ಚಿಕ್ಕಮಗಳೂರು

ರಾಷ್ಟ್ರ ಮಟ್ಟಕ್ಕೆ ಸಾದ್ವಿನಿ ಆಯ್ಕೆ

Published On :

ಕೊಪ್ಪ: ಕೊಪ್ಪ ಶ್ರೀ ನಾದಬ್ರಹ್ಮ ಸಂಗೀತ ಮತ್ತು ನೃತ್ಯ ಶಾಲೆಯ ಕು. ಸಾದ್ವಿನಿ ಅವರು ರಾಜ್ಯಮಟ್ಟದ ಯುವ ಜನೋತ್ಸವದ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹೊಸಬಾಳೆ ಮನೆಗೆ ಮುಖಂಡರ ಭೇಟಿ
ಸೊರಬ: ಆರ್‌ಎಸ್‌ಎಸ್ ಸಹ ಸರ ಕಾರ್ಯವಾಹ ಹೊಸಬಾಳೆ ದತ್ತಾತ್ರೇಯ ಅವರ ಸೊರಬ ಮನೆಗೆ ಮಂಗಳವಾರ ಆರ್‌ಎಸ್‌ಎಸ್ ಸರ ಕಾರ್ಯವಾಹ ಭಯ್ಯಾಜಿ ಜೋಷಿ, ಪ್ರಮುಖರಾದ ನ. ಕೃಷ್ಣಪ್ಪ, ಸಂಸ್ಕೃತ ಭಾರತಿ ರಾಷ್ಟ್ರೀಯ ಮಹಾಮಂತ್ರದ ದಿನೇಶ್ ಕಾಮತ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ಮುಕುಂದ, ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ ಶಂಕರಾನಂದ, ಪ್ರಚಾರಕ ದ.ಮ. ರವೀಂದ್ರ, ಪ್ರಾಂತ ಬೌದ್ಧಿಕ್ ಪ್ರಮುಖ ಪಟ್ಟಾಭಿರಾಮ ಆಗಮಿಸಿ, ಕುಟುಂ ಬಕ್ಕೆ ಸಾಂತ್ವನ ಹೇಳಿದರು. ಬಿಜೆಪಿಯ ಶಾಸಕ ಅರವಿಂದ ಲಿಂಬಾವಳಿ ಹಾಗೂ ಸಭಾಪತಿ ಡಿ.ಎಚ್. ಶಂಕರಮೂರ್ತಿ ಆಗಮಿಸಿ, ಹೊಸಬಾಳೆ ದತ್ತಾತ್ರೇಯ ಅವರ ತಾಯಿ ಮೀನಾಕ್ಷಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಶೈಕ್ಷಣಿಕ ಪ್ರಗತಿಗೆ ಕಲಿಕೋತ್ಸವ ಪೂರಕ
ಭದ್ರಾವತಿ: ಮಕ್ಕಳ ಕಲಿಕಾ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ಕಲಿಕೋತ್ಸವ ಕಾರ್ಯಕ್ರಮ ಅತ್ಯಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಹೇಳಿದರು.
ನಗರದ ಹೊಸಮನೆ ಕ್ಲಸ್ಟರ್ ವಿಭಾಗದ 10 ಪ್ರಾಥಮಿಕ ಶಾಲೆಗಳು ಹೊಸಮನೆಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಕಲಿಕೋತ್ಸವದಲ್ಲಿ ಅವರು, ಸರ್ಕಾರಿ ಶಾಲೆಗಳ ಮಕ್ಕಳು ಪಠ್ಯ ಪುಸ್ತಕದ ವಿಷಯಗಳನ್ನು ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಳ್ಳಲು ಈ ರೀತಿ ಕಾರ್ಯಕ್ರಮಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಶಿಕ್ಷಕರು ಮಕ್ಕಳಿಗೆ ಹುರಿದುಂಬಿಸಬೇಕು ಎಂದರು. ಸರ್ಕಾರದ ಈ ಯೋಜನೆ ಅರ್ಥಪೂರ್ಣವಾಗಿದ್ದು, ಅದು ನಿರೀಕ್ಷಿತ ಗುರಿ ಸಾಧಿಸಲು ಶಿಕ್ಷಕರು ಹೆಚ್ಚು ಶ್ರಮ ವಹಿಸಬೇಕು ಎಂದು ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಸೋಮಶೇಖರಪ್ಪ, ಸಿರಿಯೂರು ಶಾಲೆ ಶಿಕ್ಷಕ ಸತ್ಯನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ಹೊಸಮನೆ ಗಣಪತಿ ದೇವಸ್ಥಾನದ ಸಮೀಪದಿಂದ ಕಾರ್ಯಕ್ರಮದ ಸ್ಥಳದವರೆಗೆ ಮಕ್ಕಳು ಜಾಥಾ ನಡೆಸಿದರು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚನ್ನಕೇಶವ ವಹಿಸಿದ್ದರು. ನಗರಸಭಾ ಸದಸ್ಯೆ ಶಾಂಭವಿ ರಂಗನಾಥ್, ನಾರಾಣಪ್ಪ, ಹಾಲಮ್ಮ ಸೋಮಶೇಖರಪ್ಪ, ಆನಂದ್ ಕನಸು ಕುಮಾರ್, ಮುಖ್ಯ ಶಿಕ್ಷಕಿ ಭಾರತಿ ಮತ್ತಿತರು ಇದ್ದರು.
