ಚಿಕ್ಕಮಗಳೂರು

ರೈಲು ನಿಲ್ದಾಣಕ್ಕೆ ಬಸ್ಸೇ ಇಲ್ಲ!

Published On :

ಚಿಕ್ಕಮಗಳೂರು: ಕಾಫಿಯ ನಾಡಿಗೆ  ರೈಲು ಬಂತು. ಆದರೆ, ಈ ರೈಲಿನಲ್ಲಿ ಹೋಗಿ ಬರಲು ಪ್ರಯಾಣಿಕರಿಗೆ ಸಕಾಲದಲ್ಲಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸಿಟಿ ಬಸ್‌ಗಳ ಸೌಲಭ್ಯ ಇಲ್ಲ.
ನಗರದಲ್ಲಿ ಆಟೋಗಳಿದ್ದರೂ ಸಹ ರೈಲು ಹೊರಡುವ ಮತ್ತು ಬರುವ ವೇಳೆಯಲ್ಲಿ ಅಲ್ಲಿಗೆ ಹೋಗಿ ಬರಲು ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ರೈಲು ಪ್ರಯಾಣ ದೂರವೆನಿಸಿದೆ.
ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಸುಮಾರು 2 ಕಿ.ಮೀ. ದೂರದಲ್ಲಿ ರೈಲು ನಿಲ್ದಾಣ ಇದೆ. ಈ ನಿಲ್ದಾಣ ಬೇಲೂರು ರಸ್ತೆಯಲ್ಲಿದ್ದರೂ ಸಹ ಅಲ್ಲಿಂದ ಸುಮಾರು 500 ಮೀಟರ್ ದೂರದಲ್ಲಿ ರೈಲು ನಿಲ್ದಾಣ ಇದೆ.
ಪ್ರತಿ ದಿನ ಬೆಳಿಗ್ಗೆ 6.30ಕ್ಕೆ ಚಿಕ್ಕಮಗಳೂರಿನಿಂದ ಹೊರಡುತ್ತಿರುವ ರೈಲು ಕಣಿವೆಹಳ್ಳಿ, ಸಖರಾಯಪಟ್ಟಣ, ಬಿಸಲೇಹಳ್ಳಿಯಿಂದ ಕಡೂರು ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿದೆ. ಈ ಟ್ರೈನ್ ಶಿವಮೊಗ್ಗಕ್ಕೆ ತಲುಪುವುದು ಬೆಳಗ್ಗೆ 9.30ಕ್ಕೆ, ಶಿವಮೊಗ್ಗಕ್ಕೆ ಹೋಗುವವರಿಗೆ ಇದರಿಂದ ಹೆಚ್ಚಿನ ಅನುಕೂಲವಿದೆ. ಅದೇ ದಿನ ಸಂಜೆ 6.15ಕ್ಕೆ ಶಿವಮೊಗ್ಗದಿಂದ ಹೊರಟು ಚಿಕ್ಕಮಗಳೂರಿಗೆ ಈಗ ನಿಗದಿಪಡಿಸಿರುವ ಸಮಯದ ಪ್ರಕಾರ ರಾತ್ರಿ 9.15ಕ್ಕೆ ರೈಲು ಚಿಕ್ಕಮಗಳೂರಿಗೆ ಬರಬೇಕು.
ಆದರೆ, ರಾತ್ರಿ ಚಿಕ್ಕಮಗಳೂರಿಗೆ ಬರುತ್ತಿರುವ ರೈಲಿನ ಸಮಯದಲ್ಲಿ ವಾರದಲ್ಲಿ ಕನಿಷ್ಟ ಮೂರು ದಿನಗಳಾದರೂ ವ್ಯತ್ಯಾಸವಾಗುತ್ತಿದೆ. ರಾತ್ರಿ 9.15ಕ್ಕೆ ಬರಬೇಕಾದ ರೈಲು ಕೆಲವು ಸಮಯದಲ್ಲಿ 10.30ಕ್ಕೆ ಬರುತ್ತಿದೆ. ಕಾರಣ, ಬೆಂಗಳೂರು- ಶಿವಮೊಗ್ಗ ಇಂಟರ್ ಸಿಟಿ ರೈಲಿನಲ್ಲಿ ಚಿಕ್ಕಮಗಳೂರಿಗೆ ಬರುವವರಿಗೆ ಅನುಕೂಲವಾಗ ದೃಷ್ಟಿಯಿಂದ ಚಿಕ್ಕಮಗಳೂರಿಗೆ ಬರುವ ರೈಲು ಕಡೂರು ರೈಲು ನಿಲ್ದಾಣದಲ್ಲಿ ಇಂಟರ್‌ಸಿಟಿ ರೈಲಿಗಾಗಿ ಕಾಯುತ್ತಿದೆ.
