ಬೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ
ದಾವಣಗೆರೆ: ಗ್ರಾಮೀಣ ಭಾಗಕ್ಕೆ ಸತತ 12 ತಾಸು ವಿದ್ಯುತ್ ಪೂರೈಸಲು ಉದಾಸೀನ ಮಾಡುತ್ತಿರುವ ಬೆಸ್ಕಾಂ ನಿರ್ಲಕ್ಷ್ಯ ಖಂಡಿಸಿ ಚನ್ನಗಿರಿ ತಾಲೂಕಿನ ನೂರಾರು ರೈತರು ಸುಮಾರು 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮತ್ತಿತರೆ ವಾಹನಗಳಲ್ಲಿ ದಾವಣಗೆರೆಯಲ್ಲಿ ಬೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.
ನಗರದ ವಿದ್ಯಾರ್ಥಿ ಭವನ ಬಳಿಯ ಬೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ನೂರಾರು ರೈತರು, ಎರಡು ದಿನಗಳ ಹಿಂದೆ ನಡೆಸಿದ್ದ ಹೋರಾಟಕ್ಕೆ ಬೆಸ್ಕಾಂ ಸ್ಪಂದಿಸದ ಹಿನ್ನಲೆಯಲ್ಲಿ ಬೆಸ್ಕಾಂ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರಿಗೆ ಉಪಯೋಗವಿಲ್ಲ: ಇದೇ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ತೇಜಸ್ವಿ ವಿ. ಪಟೇಲ್, ನಿರಂತರ ಜ್ಯೋತಿ ಹೆಸರಿನಲ್ಲಿ ಗ್ರಾಮೀಣ ಭಾಗಕ್ಕೆ ನಿರಂತರ ವಿದ್ಯುತ್ ಪೂರೈಸುವ ನಿರ್ಧಾರ ಸ್ವಾಗತಿಸುತ್ತೇವೆ. ಅದರಿಂದ ರೈತರಿಗೆ ಯಾವುದೇ ಉಪಯೋಗವಿಲ್ಲ. ಸತತ 12 ಗಂಟೆ ಸಿಂಗಲ್ ಫೇಸ್ ವಿದ್ಯುತ್ ನೀಡಿದರೆ, ಪಂಪ್ಸೆಟ್ಗೆ ಸಮರ್ಪಕ ವಿದ್ಯುತ್ ಸಿಗುವುದಿಲ್ಲ ಎಂಬುದನ್ನು ಸರ್ಕಾರ ಅರಿಯಲಿ ಎಂದರು.
ನಿರಂತರ ಜ್ಯೋತಿಯಡಿ ಆಯ್ದ ಗ್ರಾಮಗಳಿಗೆ ಸರ್ಕಾರ ವಿದ್ಯುತ್ ಪೂರೈಸುವುದಾಗಿ ಕುಂಟು ನೆಪ ಹೇಳುತ್ತಾ, ರಾತ್ರಿ 3 ಗಂಟೆ, ಹಗಲು 3 ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತಿದೆ. ಪ್ರತಿಬಾರಿ ಹೊಲ, ಗದ್ದೆಗೆ ನೀರು ಹಾಯಿಸಿದ್ದ ಭಾಗಕ್ಕಷ್ಟೇ ನೀರು ಹೋಗಿ, ಉಳಿದ ಭಾಗಕ್ಕೆ ನೀರು ಸಿಗುತ್ತಿಲ್ಲ. ಇಷ್ಟು ನೀರಿಗಷ್ಟೇ ಬೆಳೆಯುವ ಬೆಳೆಗೆ ಸರ್ಕಾರವೇ ಶಿಫಾರಸ್ಸು ಮಾಡಲಿ ಎಂದು ಲೇವಡಿ ಮಾಡಿದರು.
