ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹರಿಸಿ
ಚಿಕ್ಕಮಗಳೂರು: ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಹಾಗೂ ಹೋರಾಟಗಳನ್ನು ರೂಪಿಸಲು ಸಿಪಿಐ ನಿರ್ಧರಿಸಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ತಿಳಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಮುಖಂಡ ಕೆ. ಗುಣಶೇಖರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿರುವ ಜಿಲ್ಲೆಯ ನಿವೇಶನ ರಹಿತ ಸಮಸ್ಯೆಯನ್ನು ಬಗೆಹರಿಸುವಲ್ಲಿ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರವಾಗಲೀ, ಈಗಿನ ಕಾಂಗ್ರೆಸ್ ಸರ್ಕಾರವಾಗಲೀ ಆಸಕ್ತಿ ತೋರಿಲ್ಲ. ಈ ಎರಡು ಪಕ್ಷಗಳು ಭೂ ಮಾಲೀಕರ ಪರವಾಗಿ ಕೆಲಸ ಮಾಡುತ್ತಿವೆ ಎಂಬುದು ಸಾಭೀತಾಗಿದೆ.
ಭೂಮಿ ಹಂಚಿಕೆ ಮಾಡಿಲ್ಲ ಏಕೆ?: ಸರ್ಕಾರದ ಒಡೆತನದಲ್ಲಿ ಹಾಗೂ ಖಾಸಗಿ ಭೂ ಮಾಲೀಕರ ಕೈಯಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿ ಇದ್ದರೂ ಸಹ ಸರ್ಕಾರ ಈ ಭೂಮಿಯನ್ನು ವಶಕ್ಕೆ ತೆಗೆದುಕೊಂಡು ಮನೆ ನಿರ್ಮಿಸಲು ಜಾಗವಿಲ್ಲದೆ ಹತ್ತಾರು ವರ್ಷಗಳಿಂದ ಕೂಲಿ ಲೈನುಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವವರ ಸಾವಿರಗಟ್ಟಲೆ ವಸತಿ ರಹಿತರ ಪಟ್ಟಿ ಸರ್ಕಾರಿ ಕಚೇರಿಯಲ್ಲಿಯೇ ಇದ್ದರೂ ಸಹ ಇವರಿಗೆ ಭೂಮಿ ಹಂಚುವ ಕೆಲಸ ಮಾಡದೇ ಇರುವುದೇಕೆ ಎಂಬುದನ್ನು ಜನಪ್ರತಿನಿಧಿಗಳು ಉತ್ತರಿಸಬೇಕು.
ಈ ಸಮಸ್ಯೆ ಬಗೆಹರಿಯುವವರೆಗೂ ಸಿಪಿಐ ನಿರಂತರ ಹೋರಾಟ ರೂಪಿಸಲು ನಿರ್ಧರಿಸಿದ್ದು, ಈ ಬಗ್ಗೆ ಜಿಲ್ಲೆಯ ಹಲವು ಭಾಗಗಳಿಂದ ಕಾಲ್ನಡಿಗೆ ಜಾಥಾ ನಡೆಸಿ ಜನಾಂದೋಲನ ರೂಪಿಸಲು ತೀರ್ಮಾನಿಸಲಾಗಿದೆ. ಫೆ.24 ರಿಂದ 28ರವರೆಗೆ ಜಾಥಾ ನಡೆಸಿ ಫೆ.28 ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಹೇಳಿದ್ದಾರೆ.
ನೋಟಿಸ್ ಹಿಂಪಡೆಯಲಿ: ಬಡ ಒತ್ತುವರಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ, 10 ಎಕರೆ ಮೇಲ್ಪಟ್ಟ ಒತ್ತುವರಿದಾರರನ್ನು ಮಾತ್ರ ಖುಲ್ಲಾ ಮಾಡಲಾಗುತ್ತಿದೆ ಎಂದು ರಾಜ್ಯದ ಅರಣ್ಯ, ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಯವರು ಹೇಳಿದ್ದರು.
ಆದರೆ, 1-2 ಎಕರೆ ಇರುವ ಬಡ ಒತ್ತುವರಿದಾರರಿಗೂ ನೋಟೀಸ್ ಜಾರಿ ಮಾಡುತ್ತಿರುವುದು ಸರ್ಕಾರದ ಬಣ್ಣ ಬದಲಿಸುವ ನೀತಿ ಬಹಿರಂಗಗೊಂಡಿದೆ.
ಈ ಬಗ್ಗೆ ಸರ್ಕಾರ ತಕ್ಷಣ ದ್ವಿಮುಖ ನೀತಿ ಕೈಬಿಟ್ಟು ಸಣ್ಣ ಒತ್ತುವರಿದಾರರಿಗೆ ನೀಡಿರುವ ನೋಟಿಸ್ ಹಿಂಪಡೆದು, ಅವರ ಜಮೀನು ಸಕ್ರಮಗೊಳಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಕ್ರಮಕ್ಕೆ ಖಂಡನೆ: ಜಿಲ್ಲೆಯ ಮಲೆನಾಡನ್ನು ಪಶ್ಚಿಮಘಟ್ಟ ವ್ಯಾಪ್ತಿಗೆ ತರುವಲ್ಲಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಹೊರಟಿರುವ ಸರ್ಕಾರದ ಕ್ರಮವನ್ನು ಪಕ್ಷ ಖಂಡಿಸುತ್ತದೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲೇ ಮಂತ್ರಿಗಳಾಗಿದ್ದ ಶಾಸಕರೊಬ್ಬರು ಸಿಪಿಐ, ಹುಲಿ ಯೋಜನೆ, ಭಪರ್ ಜೋನ್ ವಿಚಾರದಲ್ಲಿ ಹೋರಾಟ ಮಾಡಿದಾಗ ವಿರೋಧಿಸಿದವರು ಈಗ ಎಚ್ಚೆತ್ತು ಹೋರಾಟ ಅನಿವಾರ್ಯ ಎನ್ನುತ್ತಿರುವುದು ಅವಕಾಶವಾದಿ ರಾಜಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ನಾಟಕವಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಒತ್ತುವರಿ ಸಮಸ್ಯೆ ಹಾಗೂ ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಒತ್ತಾಯಿಸಲು ಜನವರಿ ತಿಂಗಳಲ್ಲಿ ಜಿಲ್ಲೆಯ ರೈತರ ಸಮಾವೇಶ ನಡೆಸಿ ಹೋರಾಟ ರೂಪಿಸುವುದರೊಂದಿಗೆ ಈ ಬಗ್ಗೆ ನ್ಯಾಯಲಯಗಳಿಗೆ ವಸ್ತುಸ್ಥಿತಿಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಸಿಪಿಐ ಮಾಡಬೇಕೆಂದು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

