ಚಿಕ್ಕಮಗಳೂರು

ಪ್ರಕೃತಿ ವಿಕೋಪ ನಿರ್ವಹಿಸಲು ಸಮಿತಿ ರಚನೆ

Published On :

ಕ.ಪ್ರ.ವಾರ್ತೆ ನ.ರಾ.ಪುರ  ಜು.6
ತಾಲೂಕಿನಲ್ಲಿ ವಾಡಿಕೆಗಿಂತ ಈಗಾಗಲೇ 300 ಮಿ.ಮೀ. ಮಳೆ ಹೆಚ್ಚಾಗಿದ್ದು, ಪ್ರಕೃತಿ ವಿಕೋಪ ನಿರ್ವಹಿಸಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ರಚಿಸಲಾಗಿದೆ ಎಂದು ಮಾಜಿ ಸಚಿವ  ಡಿ.ಎನ್. ಜೀವರಾಜ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಅಧಿಕ ಮಳೆ ಬೀಳುತ್ತಿದ್ದು, ನರಾ ಪುರ ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದನದ ಕೊಟ್ಟಿಗೆ ಬಿದ್ದಿದೆ. ರಸ್ತೆಗಳು ಹಾಳಾಗಿದೆ. ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಲಾಗಿದೆ. ಪ್ರತಿದಿನ ನಿರ್ವಹಣಾ ಸಮಿತಿ ಸಭೆ ಸೇರಿ ತಾಲೂಕಿನ ಮಳೆ, ಪ್ರವಾಹ, ಪ್ರಕೃತಿ ವಿಕೋಪದ ಬಗ್ಗೆ ಚರ್ಚೆ ನಡೆಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಮೃತರಿಗೆ ರು. 1.50 ಲಕ್ಷ ಪರಿಹಾರ: ಮಾಗುಂಡಿ ಸಮೀಪ ಭದ್ರಾ ನದಿಯಲ್ಲಿ ಒಬ್ಬರು ಮಳೆಯಿಂದ ತೇಲಿ ಹೋಗಿದ್ದಾರೆ. ಬಾಳೆಹೊನ್ನೂರು ಸಮೀಪ ಅಡಿಕೆ ಮರದಿಂದ ಒಬ್ಬರು ಬಿದ್ದು ಮೃತಪಟ್ಟಿದ್ದಾರೆ. ನಾನು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಇಬ್ಬರಿಗೂ ತಲಾ ರು. 1.50 ಲಕ್ಷದಂತೆ ಪರಿಹಾರ ನೀಡಲಾಗುವುದು ಎಂದು ಡಿ.ಎನ್. ಜೀವರಾಜ್ ತಿಳಿಸಿದರು.
ಶೃಂಗೇರಿ ಕ್ಷೇತ್ರದ ಕೊಪ್ಪ, ಶೃಂಗೇರಿ ಹಾಗೂ ನರಸಿಂಹರಾಜಪುರ ಸೇರಿ ಮೂರೂ ತಾಲೂಕುಗಳು ಈ ವರ್ಷ ಅಧಿಕ ಮಳೆಯಿಂದ ಹಾನಿಯಾಗಿದೆ. ತುಂಗಾ ಹಾಗೂ ಭದ್ರಾ ನದಿಯಲ್ಲಿ ಪ್ರವಾಹ ಬಂದು ಹೆಚ್ಚು ಹಾನಿ ಉಂಟಾಯಿತು.
ಅನುದಾನಕ್ಕೆ ಮನವಿ: ಈ ಬಗ್ಗೆ ಮುಖ್ಯಮಂತ್ರಿ, ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾನು ಪತ್ರ ಬರೆದಿದ್ದು, ಮೊದಲ ಹಂತವಾಗಿ ಪ್ರತಿ ತಾಲೂಕಿಗೆ ರು. 2 ಕೋಟಿಯಂತೆ ಹಣ ಬಿಡುಗಡೆ ಮಾಡಲು ಮನವಿ ಮಾಡಿದ್ದೇನೆ ಎಂದು ಹೇಳಿದರು.
ಒಂದು ತಿಂಗಳ ಮಳೆಯ ಅಬ್ಬರಕ್ಕೆ ಮಲೆನಾಡು  ತೊಳೆದು ಹೋದಂತಾಗಿದೆ. ಉತ್ತಮ ಮಳೆಯಿಂದ ರಾಜ್ಯದ ಡ್ಯಾಂ ಗಳು ತುಂಬಿದೆ. ಡ್ಯಾಂ ತುಂಬಿದ ಸಂತೋಷದ ಕ್ಷಣದಲ್ಲಿ ಮಲೆನಾಡು ಭಾಗದಲ್ಲಿ ಆದ ಹಾನಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳು ತಕ್ಷಣ ಶೃಂಗೇರಿ ಕ್ಷೇತ್ರಕ್ಕೆ ರು. 6 ಕೋಟಿ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು.     
ಬೋಟ್ ಅವಶ್ಯಕ: ಭಾರಿ ಮಳೆ ಬಂದು ಪ್ರವಾಹ ಉಂಟಾದಾಗ ಬೋಟ್ ಅವಶ್ಯಕತೆ ಇದ್ದು, ಈ ಬಗ್ಗೆ ನರಸಿಂಹರಾಜಪುರ ತಾಲೂಕು ಆಡಳಿತ ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವಂತೆ ಸೂಚಿಸಿದ್ದೇನೆ. ಜಿಲ್ಲಾ ಕೆಡಿಪಿ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಿದ್ದೇನೆ ಎಂದು ಅವರು ತಿಳಿಸಿದರು.
ತಾಲೂಕಿನ ಸೌತಿಕೆರೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ಶಾಲೆ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಟ್ಟಡದ ಗುಣ ಮಟ್ಟ ಸರಿಯಾಗಿಲ್ಲ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಕುದುರೆಗುಂಡಿ ಸರ್ಕಾರಿ ವಸತಿ ಗೃಹ ಸೋರುತ್ತಿರುವುದನ್ನು ಪ್ರಸ್ತಾಪಿಸಿದ ಶಾಸಕರು, ಈ ಬಗ್ಗೆ ಈ ಹಿಂದೆಯೇ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದೆ. ಮುಂದಿನ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶೃಂಗೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ನೀಲೇಶ್, ಕಸಬಾ ಹೋಬಳಿ ಅಧ್ಯಕ್ಷ ಎಚ್.ಎಂ.ಮನು, ಜಿಪಂ ಸದಸ್ಯೆ ಸುಜಾತ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.