ಜಿಲ್ಲೆಗೆ ಡೇರಿ ಬಿಟ್ಟು ಇನ್ನೇನೂ ಬರಲಿಲ್ಲ
ಚಿಕ್ಕಮಗಳೂರು: ರಾಜ್ಯ ಬಿಜೆಪಿ ಸರ್ಕಾರ ಪ್ರತಿ ಬಜೆಟ್ನಲ್ಲೂ ಚಿಕ್ಕಮಗಳೂರು ಜಿಲ್ಲೆಯನ್ನು ಮಲತಾಯಿಯ ಮಕ್ಕಳಂತೆ ನೋಡಿಕೊಳ್ಳುತ್ತಿದೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ವಿಶೇಷವಾದ ಕೊಡುಗೆ ಏನೂ ಇಲ್ಲ.
ಆದರೆ, ಇಲ್ಲಿನ ಹಾಲು ಉತ್ಪಾದಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ಡೈರಿ ಮಂಜೂರು ಮಾಡಿದೆ. ಇನ್ನುಳಿದಂತೆ ಜಿಲ್ಲೆಯನ್ನು ಇತರೆ ವಲಯದಲ್ಲಿ ಗುರುತಿಸುವ ಕೆಲಸ ಆಗಿಲ್ಲ.
ಚಿಕ್ಕಮಗಳೂರು ಜಿಲ್ಲೆ ಸಮಸ್ಯೆಗಳ ಗೂಡಾಗಿದೆ. ಮಲೆನಾಡಿನಲ್ಲಿ ನಕ್ಸಲ್ ಸಮಸ್ಯೆ, ಅಡಿಕೆ ತೋಟಗಳಿಗೆ ಹಳದಿ ಎಲೆ ರೋಗ, ಇತ್ತ ಬಯಲುಸೀಮೆ ತಾಲೂಕುಗಳು ಪ್ರತಿ ವರ್ಷ ಬರಗಾಲಕ್ಕೆ ತುತ್ತಾಗುತ್ತಿವೆ. ಇಲ್ಲಿನ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ.
ಕಾಮಗಾರಿ ಪ್ರಾರಂಭವಿಲ್ಲ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಪ್ರಥಮದಲ್ಲಿ ಮಂಡಿಸಿದ ಬಜೆಟ್ನಲ್ಲಿ ಅಶ್ವಿನಿ ದೇವತೆಗಳಲ್ಲಿ ಓರ್ವರಾದ ಎ.ಆರ್. ಕೃಷ್ಣಶಾಸ್ತ್ರಿ ಅವರ ಹುಟ್ಟೂರಾದ ಅಂಬಳೆ ಗ್ರಾಮದಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ಒಂದು ಕೋಟಿ ರುಪಾಯಿ ಮಂಜೂರು ಮಾಡಲಾಗಿತ್ತು. ಆದರೆ, ಈ ಕೆಲಸ ಈವರೆಗೆ ಪ್ರಾರಂಭವಾಗಿಲ್ಲ.
ಕಳೆದ ವರ್ಷದ ಬಜೆಟ್ನಲ್ಲಿ ಜಿಲ್ಲೆಯನ್ನು ಗುರುತಿಸುವ ಕೆಲಸವಾಗಿತ್ತು. ಇಲ್ಲಿನ ರಸ್ತೆಗಳ ಅಭಿವೃದ್ಧಿಗೆ ಹಣ ನೀಡಲಾಗಿತ್ತು. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೆಮ್ಮಣ್ಣಗುಂಡಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣ ಮೀಸಲಿಡಲಾಗಿತ್ತು. ದತ್ತಪೀಠದ ಅಭಿವೃದ್ಧಿಗೂ ಹಣ ನೀಡಲಾಗಿತ್ತು. ಆದರೆ, ಅದು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿತ್ತು.
ಬಾಳೆಹೊನ್ನೂರು, ಶೃಂಗೇರಿ ಹಾಗೂ ಹರಿಹರಪುರ ಮಠಗಳಿಗೆ ರಾಜ್ಯ ಸರ್ಕಾರ ಹಣ ನೀಡಿತ್ತು. ಈ ಬಾರಿಯ ಬಜೆಟ್ನಲ್ಲಿ ಹರಿಹರಪುರ ಮಠಕ್ಕೆ ಒಂದು ಕೋಟಿ ರುಪಾಯಿ ನೀಡಲಾಗಿದೆ. ಇನ್ನುಳಿದಂತೆ ಜಿಲ್ಲೆಗೆ ವಿಶೇಷವಾದ ಕೊಡುಗೆ ಏನೂ ಇಲ್ಲ.
