ರಬ್ಬರ್ ಮಂಡಳಿಗೆ ಕಾಯಂ ಫೀಲ್ಡ್ ಆಫೀಸರ್ ಇಲ್ಲ
ನರಸಿಂಹರಾಜಪುರ: ಹೆಚ್ಚಿನ ಮಳೆಯಿಂದಾಗಿ ರಬ್ಬರ್ ತೋಟಗಳಿಗೆ ಕೊಳೆ ರೋಗ ಕಾಣಿಸಿಕೊಂಡಿದ್ದರೂ ತಾಲೂಕಿನ ರಬ್ಬರ್ ಮಂಡಳಿ ಕಚೇರಿಯಲ್ಲಿ ಕಾಯಂ ಫೀಲ್ಡ್ ಆಫೀಸರ್ ಇಲ್ಲದೆ ರಬ್ಬರ್ ಬೆಳೆಗಾರರಿಗೆ ತಾಂತ್ರಿಕ ಸಲಹೆ ಸಿಗುತ್ತಿಲ್ಲ ಎಂದು ರಬ್ಬರ್ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
20 ವರ್ಷಗಳ ಹಿಂದೆ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯು ಮಂಗಳೂರು ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿತ್ತು. ನಂತರದ ವರ್ಷಗಳಲ್ಲಿ ರಬ್ಬರ್ ಮಂಡಳಿ ಕುಂದಾಪುರ ಪ್ರಾದೇಶಿಕ ಕಚೇರಿಗೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯನ್ನು ಸೇರಿಸಲಾಯಿತು.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ 8 ಸಾವಿರ ಹೆಕ್ಚೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೊಪ್ಪ ತಾಲೂಕಿಗೂ ರಬ್ಬರ್ ತೋಟಗಳ ವಿಸ್ತರಣೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಸೊರಬ ತಾಲೂಕಿನಲ್ಲೂ ರಬ್ಬರ್ ಬೆಳೆಯಲಾಗುತ್ತಿದೆ. ಎರಡೂ ಜಿಲ್ಲೆಗಳ ರಬ್ಬರ್ ಬೆಳೆಗಾರರಿಗೆ ಕುಂದಾಪುರ ಪ್ರಾದೇಶಿಕ ಕಚೇರಿಯಿಂದಲೇ ಸಹಾಯಧನ ಮತ್ತಿತರ ಸೌಲಭ್ಯಗಳು ಬರುತ್ತಿದೆ.
ನರಸಿಂಹರಾಜಪುರ ರಬ್ಬರ್ ಮಂಡಳಿ ಕಚೇರಿಯಲ್ಲಿ ಹಿಂದೆ ಕಾಯಂ ಫೀಲ್ಡ್ ಆಫೀಷರ್ ಇದ್ದು ತಾಲೂಕಿನ ರಬ್ಬರ್ ಬೆಳೆಗಾರರಿಗೆ ಅಗತ್ಯವಾದ ತಾಂತ್ರಿಕ ಸಲಹೆ, ಸಹಕಾರ ನೀಡುತ್ತಿದ್ದರು.
ರಬ್ಬರ್ ತೋಟಗಳಿಗೂ ಬೇಟಿ ನೀಡುತ್ತಿದ್ದರು. ಆದರೆ, ಕಳೆದ ಒಂದು ವರ್ಷದ ಹಿಂದೆ ಇಲ್ಲಿನ ಪೀಲಲ್ಡ್ ಆಫೀಷರ್ ವರ್ಗಾವಣೆಗೊಂಡ ಮೇಲೆ ನರಸಿಂಹರಾಜಪುರ ರಬ್ಬರ್ ಮಂಡಳಿ ಕಚೇರಿಗೆ ಅಧಿಕಾರಿಯನ್ನು ಹಾಕಿಲ್ಲ. ತೀರ್ಥಹಳ್ಳಿ ರಬ್ಬರ್ ಮಂಡಳಿ ಪೀಲ್ಡ್ ಆಫೀಷರ್ ನರಸಿಂಹರಾಜಪುರ, ಕೊಪ್ಪ ತಾಲೂಕಿನ ರಬ್ಬರ್ ಬೆಳೆಗಾರರ ಸಹಾಯಧನದ ವ್ಯವಹಾರ ನೋಡಿಕೊಳ್ಳಬೇಕಾಗಿದೆ.
ಅಲ್ಲದೆ ರಬ್ಬರ್ ಬೆಳೆಗಾರರ ತೋಟಕ್ಕೆ ಬೇಟಿ ನೀಡುವುದು, ತಾಂತ್ರಿಕ ಸಲಹೆ ನೀಡುವುದು ಅವರ ಜವಬ್ದಾರಿಯಾಗಿದೆ.
ಎರಡೂ ರಬ್ಬರ್ ಮಂಡಳಿ ಕಚೇರಿಯನ್ನು ಒಬ್ಬರೇ ನೋಡಿಕೊಳ್ಳುವುದರಿಂದ ಅವರಿಗೆ ಸಮಯದ ಅಭಾವ ಉಂಟಾಗುತ್ತಿದೆ. ಇದರಿಂದ ತಾಲೂಕಿನ ರಬ್ಬರ್ ಬೆಳೆಗಾರರಿಗೆ ಅಗತ್ಯವಾದ ತಾಂತ್ರಿಕ ಸಲಹೆ ಸಿಗುತ್ತಿಲ್ಲ.
ಈ ವರ್ಷ ಕೊಳೆ ರೋಗ ಬಂದಾಗಲೂ ಸಲಹೆ ನೀಡಲು ರಬ್ಬರ್ ಮಂಡಳಿ ಅಧಿಕಾರಿಗಳು ರಬ್ಬರ್ ತೋಟಗಳಿಗೆ ಭೇಟಿ ನೀಡುತ್ತಿಲ್ಲ ಎಂದು ರಬ್ಬರ್ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಶಿವಮೊಗ್ಗಕ್ಕೆ ಕಚೇರಿ ಕೊಡಿ: ಶಿವಮೊಗ್ಗ ನಗರಕ್ಕೆ ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿ ನೀಡಿ ಎಂದು ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಲೇ ಬಂದಿದ್ದೇವೆ ಎನ್ನುತ್ತಾರೆ ತಾಲೂಕು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಟಿ.ವಿ. ವಿಜಯ್. ಕುಂದಾಪುರದಲ್ಲಿ ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿ ಇರುವುದರಿಂದ ಮಲೆನಾಡಿನ ರಬ್ಬರ್ ಬೆಳೆಗಾರರಿಗೆ ಅಂತರ ಜಾಸ್ತಿಯಾಗಿದ್ದು ಸಂಪರ್ಕಕ್ಕೆ ತೊಂದರೆಯಾಗುತ್ತಿದೆ.
ಶಿವಮೊಗ್ಗದಲ್ಲಿ ಪ್ರಾದೇಶಿಕ ಕಚೇರಿಯಾದರೆ ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಸೊರಬ, ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ, ಕೊಪ್ಪ ತಾಲೂಕುಗಳಿಗೆ ಹತ್ತಿರವಾಗುತ್ತದೆ.
ಈ ಬಗ್ಗೆ ರಬ್ಬರ್ ಉತ್ಪಾದಕರ ಸಂಘದಿಂದ ಕೇರಳ ರಾಜ್ಯದ ಕೊಟ್ಟಾಯಂನಲ್ಲಿರುವ ರಬ್ಬರ್ ಮಂಡಳಿ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದ ವಾಣಿಜ್ಯ ಸಚಿವರಿಗೂ ಮನವಿ ಸಲ್ಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

