮಳೆಯ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆಯ ಪ್ರಮಾಣದ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಶೇ. 178.4 ರಷ್ಟು ಮಳೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ಇಷ್ಟು ಪ್ರಮಾಣದಲ್ಲಿ ಮಳೆ ಬಂದಿದೆ.
ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಅಂದರೆ ಜನವರಿ 1 ರಿಂದ ಡಿಸೆಂಬರ್ 31ರವರೆಗೆ 1904 ಮಿ.ಮೀ. ಪ್ರಸಕ್ತ ವರ್ಷದಲ್ಲಿ ಜನವರಿ 1 ರಿಂದ ಆಗಸ್ಟ್ 6ರವರೆಗೆ ಜಿಲ್ಲೆಯಲ್ಲಿ ಸರಾಸರಿ ವಾಡಿಕೆ ಮಳೆ 1191.9 ಮಿ.ಮೀ. ಆದರೆ, ಈವರೆಗೆ ಜಿಲ್ಲೆಯಲ್ಲಿ ಬಿದ್ದ ಸರಾಸರಿ ಮಳೆ 2125.8 ಮಿ.ಮೀ. ಬಂದಿದೆ.
ಚಿಕ್ಕಮಗಳೂರು ತಾಲೂಕಿನ ವಾಡಿಕೆ ಮಳೆ 489 ಮಿ.ಮೀ. ಈವರೆಗೆ ಬಂದ ಮಳೆ 1138.1 ಮಿ.ಮೀ., ಕಡೂರು ತಾಲೂಕು- ವಾಡಿಕೆ ಮಳೆ 265 ಮಿ.ಮೀ., ಬಿದ್ದ ಮಳೆ 402.8 ಮಿ.ಮೀ., ಕೊಪ್ಪ ತಾಲೂಕು- ವಾಡಿಕೆ 1979 ಮಿ.ಮೀ., ಬಿದ್ದ ಮಳೆ 3192.2 ಮಿ.ಮೀ., ಮೂಡಿಗೆರೆ ತಾಲೂಕು- ವಾಡಿಕೆ 1508 ಮಿ.ಮೀ., ಬಿದ್ದ ಮಳೆ 2798.4 ಮಿ.ಮೀ., ಎನ್.ಆರ್.ಪುರ ತಾಲೂಕು- ವಾಡಿಕೆ ಮಳೆ 1073, ಬಿದ್ದ ಮಳೆ 1735.5 ಮಿ.ಮೀ., ಶೃಂಗೇರಿ ತಾಲೂಕು- ವಾಡಿಕೆ ಮಳೆ 2533 ಮಿ.ಮೀ., ಬಿದ್ದ ಮಳೆ 4844.6 ಮಿ.ಮೀ., ತರೀಕೆರೆ ತಾಲೂಕು- ವಾಡಿಕೆ ಮಳೆ 496 ಮಿ.ಮೀ., ಬಂದ ಮಳೆ 769.1 ಮಿ.ಮೀ., ಈ ವರ್ಷದಲ್ಲಿ ಏಪ್ರಿಲ್ ತಿಂಗಳು ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ತಿಂಗಳುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸದ್ಯ ಬಯಲುಸೀಮೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ.
ಭೂ ಕುಸಿತ: ಸಂಪರ್ಕ ಕಡಿತ
ಬಾಳೆಹೊನ್ನೂರು: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಸಮೀಪದ ಮೇಗುಂದಾ ಹೋಬಳಿಯ ಕೊಗ್ರೆಯಿಂದ ಕಲ್ಲುಗುಡ್ಡೆ- ಮೆಣಸಿನಹಾಡ್ಯ ಸಂಪರ್ಕ ಕಲ್ಪಿಸುವ ಸಾತ್ಕೊಡಿಗೆ ಎಂಬಲ್ಲಿ ರಸ್ತೆಯಲ್ಲಿ ಭೂ ಕುಸಿತ ಸಂಭವಿಸಿ ಆ ಭಾಗದ ಸಂಪರ್ಕ ಕಡಿತಗೊಂಡಿದೆ.
ಈ ಜಾಗದಲ್ಲಿ ಕಾಲುವೆ ರೀತಿಯಲ್ಲಿ ಭಾರಿ ಕಂದಕವೊಂದು ನಿರ್ಮಾಣವಾಗಿದ್ದು, ಆ ಭಾಗದ ಜನರಿಗೆ ಹೊರ ಊರಿನ ಸಂಪರ್ಕ ಕಡಿತಗೊಂಡಿದೆ. ಕಳೆದ ಎರಡು ದಿನಗಳಿಂದ ಈ ಭಾಗಗಳಲ್ಲಿ ಮಳೆಯ ಪ್ರಮಾಣ ಕೊಂಚ ತಗ್ಗಿದ್ದರೂ ಹಿಂದೆ ಸುರಿದ ಮಳೆಯ ಪರಿಣಾಮ ಅನಾಹುತಗಳು ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

