ಚಿಕ್ಕಮಗಳೂರು

ಶಾಸಕರ 'ಹಸ್ತ'ಕ್ಷೇಪ; ಸದಸ್ಯರ ಆಕ್ಷೇಪ

Published On :

ಕ.ಪ್ರ.ವಾರ್ತೆ , ಚಿಕ್ಕಮಗಳೂರು ,  ಡಿ.7
ಜಿಲ್ಲಾ ಪಂಚಾಯಿತಿ ಅಧಿಕಾರದಲ್ಲಿ ಶಾಸಕರ ಹಸ್ತಾಕ್ಷೇಪ..,
- ಇದು ಎಲ್ಲಾ ಜನಪ್ರತಿನಿಧಿಗಳಿಗೂ ಗೊತ್ತಿರುವ ಸಂಗತಿ.
ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಮೇಲೆ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಯಿತು. ಈ ಬಾರಿ ಈ ವಿಷಯದ ಕೇಂದ್ರಬಿಂದು ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್.
ಶಾಸಕ ಶ್ರೀನಿವಾಸ್ ಅವರ ಅನುಪಸ್ಥಿತಿಯಲ್ಲಿಯೇ ಈ ವಿಷಯವನ್ನು ಸಭೆಯ ಆರಂಭದಲ್ಲಿ ಜಿಪಂ ಸದಸ್ಯ ಆನಂದ್ ಅವರು ಪ್ರಸ್ತಾಪಿಸಿ, ತರೀಕೆರೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇದರ ಪರಿಹಾರಕ್ಕೆ ಜಿಪಂನಲ್ಲಿ ತೆಗೆದುಕೊಂಡ ತೀರ್ಮಾನ ಕಾರ್ಯರೂಪಕ್ಕೆ ಬರುತ್ತಿಲ್ಲ. ಕುಡಿಯುವ ನೀರಿನ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿಯಿಂದ ತೆಗೆದುಕೊಳ್ಳಬೇಕೋ, ಶಾಸಕರು ಸೂಚಿಸಿದ ಕಾಮಗಾರಿ ತೆಗೆದುಕೊಳ್ಳಬೇಕೋ ಎನ್ನುವ ಗೊಂದಲ ಅಧಿಕಾರಿಗಳಿಗೆ ಕಾಡುತ್ತಿದೆ. ಇದರ ಬಗ್ಗೆ ಸ್ಪಷ್ಟವಾದ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಆನಂದಪ್ಪ ಧ್ವನಿಗೂಡಿಸಿದರು.
ಜಿಪಂನಲ್ಲಿ ಈವರೆಗೆ ಹಲವು ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಕಳುಹಿಸಲಾಗಿದೆ. ಅವುಗಳಲ್ಲಿ ಎಷ್ಟು ನಿರ್ಣಯ ಕಾರ್ಯರೂಪಕ್ಕೆ ಬಂದಿವೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಸವಿತಾ ರಮೇಶ್ ಒತ್ತಾಯಿಸಿದರು. ಜಿಲ್ಲಾ ಪಂಚಾಯಿತಿಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಅದಕ್ಕೆ ಸರ್ಕಾರದಿಂದ 15 ದಿನಗಳೊಳಗೆ ಉತ್ತರ ಬರಬೇಕು. ಉತ್ತರ ಬರದೆ ಹೋದರೆ, ಸರ್ಕಾರ ಆ ನಿರ್ಣಯ ಒಪ್ಪಿಕೊಂಡಿದೆ ಎಂದರ್ಥ ಎಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದರು.
ಮಾರ್ಗಸೂಚಿ: ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 27-8-2003ರಲ್ಲಿ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ಜಿಪಂಗೆ ವಹಿಸಲಾಗಿದೆ. ಕುಡಿಯುವ ನೀರಿಗಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಪ್ರತಿಯೊಂದು ಕ್ಷೇತ್ರಕ್ಕೆ ಟಾಸ್ಕ್‌ಪೋರ್ಸ್ ರಚನೆ ಮಾಡಲಾಗಿದೆ. ಅದಕ್ಕೆ ಸರ್ಕಾರ ಅನುದಾನ ನೀಡುತ್ತಿದೆ. ಶಾಸಕರು ಆ ಹಣ ಬಳಕೆ ಮಾಡಬೇಕು. ಅವರು ಜಿಪಂ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ರೇಖಾ ಹುಲಿಯಪ್ಪಗೌಡ ಹೇಳಿದರು.
ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಪಂನ ಪಂಚಾಯತ್‌ರಾಜ್ ಎಂಜಿನಿಯರಿಂಗ್‌ನ ಕಾರ್ಯಪಾಲಕ ಅಭಿಯಂತರರು ಉತ್ತರ ನೀಡಿ, 5 ಲಕ್ಷದವರೆಗಿನ ಕಾಮಗಾರಿಯನ್ನು ತುಂಡು ಗುತ್ತಿಗೆ ನೀಡಲು ಅವಕಾಶ ಇದೆ. 5 ಲಕ್ಷ ಮೇಲ್ಪಟ್ಟ ಕಾಮಗಾರಿಯನ್ನು ಟೆಂಡರ್ ಕರೆಯಬೇಕು ಎಂದು ತಿಳಿಸಿದರು.
