ಚಿಕ್ಕಮಗಳೂರು

ಆಡಳಿತ ನಡೆಸುವಲ್ಲಿ ರಾಜ್ಯ ಸರ್ಕಾರ ವಿಫಲ

Published On :

ಕ.ಪ್ರ.ವಾರ್ತೆ  ಚಿಕ್ಕಮಗಳೂರು   ಆ.17
ರಾಜ್ಯ ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಿತ್ತಾಟ ನಡೆಯುತ್ತಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಶನಿವಾರ ನಡೆದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ 3 ತಿಂಗಳ ಆಡಳಿತ ಬಗ್ಗೆ ವಿಶ್ಲೇಷಣೆ ಮಾಡಿದರು.
ಆಂತರಿಕ ಭಿನ್ನಾಭಿಪ್ರಾಯ: ಪಕ್ಷದ ಆಂತರಿಕ ವಿದ್ಯಾಮಾನಗಳು ಮತ್ತು ವಿಚಾರಗಳ ಬಗ್ಗೆ ಜನತೆ ಗಮನಿಸಿದ್ದಾರೆ ಎಂಬುದು ಕಳೆದ ಮೂರು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೋಡಿದ್ದೇವೆ. ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು ಮಾತ್ರ ರಾಜಕೀಯ ಪಕ್ಷಗಳಿಗೆ ಪರೀಕ್ಷೆ ಅಲ್ಲ. ಆಂತರಿಕ ವಿದ್ಯಾಮಾನಗಳು ಪರೀಕ್ಷೆಗೆ ಒಳಪಡಲಿವೆ ಎಂಬುದನ್ನು ಜನರು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಹೇಳುವ ರೀತಿಯಲ್ಲಿ ಹಿಂದಿನ ಸರ್ಕಾರ ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆ ಸಾಧಿಸಿಲ್ಲ. ಆಂತರಿಕ ಭಿನ್ನಾಭಿಪ್ರಾಯದಿಂದ ಬಿಜೆಪಿಗೆ ಮತದಾರರು ತಾತ್ಕಾಲಿಕವಾಗಿ ಸಣ್ಣ ಶಾಕ್ ನೀಡಿದ್ದಾರೆಯೇ ಹೊರತು ಪಕ್ಷವನ್ನು ಪೂರ್ಣ ಪ್ರಮಾಣದಲ್ಲಿ ದೂರ ಮಾಡಿಲ್ಲ ಎಂದರು.
ಅತೃಪ್ತ ಆತ್ಮಗಳು: ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳವರೆಗೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ. ಆದರೆ, ತದನಂತರದಲ್ಲಿ ಪಕ್ಷದ ಕೆಲವು ಮಂದಿ ಚೆನ್ನೈ, ಹೈದ್ರಾಬಾದ್‌ಗೆ ಹೋಗಿ ಗುಂಪುಗಾರಿಕೆ ಮಾಡಿದ್ದರಿಂದ ಕಳೆದ ಚುನಾವಣೆಯಲ್ಲಿ ಹಿನ್ನಡೆಯಾಯಿತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ. ಪಕ್ಷದಲ್ಲಿ ಅತೃಪ್ತ ಆತ್ಮಗಳು ಓಡಾಡುತ್ತಿವೆ ಎಂದು ಆರೋಪಿಸಿದರು.
ಸಮನ್ವಯ ಸಮಿತಿ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಮ್ಮಿಶ್ರ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಸಮನ್ವಯ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೂ ಆ ಪಕ್ಷ ಸಮನ್ವಯ ಸಮಿತಿಯನ್ನು ರಚನೆ ಮಾಡಿ, ಓಡುತ್ತಿರುವ ಸಿದ್ದರಾಮಯ್ಯ ಎಂಬ ಕುದುರೆಗೆ ಪರಮೇಶ್ವರ್ ಅವರ ಮೂಲಕ ಕಡಿವಾಣ ಹಾಕಿದೆ. ಕೇಂದ್ರದ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ಹೈಕಮಾಂಡ್ ಅಪೇಕ್ಷಿಸಿದರೆ ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಹೇಳಿರುವುದು ನೋಡಿದರೆ ಆ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಇರುವುದು ಈ ಬೆಳವಣಿಗೆಯ ಮೂಲಕ ಸಾಭೀತಾಗಿದೆ ಎಂದು ಹೇಳಿದರು.
ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ: ಮುಖ್ಯಮಂತ್ರಿಗಳಿಗೆ ತಾಳ್ಮೆ ಇಲ್ಲ. ವ್ಯಕ್ತಿಗತವಾಗಿ ಅಧಿಕಾರವನ್ನು ಚಲಾವಣೆ ಮಾಡಲು ಮುಂದಾಗಿದ್ದಾರೆ. ಸಂಪುಟದ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಹೊಸ ಕಾರ್ಯಕ್ರಮವನ್ನು ಪ್ರಕಟಿಸುವ ಮೊದಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿಲ್ಲ, ಮುಖ್ಯಮಂತ್ರಿಗಳ ಆತುರದ ಕೆಲವು ನಿರ್ಧಾರಗಳು ನೋಡಿದರೆ ಈ ಎಲ್ಲಾ ಕಾರ್ಯಕ್ರಮಗಳ ಕ್ರೆಡಿಟ್ ತಮಗೆ ಸಲ್ಲಬೇಕು. ಕಾಂಗ್ರೆಸ್ ಪಕ್ಷಕ್ಕಲ್ಲ ಎಂಬ ಮನೋಭಾವನೆಯನ್ನು ಹೊಂದಿದ್ದಾರೆ ಎಂದು ಟೀಕಿಸಿದರು.
ಶಾಲಾ ಮಕ್ಕಳಿಗೆ ಹಾಲು ವಿತರಣಾ ಮಾಡುವ ಕಾರ್ಯಕ್ರಮವನ್ನು ಅನುಷ್ಟಾನಕ್ಕೆ ತರಲಾಗಿದೆ. ಆದರೆ, ಬಹಳಷ್ಟು ಶಾಲೆಗಳಲ್ಲಿ ಈ ಕಾರ್ಯಕ್ರಮ ಈವರೆಗೆ ಜಾರಿಗೆ ಬಂದಿಲ್ಲ. ಕೆಲವು ಶಾಲೆಗಳಿಗೆ ಬೈಸಿಕಲ್ ವಿತರಣೆ ಮಾಡಿಲ್ಲ. ಸುವರ್ಣ ಗ್ರಾಮ ಯೋಜನೆಗೆ ಹಣ ಬಿಡುಗಡೆಯಾಗಿಲ್ಲ. ಈ ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಮಾಡಿದರೆ, ಅದರ ಕ್ರೆಡಿಟ್ ಬಿಜೆಪಿಗೆ ಹೋಗುತ್ತದೆ ಎಂಬ ಉದ್ದೇಶವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ. ಇದೊಂದು ದ್ವೇಷದ ರಾಜಕಾರಣ ಎಂದು ಹೇಳಿದರು.
ರಾಜ್ಯದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಈ ಚುನಾವಣಾ ಫಲಿತಾಂಶ ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ದೇವೇಗೌಡರ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರದಲ್ಲಿ ಕಳೆದ 9 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಬಗ್ಗೆಯಾಗಲೀ, ರಾಜ್ಯ ಸರ್ಕಾರದ 3 ತಿಂಗಳ ಅಧಿಕಾರದ ಬಗ್ಗೆ ಎಲ್ಲೂ ಚರ್ಚೆ ನಡೆಯುತ್ತಿಲ್ಲ. ಬದಲಿಗೆ ಅಭ್ಯರ್ಥಿಯ ತಂದೆ ಯಾರು, ತಿಥಿ ಯಾರು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.