ಜಿಎಸ್‌ಎಸ್‌ಗೆ ನುಡಿನಮನ
ಕೊಪ್ಪ: ಸಾಹಿತ್ಯಲೋಕ, ಬಂಡಾಯ, ರೈತ ಚಳವಳಿ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ವಿಮರ್ಶೆ ಮಾಡುವ ಮೂಲಕ ವಿಶ್ವ ಶ್ರೇಷ್ಠ ವಿಮರ್ಶಕ ಎಂಬ ಹೆಗ್ಗಳಿಕೆಗೆ ಜಿಎಸ್‌ಎಸ್ ಅವರು ಪಾತ್ರರಾಗಿದ್ದರು ಎಂದು ಜನಪದ ಪರಿಷತ್ ಕ್ಷೇತ್ರ ಕಾರ್ಯಧ್ಯಕ್ಷ ಸುಧೀರ್ ಕುಮಾರ್ ಮರೊಳ್ಳಿ ತಿಳಿಸಿದರು.
ತಾಲೂಕು ಕಸಾಪ ಹಾಗೂ ಪತ್ರಕರ್ತರ ಸಮೂಹ ಮಂಗಳವಾರ ಸುದ್ದಿಮನೆಯಲ್ಲಿ ಜಿಎಸ್‌ಎಸ್ ನಿಧನಕ್ಕೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದ ಅವರು ಜಿಎಸ್ಸ್‌ಎಸ್ ಕುವೆಂಪು ಅವರ ಶಿಷ್ಯನಾಗಿ ಕುವೆಂಪು ರವರ ಸಾಹಿತ್ಯವನ್ನು ಪೂರ್ಣ ವಿಮರ್ಶೆ ಮಾಡಿ, ಅದಕ್ಕೆ ಇನ್ನಷ್ಟು ಮೆರಗು ನೀಡಿದಂತಹ ಮಹನ್ ಚೇತನವಾಗಿದ್ದರು ಎಂದರು.
ಸಭೆಯಲ್ಲಿ ಶಂ.ನ. ಶೇಷಗಿರಿಯವರು ಜಿಎಸ್‌ಎಸ್ ನುಡಿ ಚಿತ್ರವನ್ನು ಪ್ರದರ್ಶಿಸಿದರು, ಗಾಯಕ ಶ್ರೀನಿಧಿಯವರು ಜಿಎಸ್‌ಎಸ್ ಕೃತಿಗಳನ್ನು ಹಾಡಿದರು. ಸಭೆಯಲ್ಲಿ ಸಹಕಾರ ಸಾರಿಗೆ ಸಂಸ್ಥೆಯ ಅಧ್ಯಕ್ಷ ಈ.ಎಸ್. ಧರ್ಮಪ್ಪ, ಸಂಸ್ಥೆಯ ಮುಖ್ಯಸ್ಥ ಜಿ.ಎಸ್. ವಿಶ್ವನಾಥ್, ಕಸಾಪದ ಅಧ್ಯಕ್ಷ ಗುಡ್ಡೇತೋಟ ನಟರಾಜ್, ಕಾರ್ಯದರ್ಶಿ ರಮೇಶ್, ಸದಸ್ಯ ವಿಜಯ ಡೊಂಗ್ರೆ, ಶೇಷಾದ್ರಿ, ಜೆಸಿಐ ಸದಸ್ಯ ನಾಗರಾಜ್ ಪವಾರ್, ರೋಟರಿ ಕ್ಲಬ್ ಮುಖ್ಯಸ್ಥ ರಾಘವೇಂದ್ರ ಭಟ್, ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿನೇಶ್ ಮೊದಲಾದವರು ಇದ್ದರು.
