ಚಿಕ್ಕಮಗಳೂರು

ಉತ್ಪಾದಕರಿಗೆ ತರಬೇತಿ ಅಗತ್ಯ: ಡಾ. ಶಂಕರ್

Published On :

ಚಿಕ್ಕಮಗಳೂರು: ಉತ್ಪಾದಕರಿಗೆ ಹೊಸ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಿ, ಅವರ ಜ್ಞಾನ ವೃದ್ಧಿಸಬೇಕಾದ ಅವಶ್ಯಕತೆ ಇದೆ ಎಂದು ಕೊಪ್ಪದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ. ಶಂಕರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌ನ ಸಂಯುಕ್ತ ಆಶ್ರಯದಲ್ಲಿ ಕೊಪ್ಪದ ಲ್ಯಾಂಪ್ಸ್ ಸಹಕಾರ ಸಂಘದ ಸದಸ್ಯರುಗಳಿಗೆ ಇತ್ತೀಚೆಗೆ ಕೊಪ್ಪ ತಾಲೂಕಿನ ಮೆಣಸಿನಹಾಡ್ಯ ಗ್ರಾಮದ ಗಿರಿಜನ ಆಶ್ರಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಆದಾಯ ಉತ್ಪನ್ನ ತರಬೇತಿ ಹಾಗೂ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಿರಿ ಜನರು ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಲ್ಯಾಂಪ್ಸ್ ಸಹಕಾರ ಸಂಘಕ್ಕೆ ನೀಡಿ ಉತ್ತಮ ಆದಾಯ ಗಳಿಸಲು ಅನುಕೂಲವಾಗುವಂತೆ ಮುರುಗಹುಳಿ ಒಣಗಿಸಲು ಡ್ರೈಯರನ್ನು ಮೆಣಸಿನಹಾಡ್ಯದಲ್ಲಿ ಸ್ಥಾಪಿಸಲಾಗಿದ್ದು, ಇದರ ಉಪಯೋಗ ಪಡೆದುಕೊಳ್ಳಬೇಕು ಹಾಗೂ ಮಲೆನಾಡಿನ ಗಿರಿಜನರ ಆದಾಯ ಹೆಚ್ಚಿಸಲು ಕಿರು ಅರಣ್ಯ ಉತ್ಪನ್ನಗಳ ಮೌಲ್ಯ ವರ್ಧನೆಗಾಗಿ ಇಂತಹ ತರಬೇತಿಗಳು ಅತಿ ಮುಖ್ಯ ಎಂದರು.
ಜ್ಞಾನ ವೃದ್ಧಿಸಿಕೊಳ್ಳಿ: ಒಬ್ಬ ವ್ಯಕ್ತಿಗಿಂತ ಗುಂಪಿನಲ್ಲಿ ಕೆಲಸ ಮಾಡುವುದು ಸುಲಭ. ಅದೇ ರೀತಿ ಅನೇಕ ಗುಂಪುಗಳು ಸೇರಿದರೆ ಅದಕ್ಕೆ ಒಂದು ಶಕ್ತಿ ಬರುತ್ತದೆ. ಇದರಿಂದ ಉತ್ತಮ ಕೆಲಸ ಮಾಡಬಹುದು. ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳು ಚೆನ್ನಾಗಿ ಕೆಲಸ ಮಾಡಬೇಕು. ಆಗ ಸಂಘವು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಂತ್ರಜ್ಞಾನ ಬೆಳೆಯುತ್ತಿದ್ದು, ಅದಕ್ಕೆ ಹೊಂದಿಕೊಂಡಂತೆ ಹೊಸ ಹೊಸ ವಿಚಾರಗಳ ಬಗ್ಗೆ ತರಬೇತಿ ಪಡೆದು, ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಇದು, ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವೂ ಕೂಡ ಆಗಿದೆ ಎಂದು ಹೇಳಿದರು.
ಆರ್ಥಿಕ ಅಭಿವೃದ್ಧಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್ ಮಾತನಾಡಿ, ಸಹಕಾರ ಪದ್ಧತಿ ಪೂರ್ವಜರಿಂದ ಬಂದ ಬಳುವಳಿಯಾಗಿದ್ದು, ಅದನ್ನು ಇಂದು ಸಹಕಾರ ಕಾನೂನು ನಿಯಮಗಳಡಿಯಲ್ಲಿ ಸಂಘ ರಚಿಸಿಕೊಂಡು ನಡೆಸುತ್ತಿದ್ದೇವೆ. ಗಿರಿಜನರು ಅರಣ್ಯ ಉತ್ಪನ್ನಗಳಾದ ಮುರುಗಹುಳಿ, ಜೇನು ಸಾಕಾಣೆ, ಸೀಗೇಕಾಯಿ, ರಾಮಪತ್ರೆ, ಅಂಟುವಾಳ, ಗಂಧದ ಬೀಜ ಸಂಗ್ರಹಿಸಿ ಲ್ಯಾಂಪ್ಸ್ ಮುಖಾಂತರ ಮಾರಾಟ ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.
ಪ್ರಾತ್ಯಕ್ಷತೆ: ಉಪನ್ಯಾಸಕರಾಗಿ ಆಗಮಿಸಿದ್ದ ಸಹಕಾರ ಸಂಘಗಳ ಉಪ ನಿಬಂಧಕ ಕೆ.ಎಂ. ಶಿವಕುಮಾರಸ್ವಾಮಿ ಅವರು ಆದಾಯ ಉತ್ಪನ್ನ ಶಿಬಿರದ ಉದ್ದೇಶ ಹಾಗೂ ಇಲಾಖೆಯಿಂದ ಗಿರಿಜನರಿಗೆ ಸಿಗುವ ಉತ್ತೇಜನ ಹಾಗೂ ರಿಯಾಯಿತಿಗಳು, ಯಶಸ್ವಿನಿ ಯೋಜನೆ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎಸ್. ರಿಯಾಜ್ ಅಹಮದ್ ಅವರು ಸೋಪು, ಪಿನಾಯಿಲ್, ಡಿಟರ್ಜೆಂಟ್ ಪೌಡರ್ ತಯಾರಿಕೆ ಬಗ್ಗೆ ಪ್ರಾತ್ಯಕ್ಷತೆ ನೀಡಿದರು.
ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಅವರು ಆಯುರ್ವೇದಿಕ್ ಚಿಕಿತ್ಸಾ ಪದ್ಧತಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ನಿರ್ದೇಶಕ ಕೆ.ಬಿ. ನಾರಾಯಣನಾಯ್ಕ, ಲ್ಯಾಂಪ್ಸ್‌ನ ಉಪಾಧ್ಯಕ್ಷ ಕೆ.ಎಸ್. ಚಂದ್ರಪ್ಪನಾಯ್ಕ, ನಿರ್ದೇಶಕರಾದ ಜಿ.ವಿ. ಕೆಂಪೇಗೌಡ ಉಪಸ್ಥಿತರಿದ್ದರು. ಲ್ಯಾಂಪ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಸ್. ರೈ ಸ್ವಾಗತಿಸಿದರು. ಸಹಾಯಕ ಯೋಜನಾಧಿಕಾರಿ ಎಚ್.ಡಿ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಲೆಕ್ಕಿಗರಾದ ನಾಗಭೂಷಣ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.