ಎಲ್ಲರ ಒಳಿತಿಗೆ ಶ್ರಮಿಸಿದ್ದ ಗಾಂಧೀಜಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ. 1
ಗಾಂಧೀಜಿಯವರ ಸರಳ ಜೀವನ, ಹೋರಾಟದ ಮನೋಭಾವ, ಸತ್ಯ, ಸಹನೆ, ಸ್ವಾವಲಂಬನೆ, ಅಹಿಂಸೆ, ಸ್ವಾಭಿಮಾನದಂತಹ ಅವರ ಜೀವನಾದರ್ಶಗಳು ನಮಗೆಲ್ಲರಿಗೂ ಮಾರ್ಗದರ್ಶನ ಆಗಲಿದೆ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಹೇಳಿದ್ದಾರೆ.
ನಗರದ ಎಸ್ಟಿಜೆ ಮಹಿಳಾ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ವಾರ್ತಾ ಇಲಾಖೆ ಹಾಗೂ ತರಳಬಾಳು ಜಗದ್ಗುರು ಮಹಿಳಾ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಶನಿವಾರ ನಡೆದ ಗಾಂಧೀಜಿ ಚಿಂತನೆ ಹಾಗೂ ಪ್ರಸ್ತುಕತೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಶಾಂತಿ, ಅಹಿಂಸೆ ಮಾರ್ಗಗಳನ್ನು ದಿವ್ಯಾಸ್ತ್ರಗಳನ್ನಾಗಿ ಮಾಡಿಕೊಂಡು ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಗಾಂಧೀಜಿಯವರು ಭಾರತೀಯರಾದರೂ ಅವರ ವಿಚಾರಧಾರೆಗೆ ದೇಶ, ಭಾಷೆ, ಜನಾಂಗಗಳ ಎಲ್ಲೆಗಳಿಲ್ಲ ಎಂದ ಅವರು, ಪ್ರಪಂಚದ ಎಲ್ಲಾ ದೇಶದ ಜನರ ಉನ್ನತಿಗೆ ಶ್ರಮಿಸಿದ್ದಾರೆ ಎಂದರು.
ದಾರಿದೀಪ: ರಾಮರಾಜ್ಯದ ಕನಸಿಗೆ ಗಾಂಧೀಜಿಯವರ ವಿಚಾರಧಾರೆಗಳು ದಾರಿದೀಪವಾಗಲಿವೆ ಎಂದ ಅವರು, ದೇಶಾದ್ಯಂತ ಗ್ರಾಮದ್ಯೋಗಗಳಿಗೆ ಒತ್ತು ನೀಡುವುದು ಅವಶ್ಯ. ದೇಶಕ್ಕಾಗಿ ತ್ಯಾಗ ಮಾಡಿದ ಮಹಾ ನಾಯಕರ ಆದರ್ಶಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವುದರ ಮೂಲಕ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿ, ದೇಶ ಎದುರಿಸುತ್ತಿರುವ ಆರ್ಥಿಕ, ಸಾಮಾಜಿಕ, ರಾಜಕೀಯ, ಸಮಸ್ಯೆಗಳಿಗೆ ಗಾಂಧೀಜಿ ಅವರು ಘೋಷಿಸಿದ ತತ್ವಗಳೂ ಪರಿಹಾರೋಪಾಯ ನೀಡಬಲ್ಲವು. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದರೆ, ಮಗುವು ನೈತಿಕ ನೆಲೆಗಟ್ಟಿನಲ್ಲಿ ಸ್ವಂತಿಕೆ ಬೆಳೆಸಿಕೊಳ್ಳಬೇಕು ಎಂಬುದು ಗಾಂಧೀಜಿ ಅವರ ಆಶಯವಾಗಿತ್ತು ಎಂದು ಹೇಳಿದರು.
ಸ್ವಾವಲಂಬನೆ: ರೈತರ ಬದುಕು ಇಂದು ದುರ್ಬಲವಾಗಿದ್ದು, ಯುವಜನರು ತಮ್ಮ ಪೂರ್ವಿಕರ ಕಸುಬು ಬಿಟ್ಟು ನಗರಗಳಿಗೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಗಾಂಧೀಜಿ ಅವರು ಹೇಳಿದಂತೆ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಗುಡಿ ಕೈಗಾರಿಕೆಗಳಿಗೆ ಒತ್ತು ನೀಡಿದ್ದೆ ಆದಲ್ಲಿ ದೇಶದ ಬೆನ್ನೆಲುಬುಗಳಾದ ರೈತರ ಸ್ವಾವಲಂಬನೆಗೊಳಿಸಲು ಸಾಧ್ಯ ಎಂದರು.
ದೇಶ ಉನ್ನತಿ: ಸಾಮಾಜಿಕ ತುಳಿತಕ್ಕೊಳಗಾದವರನ್ನು ಮೇಲೆತ್ತಿಸುವ ಕಾರ್ಯಕ್ರಮಗಳನ್ನು ಗಾಂಧೀಜಿಯವರು ಅಂದೇ ರೂಪಿಸಿದ್ದಾರೆ. ಮೇಲು- ಕೀಳು ಭಾವನೆ ತೊಡೆದು ಹಾಕಿ ಎಲ್ಲರೂ ಸಮಾನರು, ಅಸ್ಪೃಶತೆ ಒಂದು ಶಾಪ ಎಂದು ಗಾಂಧೀಜಿ ಅವರು ಹೇಳಿದ್ದರು ಎಂದ ಅವರು, ಎಲ್ಲಾ ಧರ್ಮದವರು ಸೌಹಾರ್ದದಿಂದ ಬದುಕಲು ವಾತಾವರಣ ಕಲ್ಪಿಸಿದ್ದಲ್ಲಿ ದೇಶ ಉನ್ನತಿ ಹೊಂದುತ್ತದೆ ಎಂದು ತಿಳಿಸಿದರು.
ಎಸ್ಟಿಜೆ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಆರ್.ಎಚ್. ಕರೂರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿ ವಿಚಾರಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ರುದ್ರಪ್ಪ ಮಾತನಾಡಿದರು. ಉಪನ್ಯಾಸಕ ಬಿಜ್ಜಳಗೌಡ ಉಪಸ್ಥಿತರಿದ್ದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬಿ. ಮಂಜುನಾಥ ವಂದಿಸಿದರು. ಲೋಹಿತ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