ಕಳಸ: ಜಿಲ್ಲೆಯ 7 ತಾಲೂಕುಗಳ ಪೈಕಿ ಮೂಡಿಗೆರೆ ತಾಲೂಕಿನ ವ್ಯಾಪ್ತಿ ಸುಮಾರು 90 ಕಿ.ಮೀ. ನಷ್ಟಿದೆ. ಕುದುರೆಮುಖ ಸಮೀಪದಲ್ಲಿರುವ ಸಿಂಗಾಸಾಲು, ಭಗವತಿ, ಗಂಗಾಮೂಲ ಗ್ರಾಮಗಳಿಂದ ಮೂಡಿಗೆರೆ ಬರಬೇಕಾದರೆ ಸುಮಾರು 90 ಕಿ.ಮೀ. ಪ್ರಯಾಣಿಸಬೇಕು. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಬಂದು ಹೋಗಬೇಕಾದರೆ ಇಡೀ ದಿನ ಪ್ರಯಾಣದಲ್ಲೇ ಕಳೆದು ಹೋಗಲಿದೆ. ಅದುದರಿಂದ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂಬುದು ಇಲ್ಲಿನ ಜನರ ಬಹಳಷ್ಟು ವರ್ಷದ ಬೇಡಿಕೆ.
ಪ್ರಾತಿನಿಧ್ಯವನ್ನು ನೀಡಿಲ್ಲ: ರಾಜ್ಯ ಸರ್ಕಾರ ಈ ಬಜೆಟ್ನಲ್ಲಿ ಹೊಸದಾಗಿ 43 ತಾಲೂಕುಗಳನ್ನು ಘೋಷಣೆ ಮಾಡಿದೆ. ಆದರೆ, ಕಳಸಕ್ಕೆ ಮಾತ್ರ ಈ ಪ್ರಾತಿನಿಧ್ಯವನ್ನು ನೀಡಿಲ್ಲ. ಈ ಭಾಗದ ಜನರನ್ನು ನಿರಾಶೆ ಮಾಡಿದೆ. ಮೂಡಿಗೆರೆ ತಾಲೂಕು ಮಲೆನಾಡು ಪ್ರದೇಶ, ಇಲ್ಲಿ ವಾಸವಾಗಿರುವವರಲ್ಲಿ ಹೆಚ್ಚಿನ ಮಂದಿ ಕೂಲಿ ಕಾರ್ಮಿಕರು, ದಲಿತರು, ಗಿರಿಜನರು. ಇವರಿಗೆ ಸಕಾಲಕ್ಕೆ ಸರ್ಕಾರಿ ಸೇವೆಯನ್ನು ತಲುಪಿಸಲು ಆಗುತ್ತಿಲ್ಲ. ಆಡಳಿತ ವೀಕೇಂದ್ರಕರಣದ ದೃಷ್ಟಿಯಿಂದ ಕಳಸ ತಾಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಣೆ ಮಾಡಬೇಕಾಗಿತ್ತು. ಈ ಸಂಬಂಧ ಆ ಭಾಗದಲ್ಲಿ ಅನೇಕ ಹೋರಾಟಗಳು ನಡೆದಿದ್ದವು. ಇವುಗಳಿಗೆ ಸರ್ಕಾರ ಬೆಲೆ ಕೊಟ್ಟಿಲ್ಲ.
ಹುಸಿಯಾದ ನಿರೀಕ್ಷೆ: ಬಿಜೆಪಿ ಪಕ್ಷಕ್ಕೆ ಚಿಕ್ಕಮಗಳೂರು ಜಿಲ್ಲೆ ಕೊಡುಗೆ ನೀಡಿದೆ. ಇಲ್ಲಿನ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲವು ತಂದುಕೊಟ್ಟಿದ್ದಾರೆ.
ಇದು, ಚುನಾವಣಾ ವರ್ಷವಾಗಿದ್ದರಿಂದ ಇಲ್ಲಿನ ಮತದಾರರನ್ನು ಓಲೈಸಿಕೊಳ್ಳಲು ಸರ್ಕಾರ ಬಜೆಟ್ನಲ್ಲಿ ಜಿಲ್ಲೆಯನ್ನು ಗುರುತಿಸುತ್ತದೆ ಎಂಬ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದರೆ, ಇದು, ಹುಸಿಯಾಗಿದೆ. ಒಟ್ಟಾರೆ ಜಿಲ್ಲೆಯ ಪಾಲಿಗೆ ಇದು ನಿರಾಶದಾಯಕ ಬಜೆಟ್.
-ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

