ನಾಮಪತ್ರ ಸಲ್ಲಿಕೆಗೆ ಇಂದು ಕಡೆ ದಿನ
ಚಿಕ್ಕಮಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಫೆ.16 ರಂದು ಆರಂಭಗೊಂಡರು ಮೊದಲ ನಾಲ್ಕೈದು ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ನಾಮಪತ್ರಗಳು ಬಂದಿರಲಿಲ್ಲ. ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನವಾಗಿದ್ದರಿಂದ ಶುಕ್ರವಾರದಂದು ಚಿಕ್ಕಮಗಳೂರು ನಗರಸಭೆಗೆ 153, ಕೊಪ್ಪ ಪಟ್ಟಣ ಪಂಚಾಯ್ತಿಗೆ 32, ಶೃಂಗೇರಿಗೆ 20, ಮೂಡಿಗೆರೆ- 29, ಎನ್.ಆರ್.ಪುರ ಪಟ್ಟಣ ಪಂಚಾಯ್ತಿಗೆ 27, ಕಡೂರು ಪುರಸಭೆಗೆ 78, ಬೀರೂರು ಪುರಸಭೆಗೆ 51, ತರೀಕೆರೆ ಪುರಸಭೆಗೆ 74 ನಾಮಪತ್ರಗಳು ಬಂದಿವೆ.
ಮೆರವಣಿಗೆ: ನಾಮಪತ್ರ ಸಲ್ಲಿಕೆಗೆ ಇನ್ನು 24 ಗಂಟೆ ಮಾತ್ರ ಬಾಕಿ ಇದ್ದು, ಶುಕ್ರವಾರ ಬೆಳಿಗ್ಗೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತೆರೆದ ವಾಹನಗಳಲ್ಲಿ, ದ್ವಿಚಕ್ರ ವಾಹನಗಳಲ್ಲಿ ಚಿಕ್ಕಮಗಳೂರು ನಗರದಲ್ಲಿ ಮೆರವಣಿಗೆ ನಡೆಸಿದರು.
ಅವರ ಬೆಂಬಲಿಗರೊಂದಿಗೆ ಪಕ್ಷದ ಜೈಕಾರಗಳನ್ನು ಹಾಕುತ್ತಾ, ನಾಮಪತ್ರ ಸಲ್ಲಿಸಲು ಜಿಲ್ಲಾ ಪಂಚಾಯ್ತಿಯ ವಿವಿಧ ಇಲಾಖೆಗಳಲ್ಲಿ ತೆರೆದಿರುವ ಕೇಂದ್ರಗಳಿಗೆ ತೆರಳಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಜಿಲ್ಲಾ ಪಂಚಾಯ್ತಿಯ ಹೊರ ವಲಯದಲ್ಲಿ ಜನ ಸಾಗರ ನೆರೆದಿತ್ತು.
ಮೆರವಣಿಗೆಗೆ ಆನೆ: ಜಿಲ್ಲಾ ಪಂಚಾಯ್ತಿಯ ಮುಂಭಾಗದ ಕೆ.ಎಂ. ರಸ್ತೆಯಲ್ಲಿ ಬರುತ್ತಿದ್ದ ಮಠವೊಂದರ ಆನೆಯನ್ನು ನಗರಸಭೆಯ ಎರಡನೇ ವಾರ್ಡ್ ಕೆಜೆಪಿ ಅಭ್ಯರ್ಥಿ ಸಿ.ಸಿ. ಮಧು ಅವರು ಚುನಾವಣಾ ನಾಮಪತ್ರ ಸಲ್ಲಿಸುವ ಮೆರವಣಿಗೆಗೆ ಬಳಸಿಕೊಂಡರು.
ಉಮೇದುವಾರಿಕೆ ಸಲ್ಲಿಸಲು ವಾರ್ಡ್ವಾರು ಹಂಚಿಕೆ ಮಾಡಲಾಗಿದ್ದ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗಳು ಜನರಿಂದ ಭರ್ತಿಯಾಗಿದ್ದವು.
ಟಿಕೆಟ್ಗೆ ಭಾರಿ ಒತ್ತಡ: ಸ್ಥಳೀಯ ಸಂಸ್ಥೆಗಳಿಗೆ ಬರುವ ಮಾರ್ಚ್ 7 ರಂದು ಚುನಾವಣೆ ನಡೆಯಲಿದ್ದು, ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿತ್ತು.
ಬಿಜೆಪಿ ಮೊದಲ ಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿತ್ತು. ಆದರೆ, ಕಾಂಗ್ರೆಸ್ ಸೇರಿದಂತೆ ಇತರೆ ರಾಜಕೀಯ ಪಕ್ಷದವರು ಅಭ್ಯರ್ಥಿಗಳ ಪಟ್ಟಿಯನ್ನು ಬಹಿರಂಗ ಪಡಿಸಲಿಲ್ಲ.
ಮಾಹಿತಿ ಕೊರತೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ಚುನಾವಣೆ ನಡೆಯಲಿ ಅದರ ಬಗ್ಗೆ ಮಾಹಿತಿ ಕೈ ಸೇರುವುದು ತಡ ರಾತ್ರಿ. ಈಗ ನಡೆಯುತ್ತಿರುವ ಚುನಾವಣೆ ನಗರ ಸ್ಥಳೀಯ ಸಂಸ್ಥೆಗಳಿಗೆ, ನಾಮಪತ್ರ ಸಲ್ಲಿಸುವುದು ನಗರ ಪ್ರದೇಶದಲ್ಲಿ ಅದು ಮಧ್ಯಾಹ್ನ 3 ಗಂಟೆಯೊಳಗೆ. ಆದರೆ, ಈ ಕುರಿತ ಜಿಲ್ಲಾ ಚುನಾವಣಾ ಕಚೇರಿಗೆ ರಾತ್ರಿ 9 ಗಂಟೆಯಾದರೂ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಲಭ್ಯವಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

