ಚಿಕ್ಕಮಗಳೂರು

ರಾಜ್ಯಪಾಲರ ಹುದ್ದೆ ದುರ್ಬಳಕೆ: ಟೀಕೆ

Published On :

ಚಿಕ್ಕಮಗಳೂರು: ಕೇಂದ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ರಾಜ್ಯಪಾಲರ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ.
ಅಕ್ರಮ- ಸಕ್ರಮ ವಿಧೇಯಕಕ್ಕೆ ಇದೀಗ ರಾಜ್ಯಪಾಲರು ಅಂಕಿತ ಹಾಕಿರುವ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ರಾಜ್ಯಪಾಲರದ್ದು, ಸಾಂವಿಧಾನಿಕ ಹುದ್ದೆ. ಆದರೆ, ಇದು, ಪಕ್ಷ ರಾಜಕಾರಣದ ಕೇಂದ್ರವಾಗುತ್ತಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷ ಈ ಸಾಂವಿಧಾನಿಕ ಹುದ್ದೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ, ಚರ್ಚೆ ಬಹುದಿನಗಳಿಂದ ನಡೆಯುತ್ತಿದೆ. ಇದೀಗ ರಾಜ್ಯಪಾಲರು ಅಕ್ರಮ- ಸಕ್ರಮಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ತೀರ್ಮಾನ ನೋಡಿದರೆ ಪಕ್ಷ  ರಾಜಕಾರಣ ಮಾಡಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಂತಿದೆ.
ರಾಜ್ಯಪಾಲರ ಡಬ್ಬಲ್ ಗೇಮ್: ಬಿಜೆಪಿ ಅಧಿಕಾರದ ಅವಧಿಯಲ್ಲಿ ಅಕ್ರಮ- ಸಕ್ರಮ ವಿಧೇಯಕಕ್ಕೆ ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಚರ್ಚಿಸಿ, ಸಿದ್ಧಪಡಿಸಿದ್ದ ಮಸೂದೆಯನ್ನು ಅಂಕಿತ ಹಾಕಲು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು. ಆ ಸಂದರ್ಭದಲ್ಲಿ ಅವರು, ಈ ಮಸೂದೆಯ ಬಗ್ಗೆ ಸಾರ್ವಜನಿಕವಾಗಿ ಟೀಕೆ ಮಾಡಿದ್ದರು. ರಿಯಲ್ ಎಸ್ಟೇಟ್‌ಗೆ ಅವಕಾಶ ಮಾಡಿ, ಸಾರ್ವಜನಿಕರ ಆಸ್ತಿ ಲೂಟಿ ಮಾಡಲಾಗುತ್ತಿದೆ ಎಂದು ಹೇಳಿ, ಇದಕ್ಕೆ ಸಹಿ ಹಾಕುವುದಿಲ್ಲವೆಂದು ಹೇಳಿದ್ದರು. ಆದರೆ, ಇದೀಗ ಅದೇ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈಗ ಅವರಿಗೆ ಈ ಮಸೂದೆ ಒಳ್ಳೆಯದೆಂದು ಕಂಡಿದೆ.
ಆಳುವವರು ಬದಲಾವಣೆ ಆಗಿರುವ ಪರಿಣಾಮವೋ ಅಥವಾ ಈಗ ರಾಜ್ಯಪಾಲರಿಗೆ ಜ್ಞಾನೋದಯವಾಗಿದಿಯೋ ಅಥವಾ ಇನ್ಯಾರ ಪ್ರಭಾವದಿಂದ ಈ ಕೆಲಸ ಮಾಡಲಾಗಿದಿಯೋ ಎಂಬುದಕ್ಕೆ ಜನರಿಗೆ  ತಿಳಿಸಬೇಕಾದ ಜವಬ್ದಾರಿ ರಾಜ್ಯಪಾಲರ ಮೇಲಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ 16 ರಾಜ್ಯಗಳಲ್ಲಿ ಗೋ ಹತ್ಯೆ ಕಾಯ್ದೆ ಜಾರಿಯಲ್ಲಿದೆ. ಕರ್ನಾಟಕ ರಾಜ್ಯದಲ್ಲೂ ಗೋ ಹತ್ಯೆ ನಿಷೇಧದ ಮಸೂದೆ ಸಿದ್ದಪಡಿಸಿ ಅಂಕಿತಕ್ಕೆ ರಾಜ್ಯಪಾಲರಿಗೆ ಕಳುಹಿಸಿದಾಗ ಆಗ ಅವರು ವಾಪಸ್ ಕಳುಹಿಸಿದ್ದರು ಎಂದ ಸಿ.ಟಿ. ರವಿ, ರಾಜಕೀಯ ಪಕ್ಷ ಹೇಳಿದಂತೆ ಕೇಳುವುದು ರಾಜ್ಯಪಾಲರಾಗಬಾರದು. ಅದುದರಿಂದ ರಾಜ್ಯಪಾಲರ ನೇಮಕಕ್ಕೆ ಪಾರದರ್ಶಕ ನೀತಿ ರೂಪಿಸಬೇಕು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.