ಗಿಳಿಪಾಠ: ವಿದ್ಯುತ್ ಪೂರೈಸುವ ವಿಚಾರ ತಮ್ಮ ಕೈಯಲ್ಲಿಲ್ಲ ಎಂಬಂತೆ ಬೆಸ್ಕಾಂ ಅಧಿಕಾರಿಗಳು ಗಿಣಿಪಾಠ ಒಪ್ಪಿಸುತ್ತಾರೆ. ರೈತರ ಬೇಡಿಕೆಗೆ ಸ್ಪಂದಿಸಲಾಗದಿದ್ದರೆ ಬೆಸ್ಕಾಂ ಅಧೀಕ್ಷಕ ಅಧಿಕಾರಿಗಳು ಸಾಮೂಹಿಕ ರಜೆ ಮೇಲೆ ತೆರಳಲಿ. ಕುಂಟುನೆಪ ಹೇಳಿ ನುಣುಚಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಇಲ್ಲಿಗೆ ಬಂದು, ನಮ್ಮ ಬೇಡಿಕೆ ಬಗ್ಗೆ ತಮ್ಮ ನಿಲುವು ಪ್ರಕಟಿಸಲಿ ಎಂದು ತಾಕೀತು ಮಾಡಿದರು.
ಬೆಸ್ಕಾಂ ಅಧೀಕ್ಷಕ ಅಭಿಯಂತರ ಎಸ್. ಕೋಟೆಪ್ಪ ಮಾತನಾಡಿ, ರೈತರ ಸಮಸ್ಯೆ, ಬೇಡಿಕೆ ಕುರಿತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದಿದ್ದೇವೆ. ರಾಜ್ಯದ ಇತರೆ ಭಾಗಕ್ಕೂ, ನಮ್ಮ ಭಾಗದ ವ್ಯತ್ಯಾಸದ ಬಗ್ಗೆಯೂ ತಿಳಿಸಿದ್ದೇವೆ. ಎಂಡಿ ಸರ್ಕಾರದೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ರೈತರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.
ಹೋರಾಟ: ಅದಕ್ಕೆ ಮಾತಿಗೆ ಕಿವಿಗೊಡದ ರೈತರು ಕಚೇರಿ ಆವರಣದಲ್ಲಿ ಮಧ್ಯಾಹ್ನದ ಊಟಕ್ಕೆ ಸಿದ್ಥತೆ ಮಾಡಿ, ಮೊಕ್ಕಾಂ ಹೂಡಿದರು. ಪೊಲೀಸ್ ಅಧಿಕಾರಿಗಳು, ಬೆಸ್ಕಾಂ ಅಧೀಕ್ಷಕ ಅಭಿಯಂತರರು ಮಾಡಿದ ಮನವಿಗೆ ರೈತರು ಕಿವಿಗೊಡಲಿಲ್ಲ. ಸಮರ್ಪಕ ವಿದ್ಯುತ್ ಪೂರೈಸುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ರೈತರು ಸಂಜೆ ಹೋರಾಟ ಮುಂದುವರಿದಿಸಿದ್ದರು.
ಮುಖಂಡರಾದ ವಾಸನ ಓಂಕಾರಪ್ಪ, ಮರಡಿ ನಾಗಪ್ಪ, ಬಸವರಾಜಪ್ಪ, ಕಾಂತರಾಜ, ಚಂದ್ರಪ್ಪ, ಉಮಾಬಾಯಿ, ಗ್ರಾಪಂ ಅಧ್ಯಕ್ಷ ಗಿರೀಶನಾಯ್ಕ, ರಾಜು, ಚಿರಡೋಣಿ ಚಂದ್ರಪ್ಪ, ಪೂಜಾರ ಅಂಜಿನಪ್ಪ, ಎನ್.ಕೆ. ಬಸಪ್ಪ, ಕಾರಿಗನೂರು ಕೊಂಪೇರ ಬಸವರಾಜಪ್ಪ, ಜಿ.ಟಿ. ಮಹರುದ್ರಪ್ಪ, ಮಿಲ್ಟ್ರಿ ಬಸವರಾಜಯ್ಯ, ಪಿ.ವಿ. ವಾಗೀಶ, ಎಚ್.ಎಸ್. ವೀರಪ್ಪ, ಬೆಳಲಗೆರೆ ಡಿಎಸ್ಸೆಸ್ ದೇವೇಂದ್ರಪ್ಪ, ಕಾರಿಗನೂರು ಎ.ವಿ. ತಿಪ್ಪೇಸ್ವಾಮಿ ಮತ್ತಿತರರು ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

