ಪಡಿತರ ವಿತರಣೆ ಸ್ಥಗಿತಕ್ಕೆ ಚಿಂತನೆ
ಕ.ಪ್ರ.ವಾರ್ತೆ ಟಿ ನ.ರಾ. ಪುರ ಟಿ ಆ.19
ಸರ್ಕಾರದ ಪಡಿತರ ವಿತರಣೆ ಮಾಡುವ ನ್ಯಾಯಬೆಲೆ ಅಂಗಡಿಗಳಿಗೆ ಸೂಕ್ತ ಕಮೀಷನ್ ಹಾಗೂ ಇತರೆ ಖರ್ಚುಗಳನ್ನು ವೈಜ್ಞಾನಿಕ ನೀಡದೆ ಇರುವುದರಿಂದ ಪಡಿತರ ವ್ಯವಸ್ಥೆ ಸ್ಥಗಿತಗೊಳಿಸಲು ತಾಲೂಕಿನ ನ್ಯಾಯಬೆಲೆ ಅಂಗಡಿಗಳು ಗಂಭೀರ ಚಿಂತನೆ ನಡೆಸಿವೆ.
ತಾಲೂಕಿನಲ್ಲಿ ಒಂದು ಟಿ.ಎ.ಪಿ.ಸಿ.ಎಂ.ಎಸ್, 6 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ 27 ವಿವಿಧ ಶಾಖೆಗಳು ಸೇರಿ ಒಟ್ಟು 32 ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡಲಾಗುತ್ತದೆ. ಆದರೆ, ಸರ್ಕಾರ ಸಾರ್ವಜನಿಕರಿಗೆ, ಬಡವರಿಗೆ ಅನುಕೂಲವಾಗುವ ಉದ್ದೇಶದಿಂದ ಹಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ.
ಬಯೋವುಟ್ರಿಕ್: ಫಲಾನುಭವಿಗಳಿಗೆ ಸರಿಯಾದ ಪಡಿತರ ಸಿಗಲಿ ಎಂದು ಬಯೋವುಟ್ರಿಕ್ ಪದ್ಧತಿ ಜಾರಿಗೆ ತಂದಿದೆ. ಆದರೆ, ಇದನ್ನು ನಿಭಾಯಿಸುತ್ತಿರುವ ನ್ಯಾಯಬೆಲೆ ಅಂಗಡಿಗಳ ಸಮಸ್ಯೆಗಳನ್ನು ಮಾತ್ರ ಗಂಭೀರವಾಗಿ ತೆಗೆದುಕೊಳ್ಳದೇ ಇರುವುದರಿಂದ ಹಲವು ನ್ಯಾಯಬೆಲೆ ಅಂಗಡಿಗಳು ನಷ್ಟ ಅನುಭವಿಸುತ್ತಿದೆ.
ಈ ಬಗ್ಗೆ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿರುವ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ ಚರ್ಚೆ ನಡೆಸಿ ಸಮಸ್ಯೆ ಬಗ್ಗೆ ಹರಿಸದಿದ್ದರೆ ಮುಂದಿನ ತಿಂಗಳಿಂದಲೇ ಪಡಿತರ ವ್ಯವಸ್ಥೆ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಈ ಬಗ್ಗೆ ರಾಜ್ಯ ಆಹಾರ ಮ್ತತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶೃಂಗೇರಿ ಕ್ಷೇತ್ರ ಶಾಸಕ ಡಿ.ಎನ್. ಜೀವರಾಜ್ ಅವರಿಗೂ ಮನವಿ ಸಲ್ಲಿಸಿದ್ದಾರೆ.
