ಚಿಕ್ಕಮಗಳೂರು

ಇದು ಹಕ್ಕಿಯಲ್ಲ... ಆದ್ರೂ ಹಾರ್ತೈತಲ್ಲಾ...

Published On :

ಮೋಹನ್ ಕುಮಾರ್
ಶಿವಮೊಗ್ಗ: ಇಂದು ಎಲ್ಲೆಲ್ಲೂ ಕಾಂಕ್ರಿಟ್ ಕಾಡು, ಗಗನವೇ ಕಾಣದಷ್ಟು ಕಟ್ಟಡಗಳು. ಇವುಗಳ ಅಬ್ಬರದ ಮಧ್ಯೆಯೇ ಕಳೆದು ಹೋಗಿದ್ದು ಗಾಳಿಪಟ ಕಲೆ. ಈ ಕಲೆ ಅಥವಾ ಸಂಸ್ಕೃತಿಯನ್ನು ಇಂದಿನ ಮಕ್ಕಳಿಗೆ ಮರು ಪರಿಚಯಿಸುವ ಸಣ್ಣದೊಂದು ಪ್ರಯತ್ನ ನಗರದಲ್ಲಿ ನಡೆದಿದೆ.
ರೋಟರಿ ಸೆಂಟರ್ ಕ್ಲಬ್, ಮಣ್ಣಿಯಣ್ಣನ್ ಸೋಷಿಯಲ್ ವೆಲ್‌ಫೇರ್ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಜಿಲ್ಲಾ ಸ್ಕೌಟ್ ಭವನದಲ್ಲಿ ಮಕ್ಕಳಿಗಾಗಿ ದೇಶದ ಹಳೆಯ ಕ್ರೀಡೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಎರಡು ದಿನಗಳ ಗಾಳಿಪಟ ತಯಾರಿಕೆ ಶಿಬಿರ ಹಮ್ಮಿಕೊಂಡಿದೆ.
ಅಲ್ಲಿ ಮಕ್ಕಳೆಲ್ಲರೂ ಕಾಗದ, ಗಮ್ಟೇಪ್, ಬಿದಿರು ಕಡ್ಡಿಗಳನ್ನು ಹಿಡಿದು ನಿಂತಿದ್ದರು. ಎತ್ತರಕ್ಕೆ ಹಾರುವ ಆ ಕಾಗದದ ಮೂಲಕ ಪರಿಸರ ರಕ್ಷಣೆ ಮಾಡಿ, ನೀರನ್ನು ಉಳಿಸಿ ಎಂದು ಸಮಾಜಕ್ಕೆ ಕೂಗಿ ಹೇಳಿಕೊಡಲಾಗುತ್ತಿತ್ತು.
ತಯಾರಿ ಹೇಗೆ? ಕಾರ್ಯಾಗಾರದಲ್ಲಿ ಸುಮಾರು 50 ಮಕ್ಕಳು ಪಾಲ್ಗೊಂಡಿದ್ದರು. ಗಾಳಿಪಟವನ್ನು ಹೇಗೆ ತಯಾರಿಸೋದು, ಸೂತ್ರ ಹೇಗೆ ಕಟ್ಟೋದು, ಅದನ್ನು ತಯಾರಿಸಲು ಏನೆಲ್ಲಾ ಬೇಕು ಎಂಬುವ ಅರಿಯುವ ಪ್ರಯತ್ನದಲ್ಲಿದ್ದರು. ಅಷ್ಟೇ ಅಲ್ಲದೇ, ಯಾವ ಯಾವ ರೀತಿಯ ಗಾಳಿಪಟಗಳನ್ನು ಮಾಡಬಹುದು, ಅದರ ತಂತ್ರಜ್ಞಾನವೇನು ಎಂದು ಅರಿವ ಜೊತೆಗೆ ಗಾಳಿಪಟಗಳು ಪರಿಸರ ಹಾಗೂ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗದಂತೆ ಹೇಗೆ ಆಕಾಶದಲ್ಲಿ ಹಾರಿಸಬೇಕು ಎಂಬುದನ್ನು ತಿಳಿಸುವ ಪ್ರಯತ್ನ ಅಲ್ಲಿ ನಡೆದಿತ್ತು.
