ಗ್ರಾಮೀಣ ಕಲೆಯಿಂದ ಸ್ವಾವಲಂಬಿ ಜೀವನ
ಚಿಕ್ಕಮಗಳೂರು: ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಜನಪದ ಸೊಗಡು ಬಿಂಬಿಸುವ ಗ್ರಾಮೀಣ ಕಲೆಗಳನ್ನು ಮೈಗೂಡಿಸಿಕೊಂಡರೆ ಸಂಸ್ಕೃತಿ ಉಳಿಸುವ ಜೊತೆ ಸ್ವಾವಲಂಬಿ ಜೀವನಕ್ಕೂ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜೆ.ಎಚ್. ರೇಖಾ ಹುಲಿಯಪ್ಪಗೌಡ ಹೇಳಿದ್ದಾರೆ.
ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಗರದ ಹೊರವಲಯದಲ್ಲಿರುವ ಜಿಲ್ಲಾ ಕ್ರೀಡಾಂಗಣ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ವೀರಗಾಸೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪಾಶ್ಚಿಮಾತ್ಯ ನೃತ್ಯ, ಗೀತೆಗಳಿಗೆ ಇಂದಿನ ಯುವಜನತೆ ಮಾರುಹೋಗುತ್ತಿರುವುದರಿಂದ ಗ್ರಾಮೀಣ ಸಂಸ್ಕೃತಿ ಮರೆಯಾಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಕಲೆಯನ್ನು ಮಹಿಳೆಯರು ಕಲಿಯಲು ಆಸಕ್ತಿವಹಿಸಿ ಬಂದಿರುವುದು ಶ್ಲಾಘನಾರ್ಹ ಎಂದರು.
ಉದ್ದೇಶ ಸಾರ್ಥಕ: ಹಿಂದೂ ಸಾಂಸ್ಕೃತಿಕ ರಾಯಭಾರಿಯಾದ ಮಹಿಳೆಯರು ಜನಪ್ರಿಯ ಕಲೆಯಾದ ವೀರಗಾಸೆಯನ್ನು ಕಲಿತು ವೃತ್ತಿ ಜೀವನದಲ್ಲೂ ಅಳವಡಿಸಿಕೊಳ್ಳುವುದರ ಜೊತೆ ಇತರರಿಗೆ ಪ್ರೇರಣೆಯಾಗುವಂತಾದಾಗ ಸರ್ಕಾರದ ಉದ್ದೇಶಕ್ಕೂ ಸಾರ್ಥಕತೆ ಸಿಗುತ್ತದೆ ಎಂದು ಹೇಳಿದರು.
ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಉಷಾದೇವಿ ಮಾತನಾಡಿ, ಸರ್ಕಾರ ಸೇರಿದಂತೆ ಸರ್ಕಾರೇತರ ಸಮಾರಂಭಗಳಲ್ಲಿ ಕಳೆ ತಂದುಕೊಡುವ ಕಲೆ ಎಂದರೆ ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ಜನಪದ ಕಲೆಗಳು. ಇಂತಹ ವೀರಗಾಸೆಯನ್ನು ಕಲಿಯಲು ನಗರದ 12 ಮಂದಿ ಮಹಿಳೆಯರು ಮುಂದೆ ಬಂದಿರುವುದು ಸ್ವಾಗತಾರ್ಹ ಎಂದರು.
15 ದಿನಗಳ ಕಾಲ ಈ ತರಬೇತಿ ನಡೆಯಲಿದೆ. ವೀರಗಾಸೆಯ ಪ್ರಖ್ಯಾತ ಕಲಾವಿದ ಮಾಳೇನಹಳ್ಳಿ ಬಸಪ್ಪ ಮತ್ತು ತಂಡದವರು ಈ ತರಬೇತಿ ನೀಡುತ್ತಿದ್ದಾರೆ ಎಂದು ಹೇಳಿದರು.
ಜಿಪಂ ಉಪಾಧ್ಯಕ್ಷೆ ಮಾಲಿನಿಬಾಯಿ ರಾಜಾನಾಯ್ಕ, ಸದಸ್ಯೆ ಅನ್ನಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