ಹಸ್ತಕ್ಷೇಪ: ಇದೇ ವೇಳೆಗೆ ತರೀಕೆರೆ ಶಾಸಕ ಶ್ರೀನಿವಾಸ್ ಅವರು ಸಭೆಗೆ ಹಾಜರಾಗುತ್ತಿದ್ದಂತೆ ಶಾಸಕರ ಬಗ್ಗೆ ಗೌರವವಿದೆ. ಜಿಪಂ ಅನುದಾನ ಬಳಕೆ ಬಗ್ಗೆ ಯಾವ ಮಾನದಂಡ ಅನುಸರಿಸಲಾಗುತ್ತಿದೆ. ರಾಜ್ಯದ ಯಾವ ಜಿಲ್ಲೆಯಲ್ಲೂ ಶಾಸಕರ ಹಸ್ತಕ್ಷೇಪ ಇಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಕೆ ಶಾಸಕರು ಹಸ್ತಕ್ಷೇಪ ಮಾಡುತ್ತಾರೆ ಎಂದು ಆನಂದ್ ಹೇಳುತ್ತಿದ್ದಂತೆ, ಜಿಲ್ಲೆಯಲ್ಲಿ ಅಲ್ಲ, ತರೀಕೆರೆ ಕ್ಷೇತ್ರದಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರೇಖಾ ಹುಲಿಯಪ್ಪಗೌಡ ಹೇಳಿದರು.
ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ತೊಂದರೆಯಾದರೆ ಟಾಸ್ಕ್‌ಪೋರ್ಸ್ ಇದೆ, ಅಲ್ಲಿ ನಿಮ್ಮ ಹಕ್ಕು ಚಲಾಯಿಸಿ, ಜಿಪಂನಲ್ಲಿ ಹಸ್ತಕ್ಷೇಪ ಮಾಡಬಾರದು. ನಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಕೈ ಹಾಕಬೇಡಿ, ಹಾಕಿದರೂ ನಮ್ಮ ಹಕ್ಕು ತೆಗೆದುಕೊಳ್ಳುವುದು ನಮಗೂ ಗೊತ್ತಿದೆ. ತಾವು ನಮ್ಮೊಂದಿಗೆ ಸಹಕರಿಸಬೇಕು ಎಂದು ರೇಖಾ ಹುಲಿಯಪ್ಪಗೌಡ ಮನವಿ ಮಾಡಿದರು.
ಅಗೌರವ: ಜಿಪಂ ಅಧಿಕಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಜಿಪಂನ ಕೆಲವು ಸದಸ್ಯರು ಅಗೌರವ ಮಾಡಿದ್ದಾರೆ. ಜಿಪಂನ ಕೆಲವು ಸದಸ್ಯರು ಗುತ್ತಿಗೆ ಕೆಲಸ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆ ನಡೆದಿರುವ ಕಾಮಗಾರಿಯಲ್ಲಿ ಹಲವು ಕಾಮಗಾರಿಗಳು ಕಳಪೆಯಾಗಿವೆ ಎಂದು ಶಾಸಕ ಶ್ರೀನಿವಾಸ್ ಹೇಳುತ್ತಿದ್ದಂತೆ ಜಿಪಂ ಸದಸ್ಯ ಕುಮಾರ್ ಅವರು ಶಾಸಕರ ಪರವಾಗಿ ಧ್ವನಿಗೂಡಿಸಿ, ಜಿಪಂ ಅಧಿಕಾರದಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಕಳೆದ ಹಲವು ಸಭೆಯಲ್ಲಿ ಗಮನಕ್ಕೆ ತರಲಾಗಿತ್ತು.
ಆಗ ಯಾವುದೇ ಸದಸ್ಯರು ಇದರ ಬಗ್ಗೆ ಚಕಾರ ಎತ್ತಲಿಲ್ಲ ಎನ್ನುತ್ತಿದ್ದಂತೆ ಸವಿತಾ ರಮೇಶ್ ಹಾಗೂ ಅನಂತು ಅವರ ಪರವಾಗಿ ಮಾತನಾಡುತ್ತಿದ್ದಂತೆ, ನಾವು ಮಾತನಾಡುತ್ತಿರುವುದು ವೈಯಕ್ತಿಕವಾಗಿ ಅಲ್ಲ. ಎಲ್ಲಾ ಸದಸ್ಯರ ಪರವಾಗಿ ಮಾತನಾಡುತ್ತಿದ್ದೇವೆ ಎಂದು ಆನಂದಪ್ಪ ಹೇಳಿದಾಗ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.
ಜಿಪಂ ಅಧಿಕಾರದಲ್ಲಿ ಶಾಸಕರ ಹಸ್ತಕ್ಷೇಪ, ಇದು, ಇಂದಿನ ಸಮಸ್ಯೆ ಅಲ್ಲ. ಹಲವು ಬಾರಿ ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿದಾಗ ಯಾರೂ ಮಾತನಾಡಲಿಲ್ಲ. ಅಂದು ನಾವೆಲ್ಲರೂ ಎಚ್ಚರಗೊಂಡಿದ್ದರೆ, ಇಂದಿಗೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಸವಿತಾ ರಮೇಶ್ ಹೇಳಿದರು.
ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಈ ಹಿಂದಿದ್ದ ಮಾನದಂಡವನ್ನೇ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಶಾಸಕ ಶ್ರೀನಿವಾಸ್ ಹೇಳುತ್ತಿದ್ದಂತೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಶಾಸಕರಿಗೆ ಮಾತನಾಡಲು ಅವಕಾಶ ಕೊಡಿ, ಇಲ್ಲವಾದರೆ ನಮ್ಮನ್ನು ಹೊರಗೆ ಕಳುಹಿಸಿ ಎಂದು ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಗುಡುಗಿದರು. ಸಭೆಯಲ್ಲಿ ನೀವೇ ಮಾತನಾಡುವುದಾದರೆ ನಾವು ಹೊರಗೆ ಹೋಗುತ್ತೇವೆ ಎಂದು ಜಿಪಂ ಸದಸ್ಯ ನಿರಂಜನ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.