ಕಮೀಷನ್ ದರ ಕಡಿಮೆ: ಮುಖ್ಯವಾಗಿ ರು. 1ದರದ ಅಕ್ಕಿಯನ್ನು 1 ಕ್ವಿಂಟಲ್ ಮಾರಿದರೆ ರು. 31 ಸಿಗಲಿದೆ. ರು. 100 ಕ್ವಿಂಟಲ್ ಮಾರಿದರೆ ರು. 3100 ಕಮೀಷನ್ ಸಿಗಲಿದೆ. ಆದರೆ, ಪಡಿತರ ಅಕ್ಕಿಯು ಕಾರ್ಡಿನ ಸಂಖ್ಯೆಗೆ ಅನುಗುಣವಾಗಿ ಬರುವುದರಿಂದ ಕಡಿಮೆ ಸಂಖ್ಯೆ ಪಡಿತರ ಕಾರ್ಡು ಇದ್ದರೆ ಅಲ್ಲಿಗೆ ಬರುವ ಅಕ್ಕಿ ಕಡಿಮೆಯಾಗುತ್ತದೆ. ಇದರಿಂದ ಕಮೀಷನ್ ಕೂಡಾ ಕಡಿಮೆಯಾಗುತ್ತದೆ. ಸಿಬ್ಬಂದಿ ಮಾತ್ರ ಅಷ್ಟೇ ಬೇಕಾಗುತ್ತದೆ. ನರಸಿಂಹರಾಜಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ಬಾಳೆಕೊಪ್ಪ ಶಾಖೆಯ ನ್ಯಾಯಬೆಲೆ ಅಂಗಡಿಯಲ್ಲಿ ಕೇವಲ 136 ಪಡಿತರ ಕಾರ್ಡುದಾರರಿದ್ದಾರೆ. ಆ ನ್ಯಾಯ ಬೆಲೆ ಅಂಗಡಿಗಳಿಗೆ ಅಗತ್ಯವಾದ ಸಿಬ್ಬಂದಿ ಹಾಗೂ ಇತರೆ ಸೌಕರ್ಯ ಮಾಡಲೇ ಬೇಕಾಗುತ್ತದೆ.
ಆದರೆ ಕಮೀಷನ್ ಕಡೆಮೆಯಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಅಂತಹ ನ್ಯಾಯಬೆಲೆ ಅಂಗಡಿಗಳನ್ನು ಮೂಲ ಸಂಘಕ್ಕೆ ವಿಲೀನ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.
ಹಮಾಲಿ ಕಡಮೆ: ಸರ್ಕಾರ ಪ್ರತಿ ಕ್ವಿಂಟಲ್ಗೆ ರು. 6 ರುಪಾಯಿ ಹಮಾಲಿ ನಿಗದಿ ಮಾಡಿದೆ. ಈಗಿನ ಮಾರುಕಟ್ಟೆಯ ದರದಂತೆ ಕೂಲಿ ದರವು 1 ಕ್ವಿಂಟಲ್ಗೆ ರು. 12 ಕೇಳುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳ ನ್ಯಾಯ ಬೆಲೆ ಅಂಗಡಿಗಳಿಗೆ ಸಾಗಾಣಿಕೆ ವೆಚ್ಚವನ್ನು 1 ಕಿ.ಮೀ.ಗೆ ರು. 1 ನಿಗದಿ ಮಾಡಿದೆ. ಈಗ ವಾಹನ ಮಾಲೀಕರು ಆ ಬಾಡಿಗೆಗೆ ಬರುತ್ತಿಲ್ಲ. ಹೆಚ್ಚಿನ ಬಾಡಿಗೆಯನ್ನು ಸಹಕಾರ ಸಂಘಗಳೇ ಭರಿಸುತ್ತಿದ್ದಾರೆ.
3 ಕಿ.ಮೀ.ಒಳಗಡೆ ಇಲ್ಲ: ನರಸಿಂಹರಾಜಪುರ ಪಟ್ಟಣದಿಂದ 3 ಕಿ.ಮೀ.ವ್ಯಾಪ್ತಿಯ ಒಳಗಡೆ ಇರುವ ನ್ಯಾಯಬೆಲೆ ಅಂಗಡಿಗಳಿಗೆ ಸಾಗಾಣಿಕೆ ವೆಚ್ಚ ಕೊಡುತ್ತಿಲ್ಲ. ಇದನ್ನೂ ಆಯಾ ಸಹಕಾರ ಸಂಘಗಳೇ ಭರಿಸಬೇಕಾಗಿದೆ.
ಟಿ.ಎ.ಪಿ.ಸಿ.ಎಂ.ಎಸ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಗಳಿಗೆ ಕೇಂದ್ರ ಗೋದಾಮಿನಿಂದ ಪಡಿತರ ತರಲು ಸಾಗಾಣಿಕೆ ವೆಚ್ಚ ನೀಡದೆ ಇರುವುದರಿಂದ ಈ ಮೂರೂ ಸಂಘಗಳು ನಷ್ಟ ಅನುಭವಿಸುತ್ತಿದೆ.
ಗೋದಾಮಿನಲ್ಲೂ ಬಯೋವುಟ್ರಿಕ್ ಅಳವಡಿಸಿ: ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವ್ಯವಸ್ಥೆಯನ್ನು ಬಯೋ ಮೆಟ್ರಿಕ್ ಪದ್ಧತಿಯಲ್ಲಿ ನೀಡುತ್ತಿರುವಂತೆಯೇ ಗೋದಾಮಿನಲ್ಲೂ ಬಯೋ ಮೆಟ್ರಿಕ್ ಪದ್ಧತಿಯಲ್ಲೇ ತೂಕ ಮಾಡಲಿ ಎಂಬುದು ನ್ಯಾಯಬೆಲೆ ಅಂಗಡಿಗಳ ಒತ್ತಾಯ.