ಸ್ಥಿರ ಸರ್ಕಾರಕ್ಕಾಗಿ ಬಿಜೆಪಿ ಆಪರೇಷನ್ ಕಮಲ ಮಾಡಿತ್ತು. ಆದರೆ, ಬಹುಮತದ ಸರ್ಕಾರ ಇದ್ದರೂ ಕಾಂಗ್ರೆಸ್ ಆಪರೇಷನ್ ಕೈಗೆ ಮುಂದಾಗಿದೆ. ಕೆಲವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಪಾಪ ಈ ಪರಿಸ್ಥಿತಿ ಮುಖ್ಯಮಂತ್ರಿಗಳಿಗೆ ಬರಬಾರದಿತ್ತು ವ್ಯಂಗ್ಯವಾಡಿದರು. ಇತ್ತೀಚೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ತಾವು ಹಾಗೂ ಕೆ.ಎಸ್. ಈಶ್ವರಪ್ಪ ಅವರು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಲಾಯಿತು. ಆ ಸಂದರ್ಭದಲ್ಲಿ ಮೋದಿ ಅವರು ವಿಭಜನೆಯಾಗಿರುವ ಬಿಜೆಪಿ ಒಂದಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ನಾವು ಒಂದಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಹಿಂದೆ ತಪ್ಪು ಮಾಡಿದ್ದೇವೆ. ಅದು, ಮನಸ್ಸಿಗೆ ನಾಟಿದೆ. ಹಿಂದೆ ಮಾಡಿದ ತಪ್ಪು ಮತ್ತೆ ಮುಂದೆ ಮಾಡುವುದಿಲ್ಲ. ಸಂಘಟನೆಯ ಮೂಲಕ ಮತ್ತೆ ಪಕ್ಷವನ್ನು ಸದೃಢಗೊಳಿಸಿ ಮುನ್ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ, ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಈ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಒಬ್ಬರನ್ನು ಕಳುಹಿಸಬೇಕು. ಇಷ್ಟೆ ಅಲ್ಲಾ, ಕಡೂರು ಕ್ಷೇತ್ರಕ್ಕೆ ಒಳಪಡುವ ಹಾಸನ ಲೋಕಸಭಾ ಕ್ಷೇತ್ರದಿಂದಲೂ ಬಿಜೆಪಿಯ ಸಂಸದರನ್ನು ಕಳುಹಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು. ರಾಜ್ಯಮಟ್ಟದ ರಾಜಕಾರಣದಿಂದಾಗಿ ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಇದು, ಜಿಲ್ಲೆಯ ಮೇಲೂ ಪರಿಣಾಮ ಬೀರಿದ್ದರಿಂದ ಕೆಲವು ಕ್ಷೇತ್ರಗಳಲ್ಲಿ ನಮ್ಮ ಪಕ್ಷಕ್ಕೆ ಗೆಲವು ಸಾಧ್ಯವಾಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ಎದುರಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ನಿಜವಾದ ಕಾಳಜಿ ಇದಿದ್ದರೆ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದರು. ಚುನಾವಣಾ ಪ್ರಚಾರಕ್ಕೆ ಹೋಗಲು ಅವರಿಗೆ ಬಿಡುವಿದೆ. ಆದರೆ, ಇಲ್ಲಿಗೆ ಬರಲು ಸಮಯವಿಲ್ಲ ಎಂದ ಅವರು, ಜಿಲ್ಲೆಯ ಆಲೂಗೆಡ್ಡೆ ಬೆಳೆ ಅಂಗಮಾರಿ ರೋಗಕ್ಕೆ ತುತ್ತಾಗಿದೆ. ಸರ್ಕಾರ ಎಕರೆವಾರು ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಡಾ.ವೈ.ಸಿ. ವಿಶ್ವನಾಥ್ ಅವರು ಅಭಿನಂದನಾ ಭಾಷಣ ಮಾಡಿದರು. ಎಂ.ಕೆ. ಪ್ರಾಣೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಉಪಾಧ್ಯಕ್ಷೆ ಸುಜಾತ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಬೋಜೇಗೌಡ ಹಾಗೂ ಪಕ್ಷದ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.