ಚಿಕ್ಕಮಗಳೂರು

ಕಾಫಿ ನಾಡಲ್ಲಿ ತಟ್ಟಲಿಲ್ಲ ಮುಷ್ಕರದ ಬಿಸಿ

Published On :

ಚಿಕ್ಕಮಗಳೂರು: ಬೆಲೆ ಏರಿಕೆ ಹಾಗೂ ವೇತನ ತಾರತಮ್ಯ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಮುಷ್ಕರ  ಜನರಿಗೆ ತಟ್ಟಲಿಲ್ಲ.
ಮುಷ್ಕರ, ಕಾರ್ಮಿಕ ಸಂಘಟನೆಗಳಿಗೆ ಮಾತ್ರ ಸೀಮಿತವಾಗಿದ್ದು, ಇದಕ್ಕೆ ವರ್ತಕರು, ಜನರು ತಲೆ ಕೆಡಿಸಿಕೊಳ್ಳಲಿಲ್ಲ.
ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುವ ಮಾರ್ಗದಲ್ಲಿ ಖಾಸಗಿ ಬಸ್‌ಗಳು, ಮ್ಯಾಕ್ಸಿಕ್ಯಾಬ್‌ಗಳು ಸಂಚರಿಸಿದವು. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಕಡೂರು, ಮೂಡಿಗೆರೆ, ಜಾವಗಲ್, ಬೇಲೂರು ಸೇರಿದಂತೆ ಇತರೆ ತಾಲೂಕು ಕೇಂದ್ರಗಳಿಗೆ ಬಸ್‌ಗಳನ್ನು ಬಿಟ್ಟಿದ್ದರಿಂದ ಪ್ರಯಾಣಿಕರಿಗೆ ಮುಷ್ಕರದಿಂದ ಯಾವುದೇ ರೀತಿಯಲ್ಲೂ ತೊಂದರೆಯಾಗಲಿಲ್ಲ.
ಮುಷ್ಕರದ ಹಿನ್ನಲೆಯಲ್ಲಿ ಕೆಲವು ಶಾಲಾ ಕಾಲೇಜುಗಳಿಗೆ ಹಿಂದಿನ ದಿನವೇ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಇನ್ನು ಕೆಲವು ಶಾಲೆಗಳಿಗೆ ಬುಧವಾರ ಬೆಳಿಗ್ಗೆ ರಜೆ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ಮನೆಗಳಿಗೆ ಮರಳಿದರು. ಮುಷ್ಕರದ ಹಿನ್ನಲೆಯಲ್ಲಿ ಗುರುವಾರವೂ ಕೆಲವು ಶಾಲೆಗಳಿಗೆ ರಜೆ ವಿಸ್ತರಿಸಲಾಗಿದೆ.
ಕೆಲಸಕ್ಕೆ ಹಾಜರಾಗಲಿಲ್ಲ: ಕೆಎಸ್‌ಆರ್‌ಟಿಸಿಯ ಕೆಲವು ನೌಕರರು ಎಂದಿನಂತೆ ಬುಧವಾರ ಬೆಳಿಗ್ಗೆ ಡಿಪೋಗೆ ಬಂದಿದ್ದರು. ಆದರೆ, ಕೆಲಸಕ್ಕೆ ಹಾಜರಾಗಲಿಲ್ಲ, ಡಿಪೋ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನೆಗಳಿಗೆ ತೆರಳಿದರು.
ನಗರದಲ್ಲಿ ಆಟೋಗಳು ಎಂದಿನಂತೆ ಸಂಚರಿಸುತ್ತಿದ್ದವು. ಬುಧವಾರ ಚಿಕ್ಕಮಗಳೂರಿನಲ್ಲಿ ಸಂತೆಯ ದಿನ. ಸಾರ್ವಜನಿಕರು ಪ್ರತಿವಾರದಂತೆ ಈ ಬಾರಿಯೂ ಕೂಡ ಸಂತೆಯಲ್ಲಿ ತರಕಾರಿ ಹಾಗೂ ಇತರೆ ವಸ್ತುಗಳನ್ನು ಖರೀದಿ ಮಾಡುತ್ತಿರುವುದು ಕಂಡು ಬಂದಿತು.
ಎಂದಿನಂತೆ ಕಾರ್ಯನಿರ್ವಹಣೆ: ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಇದ್ದರಿಂದ ಹಳ್ಳಿಗಳ ಜನರು ನಗರಕ್ಕೆ ಬಂದು ಸಂತೆ ಮುಗಿಸಿ ಸಂಜೆ ಮನೆಗಳಿಗೆ ತೆರಳಿದರು. ಹೋಟೆಲ್‌ಗಳು, ಚಲನಚಿತ್ರ ಮಂದಿರಗಳು, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಇದ್ದವು. ಇನ್ನು  ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸಿದವು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ನಾಮಪತ್ರ ಸಲ್ಲಿಸುವ ಕೆಲಸ ಭರದಿಂದ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸುವ ಕೇಂದ್ರಗಳು ಜನರಿಂದ ಭರ್ತಿಯಾಗಿದ್ದವು.
