ಚಿಕ್ಕಮಗಳೂರು

ಉತ್ತಮರ ಸಹವಾಸದಿಂದ ಕನಸು ನನಸು

Published On :

ಕಡೂರು: ಉತ್ತಮರ ಸಹವಾಸದಿಂದ ಮನುಷ್ಯ ತಾನು ಕಾಣುವ ಭವಿಷ್ಯದ ಕನಸು ನನಸು ಮಾಡಿಕೊಂಡು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಸಿರಿಗೆರೆ ಶಾಖಾಮಠವಾದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಕಡೂರು ಪಟ್ಟಣದ ಕೆ.ಹೊಸಳ್ಳಿಯಲ್ಲಿ ವೀರಭದ್ರೇಶ್ವರ ಎಂಜಿನಿಯರಿಂಗ್ ವರ್ಕ್ಸ್ ಘಟಕ ಉದ್ಘಾಟಿಸಿ  ನಂತರ ನಡೆದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯ ಸಾಹಸಿಯಾಗಿ ಉತ್ತಮ ಗುರಿ ಹೊಂದಿ ಕನಸು ಕಂಡಾಗ ಅದನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು. ಕೆಲವರು ಮನೆಗೆ ಮಾರಿಯಾಗಿ ದೇಶಕ್ಕೆ ದ್ರೋಹಿಯಾಗಿ ಜೀವನ ದುರಂತ  ಮಾಡಿಕೊಳ್ಳುತ್ತಾರೆ. ಒಳ್ಳೆಯ ಆಲೋಚನೆ ಮತ್ತು ಸಜ್ಜನರ ಸಂಗ ಮಾಡಿದವರು ಎಂದೂ ಹಾಳಾಗುವುದಿಲ್ಲ. ಅಂತಹ ಜನರ ಒಡನಾಟದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹಲವಾರು ದಾರಿಗಳಿವೆ. ಅದಕ್ಕೆ ಪರಿಶ್ರಮ ಬಹುಮುಖ್ಯ. ಆ ಮೂಲಕ ಶ್ರಮಪಟ್ಟು ಭವಿಷ್ಯ ರೂಪಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು  ಇತರರ ಒಳಿತನ್ನು ಬಯಸುವವರ ಸಾಲಿನಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದಿರುವ ಸ್ವಂತ ಉದ್ಯಮ ಸ್ಥಾಪಿಸಿರುವ ಶಿವಣ್ಣ ತಾನು ಅಂದುಕೊಂಡಿದ್ದನ್ನು ಸಾಧಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ರೈತರಿಗೆ ನೆರವು: ಇಂದು ಬರಗಾಲ ಎಲ್ಲೆಡೆ ತಾಂಡವವಾಡುವ ಮೂಲಕ ರೈತರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಇಂತಹ ಸಮಯದಲ್ಲಿ ರೈತರು ಕಷ್ಟಪಟ್ಟು ಕೊಳವೆ ಬಾವಿಗಳಿಗೆ ಹಾಕುವ ಮೋಟಾರ್ ಹಾಗೂ ಇತರೆ ಪರಿಕರಗಳನ್ನು ನೂತನ ತಂತ್ರಜ್ಞಾನದ ಮೂಲಕ ರೂಪಿಸಿ ಕಡಿಮೆ ಖರ್ಚಿನಲ್ಲಿ ನೀಡಿದಲ್ಲಿ ರೈತರಿಗೆ ನೆರವಾಗುತ್ತದೆ. ವಿದ್ಯುತ್ ಮತ್ತು ನೀರನ್ನು ಕಡಿಮೆ ಬಳಸುವುದೇ ಪ್ರತಿಯೊಬ್ಬರೂ ಈ ದೇಶಕ್ಕೆ ನೀಡುವ ಕೊಡುಗೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ವೈ.ಸಿ. ವಿಶ್ವನಾಥ್ ಮಾತನಾಡಿ, ಇಂದಿನ ನಮ್ಮ ದೇಶದ ಕೃಷಿ ವ್ಯವಸ್ಥೆಗೆ ಸೂಕ್ಷ್ಮ ತಂತ್ರಜ್ಞಾನದ ನೀರಾವರಿ ವ್ಯವಸ್ಥೆ ಜಾರಿಯಾದಲ್ಲಿ ರೈತರ ಸ್ಥಿತಿಗತಿಗಳು ಸುಧಾರಿಸಲು ಸಾಧ್ಯ. ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಮಾಡುವ ಪದ್ಧತಿ ಅಳವಡಿಸಿಕೊಂಡಲ್ಲಿ ದೇಶದ ವ್ಯವಸ್ಥೆ ಸುಭದ್ರವಾಗುತ್ತದೆ. ಆ ನಿಟ್ಟಿನಲ್ಲಿ ಉದ್ಯಮಿ ಶಿವಣ್ಣ ಇಂತಹ ಸ್ವಂತ ಉದ್ಯಮ ಸ್ಥಾಪಿಸಿ ಇತರ ಜನರಿಗೆ ಮಾದರಿಯಾಗಿದ್ದಾರೆ ಎಂದರು.
ಜನರಿಗೆ ಉಪಯೋಗ: ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಮಾತನಾಡಿ, ಬೆಂಗಳೂರಿನಂತಹ ದೊಡ್ಡನಗರ ಬಿಟ್ಟು ಕಡೂರು ತಾಲೂಕಿನ ರೈತ ಭಾಂಧವರಿಗೆ ತನ್ನ ಕೈಲಾದ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಶಿವಣ್ಣನವರು ಕಡೂರಿನಲ್ಲಿ ಉದ್ಯಮ ಸ್ಥಾಪಿಸಿದ್ದಾರೆ. ಆವರ ಈ ನೂತನ ಉದ್ಯಮದಿಂದ ತಾಲೂಕಿನ ಎಲ್ಲ ಜನರೂ ಉಪಯೋಗ ಪಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಉದ್ಯಮಿ ಎಂ.ಆರ್. ಮರುಳಸಿದ್ದಪ್ಪ, ಬಸವರಾಜು, ಎಸ್. ಸೋಮಶೇಖರ್, ಕೆ.ಎನ್. ಬೊಮ್ಮಣ್ಣ, ಇಮಾಮ್, ಶೆಟ್ಟಿಹಳ್ಳಿ ರಾಮಪ್ಪ, ಕಾಮನಕೆರೆ ಶಶಿಧರ್, ಡಿಸಿಎನ್ ಶೇಖರಪ್ಪ, ಗೋಪಿನಾಥ್, ಸಣ್ಣಲಿಂಗಪ್ಪ, ಶೈಲಾ, ಬೋರ್‌ವೆಲ್ ಶಿವಣ್ಣ, ವಿವೇಕಾನಂದ, ಕೆ.ಎನ್. ಬೊಮ್ಮಣ್ಣ, ಸಚಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶಿವಸಂಚಾರ ಕಲಾವಿದರಾದ ಜ್ಯೋತಿ ಮತ್ತು ದ್ರಾಕ್ಷಾಯಿಣಿಯವರಿಂದ ವಚನ ಗಾಯನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.