ಮೊದಲು ಗಾಳಿಪಟ ಒಂದು ಕಲೆಯಾಗಿತ್ತು, ಪ್ರಸ್ತುತ ಈ ಕಲೆ ನಶಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳದ ಕೈಟ್‌ಲೈಫ್ ಫೌಂಡೇಷನ್ ತೆರೆದುಕೊಂಡಿದೆ. ಈ ಸಂಸ್ಥೆಯಲ್ಲಿ ಗಾಳಿಪಟಗಳನ್ನು ತಯಾರಿಸುವ ಬಗ್ಗೆ, ಅವುಗಳಿಂದ ಸಾಮಾಜಿಕ ಕಳಕಳಿ ತೋರಿಸುವ ರೀತಿ ತಿಳಿಸಲಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ರಾಜೇಶ್ ನಾಯರ್.
ಹಳೇ ಬೇರು ಹೊಸ ಚಿಗುರು: ಮುಂದಿನ ಕೆಲ ತಿಂಗಳಲ್ಲಿ ಜಿಲ್ಲೆಯಲ್ಲಿಯೂ ಕೈಟ್ಸ್‌ಲೈಫ್ ಫೌಂಡೇಷನ್‌ನ್ನು ಸ್ಥಾಪನೆ ಮಾಡಲಾಗುತ್ತದೆ. ಆಗ ಮತ್ತಷ್ಟು ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಮಕ್ಕಳಿಗೆ ಹಳೆಯ ಕಲೆಗೆ ಹೊಸ ಲೇಪನ ನೀಡಿ ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಎ.ವಿ. ರಾಜೇಶ್.
ಕಥಕ್ಕಳಿ, ಆಕ್ಟೋಪಸ್, ಗೊಂಬೆಗಳು ಹೀಗೆ ವಿವಿಧ ಚಿತ್ತಾರಗಳು ಗಾಳಿಪಟದಲ್ಲಿ ರೂಪುಗೊಳ್ಳುವ ಕಾರ್ಯದಲ್ಲಿ ಮಕ್ಕಳು ತಲ್ಲೀನರಾಗಿದ್ದರು. ತಾವು ಕಾಣದ ಅಪರೂಪದ ಖುಷಿಯನ್ನು ಅಲ್ಲಿ ಸಂಭ್ರಮಿಸುತ್ತಿದ್ದರು. ಈ ಮೂಲಕ ಹೊಸ ಪ್ರಪಂಚಕ್ಕೆ ತೆರೆದುಕೊಂಡಿದ್ದರು.
ಸುಮಾರು 500 ವರ್ಷಗಳ ಹಿಂದಿಯೇ ಹುಟ್ಟಿಕೊಂಡ ಗಾಳಿಪಟ ಸಂಸ್ಕೃತಿ ಜನ ಮರೆತಿದ್ದಾರೆ. ಸಂಕ್ರಾತಿ ಹಬ್ಬದ ಆಸುಪಾಸಿನಲ್ಲಿ ಹಾರಿಸುವ ಗಾಳಿಪಟಗಳು ಇಂದು ಸಂಪೂರ್ಣ ಮರೆಯಾಗಿವೆ. ಪ್ರಸ್ತುತ ಕಂಪ್ಯೂಟರ್, ಟಿವಿ, ಮತ್ತಿತರ ತಂತ್ರಜ್ಞಾನದಿಂದ ಮಕ್ಕಳು ಗಾಳಿಪಟಗಳಂತಹ ಆರೋಗ್ಯಕರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಕಡಿಮೆ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಪರೂಪದ ಈ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.