ಚಿಕ್ಕಮಗಳೂರು

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Published On :

ಚಿಕ್ಕಮಗಳೂರು: ಕಳೆದ ಬಾರಿ ಚಿಕ್ಕಮಗಳೂರು ನಗರಸಭೆ ಬಿಜೆಪಿಯ ಹಿಡಿತದಲ್ಲಿತ್ತು. ಈ ಬಾರಿಯೂ ಅಧಿಕಾರಕ್ಕೆ ಬರಲು ಕಸರತ್ತು ನಡೆಸುತ್ತಿದೆ.
 ಇಲ್ಲಿನ 35 ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡಲು ಪಕ್ಷದ ಕಾರ್ಯಕರ್ತರಿಂದ ಬಂದ ಅರ್ಜಿಗಳ ಸಂಖ್ಯೆ ಬರೋ ಬರಿ 249. ಈ ಪೈಕಿ 22 ವಾರ್ಡ್‌ಗಳ ಅಭ್ಯರ್ಥಿಯ ಹೆಸರನ್ನು ಮಾತ್ರ ಅಂತಿಮಗೊಳಿಸಲಾಗಿದ್ದು, ಈ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ನಗರಾಧ್ಯಕ್ಷ ಕೋಟೆ  ರಂಗನಾಥ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
ಅಭ್ಯರ್ಥಿಗಳ ವಿವರ: ಬಿಜೆಪಿ ಚಿಕ್ಕಮಗಳೂರು ನಗರಸಭೆಗೆ ಪ್ರಕಟಿಸಿರುವ 22 ಅಭ್ಯರ್ಥಿಗಳ ವಾರ್ಡ್‌ವಾರು ವಿವರ ಈ ಕೆಳಕಂಡಂತೆ ಇದೆ. ವಾರ್ಡ್ 1- ಕವಿತಾ ಶೇಖರ್, 2- ಎಚ್.ಡಿ. ತಮ್ಮಯ್ಯ, 3- ಜಾನಯ್ಯ, 8- ಎಂ. ಶ್ರೀನಿವಾಸ್‌ರಾವ್, 10- ಸಿ.ಕೆ. ಜಗದೀಶ್, 11- ಆರ್. ಕವಿತಾ, 13- ಯಶೋಧ ಶಂಕರ್‌ರಾವ್, 14- ಸಿ.ಆರ್. ಪ್ರೇಮ್‌ಕುಮಾರ್, 15- ಪ್ರೇಮ್‌ಕಿರಣ್, 16- ಶಾರದಾ, 17- ಬಿ. ಕುಸುಮ, 18- ಅಬ್ದುಲ್ ರೆಹಮಾನ್ ಖುರೇಶಿ, 19- ಮುತ್ತಯ್ಯ, 20- ಮಂಗಳ, 22- ಮೋಹನ್, 25- ಪೂರ್ಣಿಮಾ ಕೇಶವ್, 27- ಶಿಲ್ಪಾ ರಾಜಶೇಖರ್,  29- ಸಿ.ಎಸ್. ರವಿ, 31- ಟಿ. ಮಂಜುನಾಥ್, 32- ಸೈದಾಮಿನಿ  ಮನೋಹರ್, 33- ಡಿ. ಸುಧೀರ್, 35- ಪುಷ್ಪರಾಜ್.
 ಪ್ರಕಟಿತ 22 ಸದಸ್ಯರ ಪಟ್ಟಿಯಲ್ಲಿ 7 ಜನರು ಎರಡನೇ ಬಾರಿಯೂ ಸ್ಪರ್ಧೆ ಮಾಡಿದ್ದಾರೆ. ಇನ್ನುಳಿದವರ ಪೈಕಿ ಮುತ್ತಯ್ಯ ಹಾಗೂ ಕವಿತಾ ಶೇಖರ್ ಈ ಹಿಂದಿನ ಅವಧಿಯಲ್ಲಿ ನಾಮ ನಿರ್ದೇಶನ ಸದಸ್ಯರಾಗಿದ್ದರು. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಮಾಜಿ ಅಧ್ಯಕ್ಷರು: ಕಳೆದ ಐದು ವರ್ಷಗಳ ಅವಧಿಯಲ್ಲಿ ಚಿಕ್ಕಮಗಳೂರು ನಗರಸಭೆಯಲ್ಲಿ ಕೋಟೆ ಕೃಷ್ಣ, ಎಚ್.ಡಿ. ತಮ್ಮಯ್ಯ, ಶ್ರೀನಿವಾಸ್, ನಿಂಗೇಗೌಡ ಹಾಗೂ ಸಿ.ಆರ್. ಪ್ರೇಮ್‌ಕುಮಾರ್ ಅಧ್ಯಕ್ಷರಾಗಿದ್ದರು. ಈಗ ಪ್ರಕಟಿತ 22 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎಚ್.ಡಿ. ತಮ್ಮಯ್ಯ, ಸಿ.ಆರ್. ಪ್ರೇಮ್‌ಕುಮಾರ್ ಮರಳಿ ತಮ್ಮ ವಾರ್ಡ್‌ಗಳಿಂದ ಮತ್ತೆ ಸ್ಪರ್ಧೆ ಮಾಡುತ್ತಿದ್ದಾರೆ.