ಇಂದು ಬಸ್ ಸಂಚಾರ: ಎರಡು ದಿನಗಳ ಮುಷ್ಕರಕ್ಕೆ ನಮ್ಮ ಬೆಂಬಲ ಇದೆ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಒಂದು ದಿನ ಮಾತ್ರ ಮುಷ್ಕರದಲ್ಲಿ ಭಾಗವಹಿಸಲಾಗಿದ್ದು, ಗುರುವಾರ ಎಂದಿನಂತೆ ಕೆಎಸ್‌ಆರ್‌ಟಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಚಿಕ್ಕಮಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಸಾತಿ ಸುಂದರೇಶ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಆದರೆ, ಬ್ಯಾಂಕ್ ಸೇವೆ ಮಾತ್ರ ಬುಧವಾರದಂದು ಇರಲಿಲ್ಲ. ಗುರುವಾರವೂ ಇರುವುದಿಲ್ಲ. ಈ ಮುಷ್ಕರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಎಲ್ಲಾ ಸಂಘಟನೆಯವರು ಪಾಲ್ಗೊಂಡಿದ್ದಾರೆ.
ಸರಣಿ ಪ್ರತಿಭಟನೆ: ಬೆಳಿಗ್ಗೆನಿಂದಲೇ ನಗರದಲ್ಲಿ ಪ್ರತಿಭಟನೆಗಳು ಒಂದರ ಮೇಲೋಂದರಂತೆ ನಡೆದವು. ಎಐಟಿಯುಸಿ, ಟಿಯುಸಿಐ, ಐಎನ್‌ಟಿಯುಸಿ, ಬಿಎಂಎಸ್, ಸಿಐಟಿಯು, ಎಚ್‌ಎಂಎಸ್, ಎಐಯುಟಿಯುಸಿ, ಟಿಯುಸಿಸಿ, ಎಐಸಿಸಿಟಿಯು, ಎಲ್‌ಪಿಎಫ್, ಸಿಪಿಐ, ಸಿಪಿಐ (ಎಂಎಲ್), ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು, ಕಾವೇರಿ ಗ್ರಾಮೀಣ ಬ್ಯಾಂಕ್ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಲ್ಲಿನ ಬೋಳರಾಮೇಶ್ವರ ದೇವಾಲಯದಿಂದ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಇನ್ನು ಕೆಲವು ಸಂಘಟನೆಯವರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆ ಹಾಕಿದರು. ಇದರ ಜತೆಗೆ ನಗರದ ವಿವಿಧೆಡೆ ಬೈಕ್ ರ್ಯಾಲಿ ನಡೆಸಿದರು.
ವಿದೇಶಿ ಬಂಡವಾಳ ಹೂಡಿಕೆ, ಬ್ಯಾಂಕಿಂಗ್ ರೆಗ್ಯುಲೇಷನ್ ಆಕ್ಟ್, ವಿದೇಶಿ ಮತದಾನದ ಹಕ್ಕು, 10ನೇ ದ್ವಿಪಕ್ಷೀಯ ಒಪ್ಪಂದದಂತೆ ವೇತನ ಜಾರಿಗೆ ಆಗ್ರಹಿಸಿ ಬ್ಯಾಂಕ್ ನೌಕರರು ಇಲ್ಲಿನ ಎಸ್‌ಬಿಎಂ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದುಷ್ಪರಿಣಾಮ ಬೀರಲಿಲ್ಲ: ಒಟ್ಟಾರೆ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಈ ಮುಷ್ಕರ ಜಿಲ್ಲೆಯ ಜನರ ಮೇಲೆ ದುಷ್ಪರಿಣಾಮ ಬೀರಲಿಲ್ಲ. ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಎಂದಿನಂತೆ ಇರುವುದರಿಂದ ದೂರದ ಊರುಗಳಿಗೆ ತೆರಳಬೇಕಾದ ಜನರಿಗೆ ಅನುಕೂಲವಾಗಲಿದೆ.
ಭಾರತ್ ಬಂದ್: ಮಿಶ್ರ ಪ್ರತಿಕ್ರಿಯೆ
ಕಡೂರು: ಭಾರತ್ ಬಂದ್‌ಗೆ ಕಡೂರು ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಸ್ಸುಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.