ಕಾಡುಪ್ರಾಣಿಗಳ ಗಣತಿ ಮುಕ್ತಾಯ
ತರೀಕೆರೆ: ಉಪವಿಭಾಗದ ಡಿಸಿಎಫ್. ಮಂಜುನಾಥ್, ತರೀಕೆರೆ ಎಸಿಎಫ್ ಬಿ.ಕೆ. ರೆಡ್ಡಾರ್ ಅವರ ಮಾರ್ಗದರ್ಶನದಲ್ಲಿ ಉಪ ಅರಣ್ಯವಲಯಾಧಿಕಾರಿ ಸಂಗ್ಯಾನಾಯ್ಕ, ಅರಣ್ಯಾಧಿಕಾರಿಗಳಾದ ಎಂ.ಎಸ್. ಪ್ರದೀಪ್, ಧರ್ಮನಾಯ್ಕ ಅವರ ನೇತೃತ್ವದಲ್ಲಿ ಕಾಡುಪ್ರಾಣಿಗಳ ಗಣತಿ ಕಾರ್ಯ ನಡೆಸಲಾಯಿತು.
ಸಮೀಪದ ತ್ಯಾಗದಬಾಗಿ, ಹಾದಿಕೆರೆ ಬಿಟ್ಟಾರಹೊಂಡ ದಟ್ಟಾರಣ್ಯದಲ್ಲಿ ಹುಲಿ ಹೆಜ್ಜೆ ಮತ್ತು ಚಿರತೆ ಹೆಜ್ಜೆಗಳನ್ನು ಅರಣ್ಯಾಧಿಕಾರಿಗಳಾದ ಸಂಗ್ಯಾನಾಯ್ಕ, ಕೆ.ಬಿ. ಶ್ರೀಧರ್ ಅವರು ದಾಖಲಿಸಿದ್ದಾರೆ. ತ್ಯಾಗದಬಾಗಿ ಕಾಡಿನಲ್ಲಿ ಬೆಳಗಿನ ಸಮಯದಲ್ಲೇ ಗಣತಿದಾರರಿಗೆ ತನ್ನ ಎಂದಿನ ಬೇಟೆ ಮುಗಿಸಿ ಕಾಡಿನಲ್ಲಿ ಸಂತೃಪ್ತವಾಗಿ ವಾಕಿಂಗ್ ಬಂದ ಚಿರತೆ ಪ್ರತ್ಯಕ್ಷ ದರ್ಶನವಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ತರೀಕೆರೆ ಅರಣ್ಯ ವಲಯದ ಐದು ಶಾಖಾ ವ್ಯಾಪ್ತಿಯ 14 ಬೀಟ್‌ಗಳಲ್ಲಿ ತ್ಯಾಗದಬಾಗಿ, ಉಡೇವ ಅರಣ್ಯ, ಲಿಂಗದಹಳ್ಳಿ, ತಿಮ್ಮಾಪುರ, ನಂದಿ, ಮಲ್ಲೇನಹಳ್ಳಿ ಕಾಡು, ಭಗವತಿ ಕಟ್ಟೆ ಕಾಡು ಹಾದಿಕೆರೆ ಪೂರ್ವ, ಗಂಗೂರು ಅರಣ್ಯ ಮತ್ತಿತರರ ದಟ್ಟಾರಣ್ಯದಲ್ಲಿ ಸಸ್ಯಾಹಾರಿ, ಮಾಂಸಹಾರಿ ಪ್ರಾಣಿಗಳ ಗಣತಿ ಮಾಡಲಾಯಿತು.
ಇಂದು ವಾಜಪೇಯಿ ಹುಟ್ಟುಹಬ್ಬ
ಚಿಕ್ಕಮಗಳೂರು: ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬವನ್ನು ಬುಧವಾರ ವಿಶಿಷ್ಠವಾಗಿ ಆಚರಿಸಲು ನಿರ್ಧರಿಸಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ ತಿಳಿಸಿದ್ದಾರೆ.
ಈ ಪ್ರಯುಕ್ತ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ 9 ಮಂಡಲಗಳಲ್ಲಿ ಸ್ಕೂಲ್ ಚಲೇ ಹಮ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಡ ಮತ್ತು ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಶಾಲೆಯತ್ತ ಬರುವಂತೆ ಪ್ರೇರೇಪಿಸಲು ಈ ಕಾಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಚಿಕ್ಕಮಗಳೂರು ನಗರ ಬಿಜೆಪಿ ವತಿಯಿಂದ ನಗರದ ರಾಮನಹಳ್ಳಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಬುಧವಾರ ಬೆಳಗ್ಗೆ 7.30ಕ್ಕೆ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 11.30ಕ್ಕೆ ಪಾಂಚಜನ್ಯ ಕಚೇರಿಯಲ್ಲಿ ಅಟಲ್ ಜಿ ರಕ್ತನಿಧಿ ಕೇಂದ್ರ ಉದ್ಘಾಟನೆಗೊಳ್ಳಲಿದ್ದು, 12 ಗಂಟೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.