ಬೆಂಗಳೂರಿನಿಂದ ಸಂಜೆ 4 ಗಂಟೆಗೆ ಶಿವಮೊಗ್ಗಕ್ಕೆ ಹೊರಡಬೇಕಾದ ರೈಲು ಇತ್ತೀಚೆಗೆ 4.30ಕ್ಕೆ ಹೊರಡುತ್ತಿದೆ. ಅಂದರೆ, 30 ನಿಮಿಷಗಳ ಕಾಲ ತಡವಾಗಿ ಹೊರಡುತ್ತಿದೆ. ಅದು, ನಿಗದಿತ ಸಮಯಕ್ಕೆ ಹೊರಟಿದ್ದೇಯಾದರೆ ಕಡೂರಿಗೆ ರಾತ್ರಿ 8.15ಕ್ಕೆ ಬರಲಿದೆ. ಅದೇ ವೇಳೆಗೆ ಕಡೂರಿನಿಂದ ಚಿಕ್ಕಮಗಳೂರಿಗೆ ರೈಲು ಹೊರಟರೆ ನಿಗದಿತ ಸಮಯಕ್ಕೆ ಸರಿಯಾಗ ರಾತ್ರಿ 9.15ಕ್ಕೆ ಬರಲಿದೆ.
ಆದರೆ, ಇಂಟರ್ ಸಿಟಿ ರೈಲು ವಿಳಂಬದಿಂದಾಗಿ ಚಿಕ್ಕಮಗಳೂರಿಗೆ ರಾತ್ರಿ ಬರುವ ರೈಲಿನಲ್ಲಿ ಸಮಯದಲ್ಲಿ ವ್ಯತ್ಯಾಸವಾಗುತ್ತಿದೆ.
ದಾರಿ ಕಾಯುವುದು ಅನಿವಾರ್ಯ: ಬೆಂಗಳೂರಿನಿಂದ ಇಂಟರ್ ಸಿಟಿ ರೈಲಿನಲ್ಲಿ ಬಂದು, ಅಲ್ಲಿಂದ ಚಿಕ್ಕಮಗಳೂರಿಗೆ ಬರುವ ಜನರಿಗೆ ಅನುಕೂಲವಾಗ ಉದ್ದೇಶದಿಂದ ಕಡೂರು ರೈಲು ನಿಲ್ದಾಣದಲ್ಲಿ ಚಿಕ್ಕಮಗಳೂರು ರೈಲು ದಾರಿ ಕಾಯುವುದು ಸರಿ. ಆದರೆ, ಆ ಪ್ರಯಾಣಿಕರ ದಾರಿಯನ್ನು ಗಂಟೆಗಟ್ಟಲೆ ಚಿಕ್ಕಮಗಳೂರು ನಿಲ್ದಾಣದಲ್ಲಿ ಇದ್ದು ಕಾಯುವವರ ಪರಿಸ್ಥಿತಿ ಹೇಳತೀರದು.
ಬೆಂಗಳೂರಿನಿಂದ ಇಂಟರ್ ಸಿಟಿ ಟ್ರೈನ್ ಕಡೂರಿಗೆ ಯಾವಾಗ ಬರುತ್ತದೆಯೋ, ಕಡೂರಿನಿಂದ ಎಷ್ಟು ಗಂಟೆಗೆ ಟ್ರೈನ್ ಹೊರಡುತ್ತದೆಯೋ, ಅದು, ಚಿಕ್ಕಮಗಳೂರಿಗೆ ಯಾವಾಗ ಬರುತ್ತದೆಯೋ ಈ ಗೊಂದಲದಲ್ಲೇ ಪ್ರಯಾಣಿಕರ ಸಂಬಂಧಿಕರು ಸಂಜೆ ವೇಳೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ರಾತ್ರಿ 9 ಗಂಟೆಗೆ ರೈಲು ನಿಲ್ದಾಣಕ್ಕೆ ಹೋದವರು ಗಂಟೆಗಟ್ಟಲೆ ಕಾದು ಅಲ್ಲೇ ನಿದ್ದೆಗೆ ಜಾರಿಕೊಳ್ಳುತ್ತಿದ್ದಾರೆ.
