ಚಿಕ್ಕಮಗಳೂರು

ಮೋಜು, ಮಸ್ತಿ ತಾಣವಾದ ಗಿರಿ ಶ್ರೇಣಿಗಳು

Published On :

ಕ.ಪ್ರ.ವಾರ್ತೆ  ,  ಚಿಕ್ಕಮಗಳೂರು  ,   ಆ.14
ಜಿಲ್ಲೆಯ ಗಿರಿ ಶ್ರೇಣಿ ಮೋಜು, ಮಸ್ತಿಯ ತಾಣವಾಗುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಪರಿಸರಾಸಕ್ತ ವೀರೇಶ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನ ಮುಳ್ಳಯ್ಯಗಿರಿ, ಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲುಗಳು ಒಂದೆನ್ನಿಸಿವೆ. ಪಶ್ಚಿಮಘಟ್ಟಗಳ ಶ್ರೇಣಿಗಳು ಇವಾಗಿದ್ದು ಜಿಲ್ಲೆಯ ಪ್ರಮುಖ ನದಿ ತೊರೆಗಳ ಜನ್ಮಸ್ಥಳವು ಈ ಗಿರಿಸಾಲುಗಳಾಗಿವೆ. ಸರ್ಕಾರದ ಅವೈಜ್ಞಾನಿಕ ನೀತಿಗಳು ಮತ್ತು ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯತೆಯ ಪರಿಣಾಮ ಇಂದು ಗಿರಿಸಾಲುಗಳು ಮಲೀನ ವಾಗುತ್ತಿವೆ. ಪರಿಸರ ಪ್ರವಾಸೋದ್ಯಮ ಹೆಸರಿನಲ್ಲಿ ಹೆಗ್ಗಿಲ್ಲದೇ ಮೋಜು, ಮಸ್ತಿ ನಡೆಸುವ ತಾಣಗಳಾಗಿವೆ. ಈ ಪ್ರದೇಶಗಳು ಮಾರ್ಪಾಡಾಗಿವೆ. ಇಲ್ಲಿ ದಿನನಿತ್ಯ ಪ್ರವಾಸಿಗರಿಂದ ಕಿರಿಕಿರಿ ಉಂಟಾಗುತ್ತಿದ್ದು ಮತ್ತು ಪರಿಸರ ನಾಶವಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾರಾಂತ್ಯದ ರಜಾಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರುವ ಪ್ರವಾಸಿಗರು ಅಲ್ಲಿ ಮದ್ಯದ ಬಾಟಲಿಗಳನ್ನು ಕೊಂಡೊಯ್ದು ಕುಡಿದು ಕುಪ್ಪಳ್ಳಿಸಿ ಎಲ್ಲೆಂದರಲ್ಲಿ ಬಾಟಲಿಗಳನ್ನು ಹೊಡೆದು ಹಾಕುತ್ತಾ ಸ್ಥಳದ ಪಾವಿತ್ರತೆಯನ್ನು ಹಾಳು ಮಾಡುತ್ತಾ ಪರಿಸರವನ್ನು ನಾಶ ಮಾಡುತ್ತಿದ್ದಾರೆ. ಸುಸಂಸ್ಕೃತ ಕುಟುಂಬಗಳು ಪರಿವಾರ ಸಮೇತ ಈ ತಾಣಗಳನ್ನು ಭೇಟಿ ಮಾಡುವುದೇ ಕಷ್ಟ ಸಾಧ್ಯವಾಗಿದೆ. ಕುಡುಕರು ಎಲ್ಲೆಂದರಲ್ಲಿ ಕುಡಿದು ತೂರಾಡುತ್ತಾ ಆವಾಚ್ಯ ಶಬ್ದಗಳಿಂದ ನಿಂಧಿಸುತ್ತಾ ಕೇಕೆ ಹಾಕುತ್ತಾ ವಾಹನಗಳಲ್ಲಿ ಮ್ಯೂಜಿಕ್ ಸಿಸ್ಟಂ ಹಾಕಿಕೊಂಡು ಜೋರಾಗಿ ನರ್ತಿಸುತ್ತಾ ಕೂಗಾಡುತ್ತಿರುವುದು ಅಲ್ಲಿ ಸಾಮಾನ್ಯವಾಗಿದೆ. ಇವುಗಳ ಮಧ್ಯೆ ಕುಟುಂಬಸ್ಥರು ಹೋಗುವುದೇ ಕಷ್ಟವಾಗಿದೆ. ಇನ್ನು ಬೆಂಗಳೂರು ಬೇರೆ ಬೇರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರು ಗಿರಿಸಾಲುಗಳ ರಸ್ತೆ ಬದಿಗಳಲ್ಲೇ ಟೆಂಟುಗಳನ್ನು ಹಾಕಿಕೊಂಡು ಮದ್ಯಪಾನವನ್ನು ಮಾಡುತ್ತಾ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಲೋಟಗಳನ್ನು