    ಆದರೆ, ಮಾಜಿ ಅಧ್ಯಕ್ಷ ಶ್ರೀನಿವಾಸ್ ಈ ಬಾರಿ ಸ್ಪರ್ಧೆ ಮಾಡುತ್ತಿಲ್ಲ. ಈ ವಾರ್ಡ್‌ವನ್ನು ತಮ್ಮ ಪುತ್ರ ಸಿ.ಆರ್. ರವಿಗೆ ಬಿಟ್ಟುಕೊಟ್ಟಿದ್ದಾರೆ. ಇನ್ನೋರ್ವ ಮಾಜಿ ಅಧ್ಯಕ್ಷ ನಿಂಗೇಗೌಡ ಸ್ಪರ್ಧೆ ಮಾಡುತ್ತಿಲ್ಲ. ಅವರು ಹೆಸರು ಸೂಚಿಸಿದ ಮೋಹನ್‌ಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
 ಒಟ್ಟಿನಲ್ಲಿ ಐದು ಮಂದಿ ಮಾಜಿ ಅಧ್ಯಕ್ಷರಲ್ಲಿ ನಾಲ್ವರಿಗೆ ಸಮಾಧಾನ ಪಡಿಸಲಾಗಿದೆ. ಆದರೆ, ಮಾಜಿ ಅಧ್ಯಕ್ಷ ಕೋಟೆ ಕೃಷ್ಣ ಅವರಿಗೆ 5ನೇ ವಾರ್ಡ್‌ನಿಂದ ಮತ್ತೆ ಸ್ಪರ್ಧೆ ಮಾಡಲು ಟಿಕೆಟ್ ನೀಡುವಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಅಂದರೆ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಚಿಕ್ಕಮಗಳೂರು ನಗರ ಬಿಜೆಪಿ ಅಧ್ಯಕ್ಷ ಕೋಟೆ ರಂಗನಾಥ್ ಈ ವಾರ್ಡ್‌ನಿಂದ ಸ್ಪರ್ಧೆ ಮಾಡಲು ಮುಂದೆ ಬಂದಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋಟೆ ರಂಗನಾಥ್ ಅವರೇ ಈ ವಿಷಯವನ್ನು ಸ್ವತಹ ಹೇಳಿದರು. ಆದರೆ, ಹೆಸರು ಮಾತ್ರ ಅಧಿಕೃತವಾಗಿ ಪ್ರಕಟಗೊಂಡಿಲ್ಲ.
 ಕೋಟೆ ಕೃಷ್ಣ ಸ್ಪರ್ಧೆಯಿಂದ ಹಿಂದೆ ಸರಿಯುವ ಲಕ್ಷಣ ಕಾಣುತ್ತಿಲ್ಲ. ಕೋಟೆ ರಂಗನಾಥ್ ಅವರಿಗೆ ಪಕ್ಷದ ನಗರಾಧ್ಯಕ್ಷ ಸ್ಥಾನ ನೀಡಲಾಗಿದೆ. ಅವರ ಪತ್ನಿ ಭಾಗ್ಯ ರಂಗನಾಥ್ ಹಾಲಿ ಜಿಪಂ ಸದಸ್ಯರು. ಅದುದರಿಂದ ಕೋಟೆ ಕೃಷ್ಣ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
 5ನೇ ವಾರ್ಡ್‌ನಂತೆ ಇತರೆ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ರೀತಿಯ ಒಟ್ಟು 13 ವಾರ್ಡ್‌ಗಳಿವೆ. ಪರಿಸ್ಥಿತಿ ಎಷ್ಟೇ ಕಠಿಣವಾಗಿದ್ದರೂ ಶನಿವಾರದೊಳಗೆ ಬಿಜೆಪಿಯ ಅಂತಿಮ ಪಟ್ಟಿ ಪ್ರಕಟಗೊಳ್ಳಲೇಬೇಕು.  ಈಗಾಗಲೇ ತಮಗೆ ಟಿಕೆಟ್ ಸಿಗಲಿಲ್ಲ ಎಂದು ಬೇಸರಗೊಂಡು ಸುವರ್ಣ ಕೇಶವಮೂರ್ತಿ ಸೇರಿದಂತೆ ಹಲವರು ಕೆಜೆಪಿಗೆ ಹೋಗಿದ್ದಾರೆ. ಈಗ ಬಾಕಿ ಉಳಿದಿರುವ 13 ವಾರ್ಡ್‌ಗಳಲ್ಲಿ ಟಿಕೆಟ್ ಸಿಗದೆ ಇದ್ದವರು ಬೇರೆ ಪಕ್ಷಗಳ ಕದ ತಟ್ಟುವುದಂತೂ ಖಚಿತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.