ಮಕ್ಕಳ ಸೀಳುತುಟಿ, ಹೃದ್ರೋಗ ತಪಾಸಣೆ
ನರಸಿಂಹರಾಜಪುರ: ಇಲ್ಲಿನ ರೋಟರಿ ಕ್ಲಬ್, ಇನ್ನರ್ವ್ಹೀಲ್ ಕ್ಲಬ್ ಹಾಗೂ ಮಂಗಳೂರಿನ ಎ.ಜೆ. ಆಸ್ಪತ್ರೆ ಆಶ್ರಯದಲ್ಲಿ ಪುಷ್ಪಾ ಆಸ್ಪತ್ರೆ ಆವರಣದಲ್ಲಿ ಸೀಳುತುಟಿ ಹಾಗೂ ಮಕ್ಕಳ ಹೃದ್ರೋಗ ಉಚಿತ ತಪಾಸಣಾ ಶಿಬಿರ ಭಾನುವಾರ ನಡೆಯಿತು. ಸೀಳುತುಟಿ ಹೊಂದಿದ 8 ಮಕ್ಕಳನ್ನು ಹಾಗೂ ಹೃದಯರೋಗಕ್ಕೆ ಸಂಬಂಧಪಟ್ಟಂತೆ 29 ಮಕ್ಕಳನ್ನು ಪರೀಕ್ಷಿಸಲಾಯಿತು. ಇವರಲ್ಲಿ 3 ಮಕ್ಕಳ ಸೀಳುತುಟಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಬರುವಂತೆ ಸೂಚಿಸಲಾಯಿತು. ಮಂಗಳೂರಿನ ಎ.ಜೆ. ಆಸ್ಪತ್ರೆಯ ಮಕ್ಕಳ ಹೃದಯ ರೋಗತಜ್ಞೆ ಡಾ.ಪ್ರೇಮಾ ಆಳ್ವ, ಸೀಳುತುಟಿ ಮತ್ತು ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಯ ತಜ್ಞ ವೈದ್ಯ ಡಾ.ಸನ್ರಾಜ್ ಮಕ್ಕಳನ್ನು ಪರೀಕ್ಷಿಸಿ ಸೂಕ್ತ ಸಲಹೆಗಳನ್ನು ನೀಡಿದರು.ಈ ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷ ಗುಳದಮನೆ ಸುಂದರೇಶ್, ಕಾರ್ಯದರ್ಶಿ ವಕೀಲ ದಿವಾಕರ, ಸದಸ್ಯರಾದ ಎಸ್.ಎಸ್. ಶಾಂತಕುಮಾರ್, ಎನ್.ಎಂ. ಮರುಳಪ್ಪ, ಡಿ.ಸಿ. ದಿವಾಕರ, ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಶೀಲಾ ಸುಂದರೇಶ್, ಸದಸ್ಯೆ ಪುಷ್ಪಾ ಶಾಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಮೋಹನ್ ಕನ್ನಡ ಸೇನೆ ಅಧ್ಯಕ್ಷ
ಚಿಕ್ಕಮಗಳೂರು: ಕನ್ನಡ ಸೇನೆಯ ಕಡೂರು ತಾಲೂಕು ಅಧ್ಯಕ್ಷರಾಗಿ ಬೀರೂರು ಮೋಹನ್ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ತಿಳಿಸಿದ್ದಾರೆ. ನಗರದ ಜಿಲ್ಲಾ ಕನ್ನಡ ಸೇನೆ ಕಚೇರಿಯಲ್ಲಿ ನಡೆದ ಕಡೂರು ಮತ್ತು ಬೀರೂರು ಪಟ್ಟಣದ ಪದಾಧಿಕಾರಿಗಳ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಬೀರೂರು ಪಟ್ಟಣಕ್ಕೆ ಮುಬಾರಕ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಪಿ.ಸಿ. ರಾಜೇಗೌಡ ಮಾತನಾಡಿ, ಜಿಲ್ಲಾದ್ಯಂತ ಕನ್ನಡಸೇನೆ ಸಂಘಟನೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಒತ್ತುಕೊಟ್ಟು ಕಾರ್ಯನಿರ್ವಹಿಸುತ್ತಿದೆ. ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಧಕ್ಕೆಯುಂಟಾದಾಗ ಹೋರಾಟ ಮಾಡುವ ಮೂಲಕ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು. ತಾಲೂಕು ಕೇಂದ್ರಗಳಲ್ಲಿ ಕನ್ನಡಸೇನೆ ಬಲಗೊಳಿಸುವ ನಿಟ್ಟಿನಲ್ಲಿ ಸಂಘಟನೆ ರೂಪಿಸುತ್ತಿದ್ದು, ಸಾಮಾನ್ಯ ಜನರಿಗೆ ತೊಂದರೆಯಾದಾಗ ಸಂಘದ ಕಾರ್ಯಕರ್ತರು ಸ್ಪಂದಿಸುವಂತೆ ತಿಳಿಸಿದರು. ಸಂಘಟನೆ ನಗರಾಧ್ಯಕ್ಷ ಬಿ.ಎಲ್. ಪ್ರವೀಣ್, ಉಪಾಧ್ಯಕ್ಷ ದೇವರಾಜ್, ಸಂಘಟನಾ ಕಾರ್ಯದರ್ಶಿ ನೀಲೇಶ್, ಉಪಾಧ್ಯಕ್ಷ ರಾಜು, ಮಧು, ಗಿರೀಶ್, ಪ್ರದೀಪ್, ಶ್ರೀನಿವಾಸ್ ಉಪಸ್ಥಿತರಿದ್ದರು.
ಕಾರ್ತೀಕೋತ್ಸವ
ತರೀಕೆರೆ: ಸಮೀಪದ ಭಕ್ತನಕಟ್ಟೆ ಹುಚ್ಚನಕಟ್ಟೆ ಮತ್ತು ದಾಸರಹಟ್ಟಿಯಲ್ಲಿ ಡಿ. 16ರಂದು ಮಹಾಮಹಿಮ ಜುಂಜಪ್ಪದೇವರ ಕಾರ್ತೀಕ ಮಹೋತ್ಸವ ಏರ್ಪಡಿಸಲಾಗಿದೆ.
ರಾಜ್ಯದಲ್ಲೂ ಪ.ಪಂಗಡಕ್ಕೆ ಶೇ.7.5 ಮೀಸಲಿಗೆ ಆಗ್ರಹ
ಕ.ಪ್ರ. ವಾರ್ತೆ, ತರೀಕೆರೆ, ಡಿ.15
ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ ಸರ್ಕಾರವು ಶೇ.7.5ರಷ್ಟು ಮೀಸಲು ಪರಿಶಿಷ್ಟ ಪಂಗಡಕ್ಕೆ ನೀಡಬೇಕೆಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ಎಚ್.ರಾಮಪ್ಪ ನೇತೃತ್ವದ ನಿಯೋಗವು ದೆಹಲಿಗೆ ತೆರಳಿ ಕೇಂದ್ರದ ಮಾಜಿ ಗೃಹ ಸಚಿವರು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಬೂಟಾಸಿಂಗ್ ಅವರನ್ನು ಭೇಟಿ ಮಾಡಿ ವಿನಂತಿಸಿದೆ.
ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ.1.24 ಲಕ್ಷದಷ್ಟಿದೆ. ಜನಸಂಖ್ಯೆಗೆ ಅನುಸಾರವಾಗಿ ಮೀಸಲು ಕೊಡಲಾಗಿಲ್ಲ. ರಾಜ್ಯ ಸರ್ಕಾರ ಶೇ.3ರಷ್ಟು ಮೀಸಲಾತಿ ಕೊಡಲಾಗುತ್ತಿದೆ. ನಾವು ಹೊಂದಿರುವ ಜನಸಂಖ್ಯೆಗೆ ಈ ಶೇಕಡವಾರು 3 ಮೀಸಲಾತಿಯಲ್ಲಿ ಅವಕಾಶ ವಂಚಿತರಾಗುತ್ತಿದ್ದೇವೆ. ಆದ್ದರಿಂದ ಕೇಂದ್ರ ಸರ್ಕಾರ ಕೊಟ್ಟಿರುವ ಶೇ.7.5 ಮೀಸಲಾತಿಯನ್ನು ರಾಜ್ಯ ಸರ್ಕಾರ ಕೊಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕೆಂದು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