ಭಾರತ್ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕಡೂರು ಪಟ್ಟಣದಲ್ಲಿನ ಹಲವು ರಸ್ತೆಗಳಲ್ಲಿನ ಅಂಗಡಿ ಬಾಗಿಲು ಮುಚ್ಚಿದ್ದರೆ ಮತ್ತೆ ಕೆಲವೆಡೆ ಅಂಗಡಿ ಮುಂಗಟ್ಟುಗಳು ತೆರೆಯುವ ಮೂಲಕ ಎಂದಿನಂತೆವ್ಯಾಪಾರ ವಹಿವಾಟಿನಲ್ಲಿ ತೊಡಗಿದವು.
ಬೆಳಿಗ್ಗೆಯಿಂದಲೇ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬೆಳಿಗ್ಗೆಯಿಂದಲೂ ಬಸ್ ಬಾರದೆ ನಿಲ್ದಾಣ ಬಿಕೋ ಎನ್ನುತ್ತಿತ್ತು. ಸರಿಯಾದ ಮಾಹಿತಿ ಸಿಗದ ಪ್ರಯಾಣಿಕರು ನಿಲ್ದಾಣದಲ್ಲಿಯೇ ಕಾಯುತ್ತಿದ್ದುದು ಕಂಡು ಬಂದಿತು.
ಸಂಜೆಯಾದರೂ ಬಸ್ ಬರುವ ಸುಳಿವು ಸಿಗದ ಕಾರಣ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ತೆರೆಳಿದರು. ಇತ್ತ ಪಟ್ಟಣದ ಸರ್ಕಾರಿ ಕಚೇರಿಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಿದರೆ, ಬ್ಯಾಂಕುಗಳು ಮುಚ್ಚಿದ್ದವು.
ಯಾವುದೇ ರಾಜಕೀಯ ಪಕ್ಷಗಳು ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸದೇ ಇದ್ದುದು ವಿಶೇಷವಾಗಿತ್ತು.
ಬಂದ್ ವಿಫಲ
ನರಸಿಂಹರಾಜಪುರ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ತಾಲೂಕಿನಲ್ಲಿ ಸಂಪೂರ್ಣ ವಿಫಲವಾಗಿದ್ದು ಜನ ಜೀವನ ಎಂದಿನಂತೆ ಇತ್ತು.
ಬಸ್ಸುಗಳು ಹಾಗೂ ಇತರೆ ವಾಹನಗಳ ಸಂಚಾರ ಎಂದಿನಂತೆ ಇತ್ತು. ಶಾಲಾ, ಕಾಲೇಜುಗಳು ನಡೆದವು. ಅಂಗಡಿ, ಹೋಟೆಲ್ ತೆರೆದಿದ್ದವು. ಸರ್ಕಾರಿ ಕಚೇರಿಗಳು ಎಂದಿನಂತೆ ನಡೆದವು. ಆದರೆ, ಎಸ್‌ಬಿಎಂ ಹಾಗೂ ಕೆನರಾ ಬ್ಯಾಂಕುಗಳು ಮಾತ್ರ ಮುಷ್ಕರಕ್ಕೆ ಬೆಂಬಲ ನೀಡಿ ಬ್ಯಾಂಕುಗಳನ್ನು ಬಂದ್ ಮಾಡಿದ್ದರು. ಪಟ್ಟಣದ ಕೆಲ ಶಾಲೆಗಳು ಮಾತ್ರ ರಜೆ ಘೋಷಿಸಿದ್ದವು.
ಪರಿಣಾಮ ಬೀರದ ಭಾರತ್ ಬಂದ್
ಶೃಂಗೇರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬುಧವಾರದ ಭಾರತ್ ಬಂದ್ ಪಟ್ಟಣದಲ್ಲಿ ಯಾವುದೆ ಪರಿಣಾಮ ಬೀರಲಿಲ್ಲ.
ಮಂಗಳೂರು, ಉಡುಪಿ ಕಡೆಯಿಂದ ಯಾವುದೇ ಬಸ್ ಸಂಚಾರ ಇಲ್ಲದ ಕಾರಣ ಕೆರೇಕಟ್ಟೆ, ನೆಮ್ಮಾರು ಭಾಗದ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡಬೇಕಾಯಿತು. ಉಳಿದಂತೆ ಶೃಂಗೇರಿ-ತೀರ್ಥಹಳ್ಳಿ, ಬಾಳೆಹೊನ್ನೂರು, ಜಯಪುರ, ಕೊಪ್ಪ ಇತರೆ ಮಾರ್ಗಗಳ ಬಸ್ ಸಂಚಾರವಿದ್ದರಿಂದ ಬಂದ್ ಯಾವುದೇ ಪರಿಣಾಣ ಬೀರಲಿಲ್ಲ.
ಅಂಗಡಿ, ಹೋಟೆಲ್, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿತು.
ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.