ಇದೆಲ್ಲಾ ರಾತ್ರಿ ವೇಳೆಯ ಅವಾಂತರವಾದರೆ, ಇನ್ನು ಬೆಳಿಗ್ಗೆ 6.30ಕ್ಕೆ ಹೊರಡುವ ರೈಲಿಗೆ ತೆರಳಬೇಕಾದರೆ, ರೈಲು ನಿಲ್ದಾಣಕ್ಕೆ ಹೋಗಲು ಸಿಟಿ ಬಸ್‌ಗಳ ಸಂಪರ್ಕ ಇಲ್ಲ, ಇನ್ನು ಬೆಳ್ಳಂಬೆಳಿಗ್ಗೆ  ರೈಲು ನಿಲ್ದಾಣಕ್ಕೆ ಯಾವುದೇ ಆಟೋ ಬರುವುದಿಲ್ಲ. ಅದುದರಿಂದ ಮನೆಯಲ್ಲಿ ಯಾವುದಾದರೂ ವಾಹನಗಳಿದ್ದರೆ, ಅವರೇ ಅಲ್ಲಿಗೆ ನಿಲ್ದಾಣಕ್ಕೆ ಹೋಗಿ ಬಿಟ್ಟು ಬರಬೇಕು.


ಪರಿಹಾರವೇನು?
ರೈಲಿನಲ್ಲಿ ಚಿಕ್ಕಮಗಳೂರಿಗೆ ಬರುವ ಹಾಗೂ ಹೋಗುವವರಿಗೆ ನಿಲ್ದಾಣಕ್ಕೆ ಸಕಾಲದಲ್ಲಿ ಬರುವುದೇ ದೊಡ್ಡ ಸಮಸ್ಯೆಯಾಗಿದೆ.
ಇದಕ್ಕೆ ಪರಿಹಾರವೆಂದರೆ, ಸಿಟಿ ಬಸ್ ಸೌಲಭ್ಯ. ಈ ಕೆಲಸ ಜಿಲ್ಲಾಡಳಿತ ಮಾಡಬೇಕು. ಇದು, ತಕ್ಷಣಕ್ಕೆ ಆದರೆ ಮಾತ್ರ ಚಿಕ್ಕಮಗಳೂರಿನ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಇಲ್ಲದೆ ಹೋದರೆ, ಇಷ್ಟು ವರ್ಷದ ಕನಸು ನನಸಾದ ಖುಷಿಯಲ್ಲಿರುವ ಜನರಿಗೆ ರೈಲು ದೂರವಾಗಲಿದೆ.
ಚಿಕ್ಕಮಗಳೂರು- ಹಿರೇಮಗಳೂರು ಮಾರ್ಗದಲ್ಲಿ ಮಾತ್ರ ಬಸ್‌ಗಳು ಬಿಡಬಾರದು. ರೈಲು ನಿಲ್ದಾಣಕ್ಕೆ ನಗರದ ವಿವಿಧ ಬಡಾವಣೆಗಳಿಂದ ಸಿಟಿ ಬಸ್‌ಗಳ ಸಂಪರ್ಕ ಕಲ್ಪಿಸಿದರೆ, ಬಸ್ಸುಗಳಿಗೆ ನಷ್ಟವಾಗುವುದಿಲ್ಲ.
ಇದೀಗ ದಿನಕ್ಕೆ ಬೆಳಗ್ಗೆ ಸುಮಾರು 300 ರಿಂದ 400 ಹಾಗೂ ರಜೆ ದಿನಗಳಲ್ಲಿ 600 ರಿಂದ 700 ಪ್ರಯಾಣಿಕರು ಚಿಕ್ಕಮಗಳೂರಿನಿಂದ ಪ್ರಯಾಣಿಸುತ್ತಿದ್ದಾರೆ.
    ಈ ಎಲ್ಲಾ ಪ್ರಯಾಣಿಕರಿಗೆ ರೈಲು ನಿಲ್ದಾಣಕ್ಕೆ ಬಸ್ ಸೌಲಭ್ಯ ಇದೆ ಎಂಬುದು ಗಮನಕ್ಕೆ ಬಂದರೆ ಖಂಡಿತವಾಗಿಯೂ ಬಸ್‌ಗಳಿಗೆ ನಷ್ಟವಾಗುವುದಿಲ್ಲ. ಆ ನಿಟ್ಟಿನಲ್ಲಿ ಯೋಚಿಸಿ ಚಿಕ್ಕಮಗಳೂರು ರೈಲು ನಿಲ್ದಾಣಕ್ಕೆ ಬಸ್ ಬಿಡುವ ಕೆಲಸ ಆಗಬೇಕು.
--
-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.