ಗೋದಾಮಿನಲ್ಲಿ ಬೇರೆ ಸ್ಕೇಲಿನಲ್ಲಿ ತೂಕ ಮಾಡಿಸಿ ತರಲಾಗುತ್ತದೆ. ಇಲ್ಲಿ ಬಯೋ ಮೆಟ್ರಿಕ್ ಪದ್ಧತಿಯಲ್ಲಿ ಚಿಲ್ಲರೆ ಮಾರಾಟ ಮಾಡಿ, ಗ್ರಾಹಕರಿಗೆ ನೀಡುತ್ತೇವೆ. ಈ ಮಧ್ಯೆ ಚೀಲ ಸರಿಯಾಗಿ ಇಲ್ಲದೆ ಅಕ್ಕಿ ಸೋರಿ ಹೋಗುತ್ತಿದೆ. ಆಹಾರ ಧಾನ್ಯ ವ್ಯತ್ಯಾಸ ಬಂದರೆ ನೌಕರರನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ ಎಂಬುದು ನ್ಯಾಯಬೆಲೆ ಅಂಗಡಿಗಳ ದೂರು.
ಅನುದಾನ ನಿಗದಿಯಾಗಲಿ: ಕಡಮೆ ಪಡಿತರ ಕಾರ್ಡು ಇರುವ ನ್ಯಾಯಬೆಲೆ ಅಂಗಡಿಗಳಿಗೆ ಆಗುವ ನಷ್ಟ ಸರಿದೂಗಿಸಬೇಕಾದರೆ ಈಗಿರುವ ಕಮೀಷನ್ ಪದ್ಧತಿ ತೆಗೆದುಹಾಕಿ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೂ ನಿಗದಿತ ಅನುದಾನ ನಿಗದಿ ಮಾಡಲಿ ಎಂಬುದು ನ್ಯಾಯಬೆಲೆ ಅಂಗಡಿಗಳ ಅಭಿಪ್ರಾಯ.
ಇದರಿಂದ ಅತಿ ಕಡಿಮೆ ಪಡಿತರ ಕಾರ್ಡು ಇರುವ ನ್ಯಾಯಬೆಲೆ ಅಂಗಡಿಗಳಿಗೆ ನಷ್ಟ ಉಂಟಾಗುವುದಿಲ್ಲ. ಒಂದು ನ್ಯಾಯ ಬೆಲೆ ಅಂಗಡಿ ನಡೆಸಲು ಇಬ್ಬರು ನೌಕರರ ಸಂಬಳ, ಗೋದಾಮು ಬಾಡಿಗೆ, ವಿದ್ಯುತ್ ಖರ್ಚು, ತೂಕ ಮತ್ತು ಅಳತೆ ಇತರೆ ಖರ್ಚು ಸೇರಿ ತಿಂಗಳಿಗೆ ರು. 16,500 ಖರ್ಚು ಬರುತ್ತಿದೆ ಎನ್ನುತ್ತಾರೆ ನರಸಿಂಹರಾಜಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ್.
ರು. 25 ಪೈಸೆ ಹೆಚ್ಚುವರಿ ಶುಲ್ಕ: ನ್ಯಾಯ ಬೆಲೆ ಅಂಗಡಿಗಳಲ್ಲಿ ಆಗುತ್ತಿರುವ ನಷ್ಟ ತಪ್ಪಿಸಲು ಆಯಾ ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಪ್ರತಿ ಒಂದು ಕೆ.ಜಿ.ಅಕ್ಕಿಗೆ ರು. 25 ಪೈಸೆ ಹೆಚ್ಚುವರಿ ಸೇವಾ ಶುಲ್ಕ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೋಟಿಸ್ ನೀಡಿರುವುದರಿಂದ ಇದನ್ನು ಕೈಬಿಡಲಾಗಿದೆ.
ಆದರೆ ನ್ಯಾಯಬೆಲೆ ಅಂಗಡಿಗಳ ನಷ್ಟ ತುಂಬಿಕೊಂಡುವರು ಯಾರು ಎಂಬುದೇ ನ್ಯಾಯ ಬೆಲೆ ಅಂಗಡಿಗಳ ಪ್ರಶ್ನೆಯಾಗಿದೆ.
ಯಡಗೆರೆ ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