ಬಳಸುತ್ತಾ ಎಲ್ಲೆಂದರಲ್ಲೇ ಇವುಗಳನ್ನು ಎಸೆಯುತ್ತಾ ಪರಿಸರವನ್ನು ನಾಶ ಮಾಡುತ್ತಿದ್ದಾರೆ ಕುಡುಕ ಪ್ರವಾಸಿಗರನ್ನು ನಿಯಂತ್ರಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಕಂಡು ಕಾಣದಂತೆ ಸುಮ್ಮನಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ 2 ವರ್ಷಗಳ ಹಿಂದೆ ಜಿಲ್ಲಾಡಳಿತ ಮತ್ತು ಪರಿಸರ ಸಂಘಟನೆಗಳು, ಅರಣ್ಯ ಇಲಾಖೆ, ಪರಿಸರ ಇಲಾಖೆ ಸೇರಿ ತನಿಖಾ ಠಾಣೆಯನ್ನು ತೆರೆದು ಮದ್ಯದ ಬಾಟಲಿಗಳನ್ನು ಮತ್ತು ಪ್ಲಾಸ್ಟಿಕ್ ಪರಿಕರಗಳನ್ನು ಗಿರಿಗೆ ಕೊಂಡೊಯ್ಯದಂತೆ ನಿರ್ಬಂಧ ಹೇರಿದ್ದು ಈಗ ಇತಿಹಾಸ ಪುಟ ಸೇರಿದೆ. ತನಿಖಾ ಠಾಣೆ ಈಗಾಗಲೇ ವಾಣಿಜ್ಯಕರಣಗೊಂಡಿದ್ದು ಅಲ್ಲಿ ಹಣ ವಸೂಲಿ ಮಾಡುವುದು ಬಿಟ್ಟರೆ ಮದ್ಯದ ಬಾಟಲಿಗಳಾಗಲೀ ಪ್ಲಾಸ್ಟಿಕ್ ಆಗಲೀ ಕೊಂಡೊಯ್ಯದಂತೆ ನಿರ್ಬಂಧಿಸುತ್ತಿಲ್ಲ. ಅಮೂಲ್ಯವಾದ ಶೋಲಾಕಾಡು ಹಾಗೂ ಹುಲ್ಲುಗಾವಲುಗಳು ದಿನೇ ದಿನೇ ಮಾಲಿನ್ಯಗೊಳ್ಳುತ್ತಿದ್ದು ಇದೇ ರೀತಿ ಮುಂದು ವರೆದರೆ ಗಿರಿಶ್ರೇಣಿಗಳು ಗಾಜು ಮತ್ತು ಪ್ಲಾಸ್ಟಿಕ್ ಮಯವಾಗುವುದರಲ್ಲಿ ಅನುಮಾನವೇ ಇಲ್ಲ. ಮುಂದೆ ಇದನ್ನು ಸರಿಪಡಿಸಲಾಗದಷ್ಟು ಹಾನಿ ಉಂಟಾಗುತ್ತದೆ.
ಕಿಕ್ಕಿರಿದು ತುಂಬುವ ಪ್ರವಾಸಿಗರಿಂದ ವನ್ಯಜೀವಿಗಳ ಮುಕ್ತ ಸಂಚಾರಕ್ಕೂ ಧಕ್ಕೆಯಾಗಿದೆ. ಸಂಜೆ ಮತ್ತು ರಾತ್ರಿ ಪ್ರವಾಸಿಗರು ಅಲ್ಲಿಯೇ ಗಿರಿಸಾಲುಗಳಲ್ಲಿಯೇ ಟೆಂಟ್‌ಗಳನ್ನು ಹಾಕಿ ಮದ್ಯ ಸೇವಿಸುತ್ತಾ ಮೋಜು ಮಸ್ತಿ ಮಾಡುತ್ತಾ ಸಂಗೀತ ಧ್ವನಿವರ್ಧಕಗಳನ್ನು ಬಳಸಿ ಕುಣಿಯುತ್ತಾ ಅರಣ್ಯದ ಪ್ರಶಾಂತತೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆ. ಇದರಿಂದ ವನ್ಯಜೀವಿಗಳ ನೆಮ್ಮದಿಯ ಬದುಕಿಗೆ ಧಕ್ಕೆ ತಂದಂತಾಗಿದೆ. ಅವುಗಳ ಮುಕ್ತ ಸಂಚಾರಕ್ಕೂ ಹಾನಿಯುಂಟಾಗುತ್ತಿದೆ. ಪ್ರವಾಸಿಗರು ತಂದು ಬಿಸಾಕಿದ ತಿಂಡಿನ ಪೊಟ್ಟಣಗಳನ್ನು ವನ್ಯಜೀವಿಗಳು ಸೇವಿಸಿ ಅಪಾಯ ತಂದುಕೊಂಡಿರುವ ಘಟನೆಗಳು ನಡೆದಿವೆ.
ಕೈಮರದ ಬಳಿಯ ಚೆಕ್‌ಪೋಸ್ಟ್ ಬಿಗಿಗೊಳಿಸಿ ಮದ್ಯ, ಪ್ಲಾಸ್ಟಿಕ್ ತಪಾಸಣೆಯನ್ನು ಕಡ್ಡಾಯಗೊಳಿಸಬೇಕಾಗಿದೆ ಮತ್ತೆ ಮದ್ಯ ವ್ಯಸನಿಗಳನ್ನು ನಿಯಂತ್ರಿಸಲು ಪರಿಸರಾಸಕ್ತರು ಮತ್ತು ಅಧಿಕಾರಿಗಳ ತಂಡಗಳನ್ನು ರಚಿಸಿ ದಂಡ ಹಾಕುವ ರೀತಿ ಮದ್ಯವ್ಯಸನಿಗಳನ್ನು ತಡೆಗಟ್ಟಲು ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.