ಅನ್ಯಧರ್ಮಿಯರಿಗೆ ಬಿಟ್ಟು ಕೊಡುವುದಿಲ್ಲ
ಚಿಕ್ಕಮಗಳೂರು: ದತ್ತಪೀಠ, ಹಿಂದೂಗಳ ಶ್ರದ್ಧಾ ಕೇಂದ್ರ. ಇದನ್ನು ಯಾವುದೇ ಕಾರಣಕ್ಕೂ ಬೇರೆ ಧರ್ಮಿಯರಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ದತ್ತಪೀಠದ ಹೊರ ವಲಯದಲ್ಲಿ ದತ್ತ ಜಯಂತಿಯ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ದತ್ತಪೀಠ ಭಕ್ತಿ ಮತ್ತು ಶಕ್ತಿಯ ಕೇಂದ್ರ. ಈ ಪೀಠ ಹಿಂದೂಗಳ ಪೀಠವಾಗಬೇಕೆಂದು ನ್ಯಾಯ ಸಮ್ಮತವಾದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಅವಕಾಶ ನೀಡಿ: ಪ್ರತಿಯೊಂದು ವಿಷಯಕ್ಕೂ ತಾಳ್ಮೆ ಇರುತ್ತದೆ. ಸರ್ಕಾರದ ಎಲ್ಲಾ ದಾಖಲೆಗಳಲ್ಲಿ ಇದು, ದತ್ತಪೀಠ ಎಂದು ಹೇಳಲಾಗಿದೆ. ಕೆಳ ಹಂತದ ನ್ಯಾಯಾಲಯಗಳಿಂದಲೂ ನಮ್ಮ ಪರವಾದ ತೀರ್ಪು ಬಂದಿವೆ. ಆದರೂ ಕೆಲವು ಕೋಮು ಸಂಘಟನೆಗಳು ಈ ವಿವಾದ ಎಳೆದುಕೊಂಡು ಬರುತ್ತಿವೆ ಎಂದ ಅವರು, ದತ್ತಪೀಠದಲ್ಲಿ ಹಿಂದೂ ಧರ್ಮದ ಪ್ರಕಾರ ಪೂಜೆ ನಡೆಸಲು ಸರ್ಕಾರ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ನಾಗೇನಹಳ್ಳಿಯಲ್ಲಿ ದರ್ಗಾ ಇದ್ದು, ಅಲ್ಲಿ ಮುಸ್ಲಿಮರು ಉರುಸ್ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮ ನಡೆಸಬೇಕು. ದತ್ತಪೀಠದ ಆವರಣದಲ್ಲಿರುವ ಗೋರಿ ತೆರವುಗೊಳಿಸಬೇಕು. ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಹೋರಾಟಕ್ಕೆ ಸಜ್ಜಾಗಿ: ರಾಜಕೀಯ ಮುಖಂಡರು ಎಲ್ಲಾ ಪಂಗಡಗಳನ್ನು ಒಟ್ಟು ಮಾಡುವ ಕೆಲಸ ಮಾಡಬೇಕು. ಆದರೆ, ಕೆಲವು ರಾಜಕೀಯ ಮುಖಂಡರಿಗೆ ಇದು ಇಷ್ಟವಿಲ್ಲ. ಇದನ್ನು ಯುವಶಕ್ತಿ ಅರ್ಥ ಮಾಡಿಕೊಳ್ಳಬೇಕು. ಅನ್ಯಾಯದ ವಿರುದ್ಧ ಹೋರಾಟ ಮಾಡಲು ಸಜ್ಜಾಗಬೇಕು. ಹಿಂದೂ ಸಮುದಾಯ ಒಂದಾಗಬೇಕು. ನಾವೆಲ್ಲಾ ಹಿಂದು, ನಾವೆಲ್ಲಾ ಒಂದು ಎನ್ನುವ ರೀತಿಯಲ್ಲಿರಬೇಕು ಎಂದು ಕರೆ ನೀಡಿದರು.
ದತ್ತಪೀಠದ ವಿಷಯದಲ್ಲಿ ನಡೆಯುತ್ತಿರುವ ಕಾನೂನು ಹೋರಾಟ ಮುಂದುವರಿಸಲಾಗುವುದು. ದತ್ತಜಯಂತಿ ಉತ್ಸವ ವೈಭವಯುತವಾಗಿ ನಡೆಸುವ ಕಾಲ ದೂರವಿಲ್ಲ. ಸರ್ಕಾರ ನಮ್ಮ ಪರವಾಗಿ ನಿಲ್ಲದೆ ಹೋದರೆ, ಮುಂದೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ್ ಮಾತನಾಡಿ, ದತ್ತಪೀಠ ಹಿಂದೂಗಳ ಶ್ರದ್ಧಾ ಮತ್ತು ಭಕ್ತಿಯ ಕೇಂದ್ರ. ಇಲ್ಲಿ ಅತ್ರಿ ಮುನಿಗಳು ಜಪ ಮಾಡಿರುವ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿ ಪೂಜೆ ನಡೆಸಿ ಹರಕೆ ಸಲ್ಲಿಸಿದರೆ, ನಮ್ಮ ಕಷ್ಟ ದೂರವಾಗಲಿವೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಮಟ್ಟಕ್ಕೆ ವಿಸ್ತಾರಗೊಂಡಿದೆ. ಹೋರಾಟದ ನೇತೃತ್ವ ವಹಿಸಿರುವ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆ ರಾಜ್ಯವ್ಯಾಪಿ ಬೆಳೆಯುತ್ತಿದೆ ಎಂದು ಹೇಳಿದರು.
ಧಾರ್ಮಿಕ ಸಭೆಯಲ್ಲಿ ಜಯಬಸವಾನಂದ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಮಾಧವನಂದ ಸ್ವಾಮೀಜಿ, ಚಿತ್ರದುರ್ಗದ ಮಾದರ ಚೆನ್ನಯ್ಯ ಸ್ವಾಮೀಜಿ, ಆತ್ಮಾನಂದ ಸರಸ್ವತಿ ಸ್ವಾಮೀಜಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

